ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಜ್ಯದ ಧಾರ್ಮಿಕ ಇತಿಹಾಸದಲ್ಲಿ ಮಲೆನಾಡು, ಕರಾವಳಿ, ಮೈಸೂರು ಭಾಗಗಳ ಕೊಡುಗೆ ಎಷ್ಟಿದೆಯೋ ಅಷ್ಟೇ ಭವ್ಯವಾದ ಕೊಡುಗೆಯನ್ನು ಉತ್ತರ ಕರ್ನಾಟಕ ಭಾಗವೂ ಸಹ ನೀಡಿದೆ. ಇವುಗಳಲ್ಲಿ ಜಾತ್ರೆಗಳ ವಿಶೇಷತೆಗಳು ನಮ್ಮ ನಾಡಿನ ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ವೈಭವವನ್ನು ಸಾರಿ ಸಾರಿ ಹೇಳುತ್ತಿವೆ. ಇಂತಹ ಸಾಲಿನಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೂ ಸಹ ಮಹತ್ವದ್ದಾಗಿದ್ದು, 15 ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ.
ಗುಡದಯ್ಯ ಗವಿಸಿದ್ದನಾದದ್ದು..
ಹಿನ್ನಲೆ: ಕೊಪ್ಪಳದ ಗವಿಮಠ ಪುರಾತನ ಪರಂಪರೆ, ತತ್ವವನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಮುಂತಾದ ತ್ರಿವಿಧ ದಾಸೋಹಗಳು ಇಲ್ಲಿನ ಬುನಾದಿ. ಅದು ದೇವರ ಹೆಸರಿನಲ್ಲಿ ಜನಸಾಮಾನ್ಯನನ್ನು ತಲುಪಿದೆ. ಮುಂದೊಂದು ದಿನ ನಂಬಿಕೆಯ ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ. ಎಲ್ಲರನ್ನೂ ಅಪ್ಪಿಕೊಂಡಿದೆ, ಜನರೂ ಅದನ್ನು ಒಪ್ಪಿಕೊಂಡಿದ್ದಾರೆ.
ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ. ಮಾದಲಿ ತಯಾರಿಸಿವೆ. ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾ ಜಾತ್ರೆಯನ್ನು ನಡೆಸುತ್ತಿವೆ ಎನ್ನುತ್ತಾರೆ ಮಠದ ಒಡನಾಡಿಗಳು.
ಕಾಲ ಬದಲಾಗಲಿ. ನಂಬಿಕೆ, ಭಕ್ತಿ ಬದಲಾಗಿಲ್ಲ. ಎಲ್ಲವೂ ಆಧುನಿಕ ವ್ಯವಸ್ಥೆಯ ತೆಕ್ಕೆಯೊಳಗೆ ಸೇರಿಕೊಳ್ಳಲು ಹವಣಿಸುತ್ತಿವೆ. ಆದರೆ, ಪರಂಪರೆ, ಸಂಪ್ರದಾಯ ತತ್ವಗಳು ಅಲ್ಲ. ಅವು ಸದಾ ಸ್ಥಿರ. ಮುಂದೆಯೂ ಹೀಗೇ ಇರುತ್ತವೆ ಎನ್ನುತ್ತಾರೆ ಭಕ್ತರು. ಮಠ ಎಲ್ಲರೊಳ ಗೊಂದಾಗಿದೆ. ಜನರೆಲ್ಲರೂ ಮಠದ ಜತೆ ಬೆರೆತಿದ್ದಾರೆ. ಇದು ವಿದಿತ ಮಹಾ ಕೊಪಣಪುರದ ವಿಶೇಷ.
ಗವಿಸಿದ್ದನ ಗದ್ದುಗೆಯಿಂದ…
ಶಾಲಿವಾಹನ ಶಕ 1008 ರಲ್ಲಿ ರುದ್ರಮುನಿ ಶಿವಯೋಗಿ ಅವರಿಂದ ಸಂಸ್ಥಾನ ಗವಿಮಠ ಸ್ಥಾಪನೆಯಾಯಿತು. ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೆಯ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕಾಯಕ ತತ್ವ, ಪೂಜೆ, ಅನುಷ್ಠಾನ ಇಂಥ ಸಾಧನೆಗಳಿಂದ ಪ್ರಸಿದ್ಧರಾದರು. ಲಿಂಗಕ್ಕೆ ಬೆಳಗಿದ ಬೆಳಕಿನಲ್ಲೇ ಲೀನವಾದರು. ಹೀಗೆ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯ.
ಕೊಪ್ಪಳ ಸಮೀಪದ ಮಂಗಳಾಪುರ ಗ್ರಾಮ ಗವಿಸಿದ್ದೇಶ್ವರರ ಹುಟ್ಟೂರು. ಅಲ್ಲಿನ ಹಿರೇಮಠದ ಗುರುಲಿಂಗಮ್ಮ ಮಹಾದೇವಯ್ಯ ದಂಪತಿಯ ಪುತ್ರ. ಗುಡದಯ್ಯ ಮೂಲ ಹೆಸರು. ಕೊಪ್ಪಳ ನಗರದ ಹೊರವಲಯದಲ್ಲಿರುವ ಮಳೆಮಲ್ಲೇಶ್ವರ (ಮಳಲಮಲ್ಲೇಶ್ವರ) ಬೆಟ್ಟದಲ್ಲಿ ಗುಡದಯ್ಯ ಸದಾ ಧ್ಯಾನಾಸಕ್ತರಾಗಿರುತ್ತಿದ್ದರು.
ಅದೇ ಗುಡ್ಡದಲ್ಲಿ ಒಮ್ಮೆ ಮಾಲೀಗೌಡರ ಹಸು ಮರಣ ಹೊಂದಿತು. ಗೌಡರ ದುಃಖ ಅರಿತ ಗುಡದಯ್ಯ ತಮ್ಮ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದರಂತೆ. ಈ ಪವಾಡವನ್ನು ಅರಿತ ಮಾಲಿಗೌಡರು ಗುಡದಯ್ಯನನ್ನು ತಮ್ಮ ಮನೆಗೆ ಕರೆತಂದರು. ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಗುಡದಯ್ಯ ಸ್ಪಂದಿಸುತ್ತಿದ್ದದ್ದು, ಪವಾಡ ತೋರುತ್ತಿದ್ದದ್ದು ನಡೆಯಿತು. ಮಾಲಿಗೌಡರ ಮನೆಯೇ ಮಠವಾಯಿತು. ಮುಂದೆ ಮಾಲಿಗೌಡರು ಗುಡದಯ್ಯರನ್ನು ಗವಿಮಠದ ಹತ್ತನೆಯ ಪೀಠಾಧಿಪತಿ ಚೆನ್ನಬಸವ ಸ್ವಾಮೀಜಿ ಅವರಿಗೆ ತಂದು ಒಪ್ಪಿಸಿದರು. ಗೌಡರ ಮನೆ ತೊರೆದು ಬರುವಾಗ ಗುಡದಯ್ಯ ತನ್ನ ಜಡೆಯನ್ನು ಮಾಲಿಗೌಡರ ಪತ್ನಿಗೆ ಅರ್ಪಿಸಿದರು. ಮುಂದೆ ಆ ಮನೆತನಕ್ಕೆ ಜಡೇಗೌಡರ ಮನೆತನ ಎಂಬ ಹೆಸರು ಬಂದಿತು.
ಮುಂದೆ ಚೆನ್ನಬಸವ ಸ್ವಾಮೀಜಿಯಿಂದ ಸಂಸ್ಕಾರ ಪಡೆದು ಗವಿಸಿದ್ದೇಶ್ವರ ಸ್ವಾಮೀಜಿ ಎಂದು ನಾಮಕರಣಗೊಂಡು ಮಠದ ಅಧಿಕಾರ ಪಡೆದರು. ಚೆನ್ನಬಸವ ಸ್ವಾಮೀಜಿ ಎಲ್ಲ ಜವಾಬ್ದಾರಿಯನ್ನು ಗವಿಸಿದ್ದೇಶ್ವರರಿಗೆ ಒಪ್ಪಿಸಿ ತಾವು ಲಿಂಗದೊಳಗೆ ಬೆರೆಯುವುದಾಗಿ ಹೇಳಿ ತಮ್ಮ ಸಮಾಧಿ ನಿರ್ಮಿಸಲು ತೊಡಗಿದರು. ಆದರೆ, ಗುರುವನ್ನು ಅಗಲಲು ಒಪ್ಪದ ಗವಿಸಿದ್ದೇಶ್ವರ ಗುರುಗಳಿಗಾಗಿ ನಿರ್ಮಾಣಗೊಳ್ಳುತ್ತಿದ್ದ ಸಮಾಧಿಯ ಮೇಲೆಯೇ ಜಪ ಮಾಡುತ್ತಲೇ ಕ್ರಿಶ 1816ರಲ್ಲಿ ಲಿಂಗದೊಳಗೆ ಲೀನವಾದರು. ಚೆನ್ನಬಸವ ಸ್ವಾಮೀಜಿಯೇ ಗವಿಸಿದ್ದೇಶ್ವರರ ಸಮಾಧಿ ಕಾರ್ಯ ಮಾಡಬೇಕಾಯಿತು. ಗವಿಸಿದ್ದೇಶ್ವರರು ಕಾಲವಾದ, ಗುರುಗಳಿಂದಲೇ ಗೌರವಿಸಲ್ಪಟ್ಟ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ.
ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ. ಮಾದಲಿ ತಯಾರಿಸಿವೆ. ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾ ಜಾತ್ರೆಯನ್ನು ನಡೆಸುತ್ತಾರೆ.
ಜನವರಿಯಲ್ಲಿ 12ರಂದು ರಥೋತ್ಸವ
ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳರಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಪ್ಯಾರಾಓಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 389 ಬಂಗಾರ, 27 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಜಯಿಸಿದ; ಪದ್ಮಶ್ರೀ-ಅರ್ಜುನ-ಏಕಲವ್ಯ ಪ್ರಶಸ್ತಿ ಪುರಸ್ಕ್ರತ ಅಂತರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಅವರಿಂದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನೆ ಮಾಡಲಿದ್ದಾರೆ.
ವ್ಹೀಲ್’ಚೇರ್ ಶಾಟಪುಟ್’ನಲ್ಲಿ ವಿಶ್ವದ ಮೂರನೆಯ ಶ್ರೇಯಾಂಕಿತೆ ಮಾಲತಿ ಹೊಳ್ಳ ಜುಲೈ 6, 1968 ರಂದು ಬೆಂಗಳೂರಿನಲ್ಲಿ ಜನಿಸಿದರು. 14 ತಿಂಗಳು ಮಗುವಾಗಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾಗಿ 14 ವರ್ಷಗಳ ಕಾಲ ಪುನಶ್ಚೇತನಾ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ಕ್ರೀಡಾಪಟುವಾಗಬೇಕೆಂದು ಹಂಬಲಿಸಿ ಶಾಟಪುಟ್, ಜಾವೆಲಿನ್, ಡಿಸ್ಕಸ್ ಥ್ರೋ ಹಾಗೂ ವ್ಹೀಲ್’ಚೇರ್ ರೇಸಿಂಗ್’ಳಲ್ಲಿ ತರಬೇತಿ ಪಡೆದರು. 1988 ರಲ್ಲಿ ಸಿಯೋಲ್’ನಲ್ಲಿ ನಡೆದ ಪ್ಯಾರಾಒಲಂಪಿಕ್ಸ್‌ನಲ್ಲಿ ಪ್ರಥಮ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು.
ಡೆನ್ಮಾರ್ಕ್, ಆಸ್ಟ್ರೇಲಿಯಾ, ಸ್ಪೇನ್, ಚೈನಾ, ಮಲೇಷ್ಯಾ, ಜಪಾನ್ ಹಾಗೂ ಇಂಗ್ಲೆಂಡ್’ಗಳಲ್ಲಿ ನಡೆದ ಪ್ಯಾರಾಒಲಂಪಿಕ್ಸ್, ಏಶಿಯನ್ ಗೇಮ್ಸ್, ಕಾಮನ್‌ವೆಲ್ತ ಗೇಮ್ಸ್, ವಲ್ಡ್ ಮಾಸ್ಟರ್ಸ್ ಹಾಗೂ ಓಪನ್ ಚಾಂಪಿಯನ್’ಶಿಪ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಭಾರತದಲ್ಲಿ ಅಂಗವಿಕಲ ಕ್ರೀಡಾಪಟುಗಳಲ್ಲಿ ಅತೀ ಹೆಚ್ಚು ಬಂಗಾರದ ಪದಕ ಗಳಿಸಿ ಖ್ಯಾತಿಗೆ ಭಾಜನರಾಗಿದ್ದಾರೆ. ಒಟ್ಟು 389 ಬಂಗಾರದ ಪದಕಗಳು, 27 ಬೆಳ್ಳಿ ಪದಕ ಹಾಗೂ 7 ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಇವರಿಗೆ ಸಂದಿದೆ. 2004ರಲ್ಲಿ ಮಾತೃ ಫೌಂಡೇಷನ್ ಸ್ಥಾಪಿಸಿದರು. ಇದೀಗ ಇಲ್ಲಿ 25 ಅಂಗವಿಕಲ ಮಕ್ಕಳು ಕಲಿಯುತ್ತಿದ್ದಾರೆ.
ಇವರಿಗೆ ಸಂದ ಪ್ರಶಸ್ತಿಗಳು ಹಲವು
ಪದ್ಮಶ್ರೀ ಪ್ರಶಸ್ತಿ (2001), ಅರ್ಜುನ ಪ್ರಶಸ್ತಿ (1995), ಏಕಲವ್ಯ ಪ್ರಶಸ್ತಿ (1998), ಕೆ.ಕೆ. ಬಿರ್ಲಾ ಫೌಂಡೇಷನ್ ಪ್ರಶಸ್ತಿ (1998), ದಸರಾ ಪ್ರಶಸ್ತಿ (1989), ಆರ್ಯಭಟ ಪ್ರಶಸ್ತಿ (2008), ಅಮೆರಿಕಾದ ವಿಮೆನ್ ಆಫ್ ದಿ ಇಯರ್ (2001), ಇಂಗ್ಲೆಂಡ್‌ನ ವಿಮೆನ್ ಆಫ್ ದಿ ಇಯರ್ (2003), ಪ್ರತಿಭಾರತ್ನ ಪ್ರಶಸ್ತಿ (2001), ಅತ್ಯುತ್ತಮ ನಾಗರಿಕ ಪ್ರಶಸ್ತಿ (2004), ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ (2009), ಡಾ ಭಾತ್ರಾ ಹೆಲ್ತಕೇರ್ ಪ್ರಶಸ್ತಿ (2009), ಕರ್ಮವೀರ ಪುರಸ್ಕಾರ (2009), ಸಂಕಲ್ಪರತ್ನ ಪ್ರಶಸ್ತಿ (2001), ಕಿರಣ ಅಚೀವ್ಮೆಂಟ್ ಪ್ರಶಸ್ತಿ (2011), ಮಾನವರತ್ನ ಪ್ರಶಸ್ತಿ (2011), ಯುಗಾದಿ ಪುರಸ್ಕಾರ (2011).
ಒಮ್ಮೆ ಭೇಟಿಯಾಗಿ ಅಜ್ಜನ ಆಶೀರ್ವಾದ ಪಡೆಯಿರಿ
ಸಂಸ್ಥಾನದ ಶ್ರೀ ಗವಿಮಠದ 16 ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀ ಮರಿಶಾಂತವೀರ ಶಿವಯೋಗಿಗಳು ತಪೋನಿಷ್ಠರು, ಆಯುರ್ವೇದ ಪಂಡಿತರು ಮತ್ತು ವಾಕ್ ಸಿದ್ಧಿಯನ್ನು ಪಡೆದಂತಹ ಮಹಾನ್ ತಪಸ್ವಿಗಳು, ಬರಗಾಲದ ಬವಣೆಯ ಈ ನಾಡ ಜನತೆಯ ಬದುಕನ್ನು ಉದ್ಧರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು 1951 ರಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯನ್ನು ಆರಂಭಿಸಿದರು. 1963 ರಲ್ಲಿ ಶ್ರೀಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಶ್ರೀ ಗವಿಮಠದ ಸಮಸ್ತ ಆಸ್ತಿಯನ್ನು ಈ ಸಂಸ್ಥೆಗೆ ಧಾರೆ ಎರೆದು ತಮ್ಮ ಕೊನೆಯ ಕ್ಷಣದವರೆಗೂ ಸಮಸ್ತ ಭಕ್ತ ಕೋಟಿಯ ಉದ್ದಾರಕ್ಕಾಗಿ ತಮ್ಮನ್ನು ತಾವು ಶ್ರೀ ಗಂಧದಂತೆ ಸವೆಸಿಕೊಂಡ ಮಹಿಮಾಶೀಲರು ಇವರು.
ಇಂದಿನ 28 ನೇಯ ಪೀಠಾಧೀಶ್ವರರಾದ ಶ್ರೀಗವಿಸಿದ್ದೇಶ್ವರ ಶಿವಯೋಗಿಗಳು ವಾಗ್ಮಿಗಳು, ಪರಿಸರ ಪ್ರೇಮಿಗಳು, ವಿದ್ಯಾವಂತರು ಹಾಗೂ ವಿದ್ಯಾ ಪ್ರೇಮಿಗಳು ಆಗಿದ್ದಾರೆ. ಪೂರ್ವದ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅವರ ಸತ್ಯ ಸಂಕಲ್ಪವನ್ನು ನೆರವೇರಿಸುತ್ತಾ ಸಾಗಿದ್ದಾರೆ. ಇದು ನಮ್ಮ ಕೊಪ್ಪಳ ನಗರದ ಸಮಸ್ತ ಜನರ ಪುಣ್ಯವಾಗಿದೆ ಮತ್ತು ಭಾಗ್ಯವಾಗಿದೆ.
ವಿಶೇಷ ಲೇಖನ: ಮುರಳೀಧರ್ ನಾಡಿಗೇರ್
Get in Touch With Us info@kalpa.news Whatsapp: 9481252093
Discussion about this post