ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಹೈಕೋರ್ಟ್‌ನಲ್ಲಿ ನಿನ್ನೆಯಿಂದ ವಿಚಾರಣೆ ನಡೆಯುತ್ತಿದ್ದ ಹಿಜಾಬ್ ವಿವಾದವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿರುವ ಹಿರಿಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಪ್ರಕರಣದಲ್ಲಿ ಹಲವು ವಿಚಾರಗಳು ಗೊಂದಲದಲ್ಲಿವೆ. ಹಲವು ಪ್ರಶ್ನೆಗಳು ಎದ್ದಿವೆ. ಹೀಗಾಗಿ, ಹೆಚ್ಚಿನ ವಿಚಾರಣೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿಸ್ತೃತ ಪೀಠಕ್ಕೆ ಇದನ್ನು ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುತ್ತಿದ್ದೇನೆ ಎಂದರು.
ಇದು ತುರ್ತು ಪರಿಹರಿಸಬೇಕಾದ ವಿಚಾರವಾದ್ದರಿಂದ ಮುಖ್ಯನ್ಯಾಯಮೂರ್ತಿಗಳಿಗೆ ತತಕ್ಷಣವೇ ದಾಖಲೆಗಳನ್ನು ಸಲ್ಲಿಸಲು ಹೈಕೋರ್ಟ್ ರಿಜಿಸ್ಟಾರ್ ಅವರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ಪೀಠದಲ್ಲಿ ಯಾರೆಲ್ಲಾ ನ್ಯಾಯಾಧೀಶರು ಇರಬೇಕು ಎಂಬುದನ್ನು ಮುಖ್ಯನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆ. ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವೇನು?
ಪರೀಕ್ಷಾ ಸಮಯವಾದ್ದರಿಂದ ಶಾಲೆಗಳು ಎಂದಿನಂತೆ ನಡೆಯಬೇಕಿದೆ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈಗ ಹೇಗಿದೆಯೋ ಹಾಗೆಯೇ ಬಿಟ್ಟು ಬಿಡಿ. ಎರಡು ತಿಂಗಳು ಈಗಿನಂತೆಯೇ ಬಿಟ್ಟರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಸಮವಸ್ತ್ರದ ಕುರಿತಾಗಿ ನೋಡಿಕೊಳ್ಳಬಹುದು. ಸದ್ಯ ಕಡೆಯ ಪಕ್ಷ ೨ ತಿಂಗಳಿಗೆ ಮಧ್ಯಂತರ ಆದೇಶ ನೀಡಿ ಎಂದು ಅರ್ಜಿದಾರರ ಪರ ವಕೀಲ ಹೆಗಡೆ ವಾದಿಸಿದ್ದಾರೆ.
ಅಲ್ಲದೇ, ಮುಂಬೈ, ಮದ್ರಾಸ್ ಹಾಗೂ ಕೇರಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ. ಇನ್ನು, ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಮತ್ತೊಬ್ಬ ವಕೀಲ ದೇವದತ್ ಕಾಮತ್, ಪ್ರಕರಣ ವಿಸ್ತೃತ ಪೀಠಕ್ಕೆ ಹೋಗಲಿ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರಲು ಅನುಮತಿ ನೀಡಿ. ನಮಗೆ ಕೋರ್ಟ್ ಮೇಲೆ ನಂಬಿಕೆ ಇದೆ ಎಂದು ವಾದ ಮಂಡಿಸಿದ್ದಾರೆ
ಇನ್ನು, ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ನಾವದಗಿ ಅವರು, ಈ ವಿಚಾರ ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಈ ಉದ್ದೇಶದಿಂದ ಆದಷ್ಟು ಶೀಘ್ರ ನ್ಯಾಯಾಲಯ ತೀರ್ಮಾನ ಘೋಷಿಸುವುದು ಉತ್ತಮ. ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾದರೆ ಸರ್ಕಾರದ್ದೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಅಲ್ಲದೇ ಪ್ರಮುಖವಾಗಿ, ಇಲ್ಲಿ ಸಮವಸ್ತ್ರದ ಕುರಿತಾಗಿ ರಾಜ್ಯ ಸರ್ಕಾರದ ಆದೇಶವನ್ನೇ ಈ ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ. ಇವರ ಅರ್ಜಿಯಲ್ಲೇ ತಪ್ಪಿದೆ. ಕಾಲೇಜಿನ ಸಮವಸ್ತ್ರ ನೀತಿಯನ್ನು ಮಕ್ಕಳು ಶಾಲಾ-ಕಾಲೇಜಿಗೆ ಬರಲಿ, ಪಾಠ ಕೇಳಲಿ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹಲವು ನ್ಯಾಯಾಲಯದ ತೀರ್ಪುಗಳು ಹೇಳಿವೆ. ಇಂತಹ ಸಂದರ್ಭದಲ್ಲಿ ತರಗತಿಯಲ್ಲಿ ಹಿಜಾಬ್ ಹಾಕುತ್ತೇವೆ ಎನ್ನುವುದು ಪೂರ್ವಾಗ್ರಹ ಪೀಡಿತದಿಂದ ಕೂಡಿದೆ ಎಂದು ವಾದ ಮಂಡಿಸಿದರು.
ಅಲ್ಲದೇ, ಹಿಜಾಬ್ ವಿವಾದದ ಕುರಿತಾಗಿ ನ್ಯಾಯಾಲಯ ಮಧ್ಯಂತರ ತೀರ್ಪು ನೀಡುವುದುನ್ನು ಎಜಿ ಅವರು ವಿರೋಧಿಸಿದ್ದಾರೆ.
ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ನಾವು ಶಾಲೆಗೆ ಹೋಗುವಾಗ ಸಮವಸ್ತ್ರ ಒಂದೇ ಬಣ್ಣದ್ದಾಗಿತ್ತು. ಆದರೆ, ಈಗ ಇದೇ ವಿವಾದವಾಗಿದೆ. ವಾದ ವಿವಾದ ಆಲಿಸಿದ ವೇಳೆ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರವಾದ್ದರಿಂದ ಇದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಒಳಿತು ಎಂದು ಚಿಂತಿಸುತ್ತಿದ್ದೇವೆ ಎಂದರು.
ಆದರೆ, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ವಕೀಲರು, ನಮಗೆ ಘನ ನ್ಯಾಯಾಲಯದ ಬಗ್ಗೆ ನಂಬಿಕೆಯಿದೆ. ಪ್ರಕರಣದ ಆಳಕ್ಕೆ ಹೋದರೆ ಕಕ್ಷಿದಾರರ ಬಗ್ಗೆ ಮಾತನಾಡಬೇಕಾಗುತ್ತದೆ. ವಿಸ್ತೃತ ಪೀಠಕ್ಕೆ ವರ್ಗಾವಣೆ ಬೇಡ. ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆದಷ್ಟು ಶೀಘ್ರ ಇಲ್ಲಿಯೇ ತೀರ್ಪು ನೀಡಿ ಎಂದು ಮನವಿ ಮಾಡಿದರು.
ಶಾಲೆಗಳನ್ನು ಎಂದಿನಿಂದ ಆರಂಭ ಮಾಡುತ್ತೀರಿ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಅವರು, ಸೋಮವಾರದಿಂದ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇನ್ನು ಆಡಳಿತ ಮಂಡಳಿಗಳ ಪರವಾಗಿ ವಾದ ಮಂಡಿಸಿದ ವಕೀಲ ಸಜನ್ ಪೂವಯ್ಯ, ಸಮವಸ್ತ್ರದ ಕುರಿತಾಗಿ ಆಡಳಿತ ಮಂಡಳಿ ಪ್ರತಿ ವರ್ಷ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮವಸ್ತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿರುತ್ತದೆ. ಈಗಿನ ಸಮವಸ್ತ್ರ ಹೇಗಿರಬೇಕು ಎಂಬುದು ಕಳೆದ ವರ್ಷವೇ ನಿರ್ಧಾರವಾಗಿದೆ. ಈ ವರ್ಷವೂ ಅದನ್ನೇ ಪಾಲಿಸಲಾಗುತ್ತಿದೆ. ಸರ್ಕಾರ ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಸರ್ಕಾರ ಬದಲಾಯಿಸಿದೆ ಎಂದು ದೂರುತ್ತಿದ್ದಾರೆ. ಅಲ್ಲದೇ, ಈ ವಿದ್ಯಾರ್ಥಿನಿಯರು ಇಷ್ಟು ದಿನ ಇದೇ ಸಮವಸ್ತ್ರ ಧರಿಸಿದ್ದಾರೆ. ಆದರೆ, ಈಗ ಏಕಾಏಕಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ದಯಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಬೇಡಿ ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post