ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಜೂನಿಯರ್-22 ನಲ್ಲಿ ಅದ್ಭುತ ಗಾಯನದ ಮೂಲಕ ರಾಜ್ಯದ ಗಮನ ಸೆಳೆದಿರುವ ಸೊರಬ ತಾಲೂಕಿನ ಹರೀಶಿ ಗ್ರಾಮದ ವಿದ್ಯಾರ್ಥಿನಿ ಕೀರ್ತಿ ಎಸ್ ಅವರನ್ನು ಮಾಜಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಕೀರ್ತಿ, ತನ್ನ ಸುಮಧುರ ಕಂಠದ ಮೂಲಕ ಸಂಗೀತಪ್ರಿಯರ ಮನಗೆದ್ದಿದ್ದಾಳೆ. ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಪ್ರತಿಭೆ ಇಂದು ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸೌಲಭ್ಯಗಳ ಕೊರತೆಯ ನಡುವೆಯೂ ಅರಳಿದ ಕೀರ್ತಿಯಂತಹ ಪ್ರತಿಭೆಗಳು ಇತರ ಗ್ರಾಮೀಣ ಮಕ್ಕಳಿಗೆ ಪ್ರೇರಣೆಯಾಗಿದ್ದು, ಅವರ ಸುಮಧುರ ಗಾಯನವು ಕನ್ನಡಿಗರ ಮನ ಗೆಲ್ಲಲಿ ಹಾಗೂ ಈ ಮಹತ್ವದ ವೇದಿಕೆಯಲ್ಲಿ ವಿಜಯಶಾಲಿಯಾಗಲಿ ಎಂದು ಮಧು ಬಂಗಾರಪ್ಪ ಅವರು ಹಾರೈಸಿದರು.
– ಜಿ.ಡಿ. ಮಂಜುನಾಥ್, ವಕ್ತಾರರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ
ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಸ್ಮರಿಸಿದ ಅವರು, “ಅವರು ಸಂಗೀತಪ್ರಿಯರಾಗಿದ್ದು, ಸ್ವತಃ ಹಾಡುತ್ತಿದ್ದವರು. ಇಂದು ಅವರು ಬದುಕಿದ್ದರೆ ನಮ್ಮ ನೆಲದ ಈ ಪ್ರತಿಭೆಯನ್ನು ನೋಡಿ ಸಂತೋಷಪಡುತ್ತಿದ್ದರು” ಎಂದರು.
“ನಮ್ಮ ಕ್ಷೇತ್ರದ ಜನರ ಪಾದದ ಧೂಳು ಸದಾ ನಮ್ಮ ಮನೆಯಲ್ಲಿರಬೇಕು” ಎಂಬ ತಮ್ಮ ತಂದೆಯ ಮಾತುಗಳನ್ನು ಉಲ್ಲೇಖಿಸಿದ ಅವರು, ತಮ್ಮ ಮನೆಗೆ ಗ್ರಾಮೀಣ ಭಾಗದ ಮಕ್ಕಳು ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಕೀರ್ತಿ, ಆಕೆಯ ಪೋಷಕರು, ಶಿಕ್ಷಕರು ಹಾಗೂ ಸಹಪಾಠಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿರುವುದು ತಮ್ಮ ಭಾಗ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೀರ್ತಿಯವರ ಸಾಧನೆಯ ಕುರಿತು ಆಕೆಯ ಮಾತುಗಳಲ್ಲಿಯೇ ಕೇಳಿ, ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಸಂಗೀತ ಕ್ಷೇತ್ರದ ಪರಿಚಯವಾಗಲೆಂದು “ಆಕಾಶ್ ಆಡಿಯೋ” ಸ್ಟುಡಿಯೋಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಲೈವ್ ರೆಕಾರ್ಡಿಂಗ್ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಅನುಭವ ಪಡೆದು ಸಂತಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















