ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
‘ಮಾಲ್ಗುಡಿ ಡೇಸ್’ ಹೆಸರು ಕೇಳಿದಾಕ್ಷಣ ಆರ್.ಕೆ. ನಾರಾಯಣ್ ರವರ ಕಥೆಯಾಧಾರಿತ ಶಂಕರ್ ನಾಗ್ ರವರು ನಿರ್ದೇಶಿಸಿದ ಎಂಬತ್ತರ ದಶಕದ ಧಾರಾವಾಹಿ ನೆನಪಾಗುವುದು ಸಹಜವೇ! ಬಹುತೇಕರ ಬಾಲ್ಯದ ನೆನಪುಗಳು ಈ ಧಾರಾವಾಹಿಯೊಂದಿಗೆ ಅಡಕವಾಗಿವೆ ಎಂದರೂ ತಪ್ಪಾಗಲಾರದು. ಇದೀಗ ಮಾಲ್ಗುಡಿ ಡೇಸ್ ಶೀರ್ಷಿಕೆಯಡಿಯಲ್ಲಿ ಚಿತ್ರವೊಂದು ತಯಾರಾಗಿ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಅಪ್ಪೆ ಟೀಚರ್ ಎಂಬ ಯಶಸ್ವಿ ತುಳು ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಅವರು ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ.
ಮಾಲ್ಗುಡಿ ಡೇಸ್ ಧಾರಾವಾಹಿಗೂ, ಮಾಲ್ಗುಡಿ ಡೇಸ್ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಒಳ್ಳೆಯ ಕಥಾಹಂದರ, ಅನುಭವಿ ನಿರ್ದೇಶಕರು ಜೊತೆಗೆ ಉತ್ತಮ ‘ಪಾತ್ರಧಾರಿಯ’ ಇರುವಿಕೆ ಚಿತ್ರವನ್ನು ಯಶಸ್ಸಿನ ದ್ವಾರದತ್ತ ಕೊಂಡೊಯ್ಯಲು ಅತ್ಯವಶ್ಯಕ.
ಈ ಮಾಲ್ಗುಡಿಯ ಅಮೂಲ್ಯ ಚೇತನವೇ ಕರ್ನಾಟಕದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ. ವಿಭಿನ್ನ, ವಿನೂತನ ಪಾತ್ರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುವ ವಿಜಯ ರಾಘವೇಂದ್ರರವರ ವೃತ್ತಿ ಬದುಕಿನಲ್ಲಿ ಇದೊಂದು ವಿನೂತನ ಪ್ರಯತ್ನವಾಗಲಿದೆ. ಸಿನಿಮಾ ಮಾತ್ರವಲ್ಲದೆ ತಮ್ಮ ಉತ್ತಮ ಕಂಠ, ಸೌಮ್ಯತೆ ಹಾಗೂ ಝೀ ವಾಹಿನಿಯ ರಿಯಾಲಿಟಿ ಶೋಗಳ ಮುಖೇನ ವಿಜಯ ರಾಘವೇಂದ್ರರವರು ಪ್ರೇಕ್ಷಕರಿಗೆ ಮತ್ತಷ್ಟು ಪ್ರಿಯವಾಗಿದ್ದಾರೆ.
ಈ ಹಿಂದೆ ನವರಸನಾಯಕ ಜಗ್ಗೇಶ್ ರವರು ಚಿತ್ರದ ಫಸ್ಟ್’ಲುಕ್ ಬಿಡುಗಡೆ ಮಾಡುವುದರರೊಂದಿಗೆ, ‘ಮಾಲ್ಗುಡಿ ಡೇಸ್’ ಚಿತವೂ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದರು. ಚಿತ್ರದ ಮೊದಲ ಪೋಸ್ಟರ್’ನಲ್ಲಿಯೇ ವಿಜಯ ರಾಘವೇಂದ್ರರವರ 60 ವರ್ಷ ದಾಟಿದ ವಯೋವೃದ್ಧರ ವಿಭಿನ್ನ ಗೆಟ್ಟಪ್ಪನ್ನು ಕಂಡು ಪ್ರೇಕ್ಷಕರ ಕುತೂಹಲಕ್ಕೆ ರೆಕ್ಕೆ ಬಂದಂತಾಗಿತ್ತು. ಈ ವಿಭಿನ್ನ ಗೆಟಪ್’ನ ಹಿಂದೆ ಪ್ರೋಸ್ಥೆಟಿಕ್ ಮೆಕ್ ಅಪ್ ಆರ್ಟಿಸ್ಟ್ ’ರೋಷನ್’ ಅವರ ಕ್ರಿಯಾಶೀಲ ಕೈಗಳ ಜಾದುವಿದೆ. ಈ ವಿನೂತನ ಗೆಟ್ಟಪ್ಪಿಗೆಂದೇ ವಿಜಯ್ ಅವರು ಸತತ ಮೂರರಿಂದ ನಾಲ್ಕು ಗಂಟೆಗಳ ಕಾಲ ಪ್ರತಿನಿತ್ಯ ಮೇಕಪಲ್ಲಿ ತೊಡಗುತ್ತಿದ್ದರಂತೆ, ಈ ವಿಶೇಷವಾದ ಮೇಕಪ್ ಅನ್ನು ನಿರ್ದೇಶಕರಾದ ಕಿಶೋರ್ ಮೂಡುಬಿದ್ರೆಯವರು ಮೊದಲು ತಮ್ಮ ಮೇಲೇ ಪ್ರಯೋಗಿಸಿಕೊಂಡು ಏನೂ ತೊಂದರೆಗಳಿಲ್ಲ ಎಂದು ಖಚಿತಪಡಿಸಿಕೊಂಡದ್ದು ಪ್ರಶಂಸಾರ್ಹ ಸಂಗತಿ.


ಚಿತ್ರಕ್ಕೆ ಶಿಲ್ಪಾ ಹೆಗ್ಡೆ ಹಾಗೂ ರೋಷನ್ ಅಯ್ಯಪ್ಪರವರ ವಸ್ತ್ರ ವಿನ್ಯಾಸವಿದೆ, ಕಿಶೋರ್ ಮೂಡುಬಿದ್ರೆ ಅವರೊಂದಿಗೆ ಶಶಾಂಕ ನಾರಾಯಣ, ಸಾತ್ವಿಕ್ ಹೆಬ್ಬಾರ್, ಕರುಣಾಕರ್, ಸಂದೀಪ ಸೇರಿದಂತೆ ಅನೇಕ ಯುವಕರು ನಿರ್ದೇಶನ ತಂಡದಲ್ಲಿದ್ದರೆ, ಇಡೀ ತಂಡವನ್ನು ಮುನ್ನಡೆಸುವ ಹೊಣೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರವಿಶಂಕರ್ ಪೈ ಹೊತ್ತಿದ್ದು, ಒಟ್ಟಾರೆಯಾಗಿ ತಂಡದ ಶ್ರಮದ ಫಲವಾಗಿ ಇದೀಗ ಸಿನೆಮಾಗೆ ಒಂದು ರೂಪ ದೊರೆತು, ಪ್ರೇಕ್ಷಕರ ಮನಮುಟ್ಟಲು ತಯಾರಾಗಿದೆ. ಅನೇಕ ಅನುಭವಿ ತಂತ್ರಜ್ಞರು ಕಾರ್ಯನಿರ್ವಹಿಸಿರುವ ಮಾಲ್ಗುಡಿ ಡೇಸ್ ಚಿತ್ರವನ್ನು ‘ರತ್ನಾಕರ್ ಕಾಮತ್ ಅವರು ನಿರ್ಮಿಸಿದ್ದಾರೆ. ಭಾವನಾತ್ಮಕ ಜೀವಿಯೊಬ್ಬರ ಸುತ್ತಲು ನಡೆಯುವ ಕಥೆಯನ್ನು ಹೆಣೆಯುವುದರ ಮೂಲಕ ನಿರ್ದೇಶಕ ಕಿಶೋರ್ ಮೂಡುಬಿದ್ರಿರವರು ಮೊದಲ ಬಾಲ್’ನಲ್ಲೇ ಸಿಕ್ಸರ್ ಹೊಡೆಯುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿವೆ.
ಚಿತ್ರದ ಹಾಡುಗಳು ಪಿಆರ್’ಕೆ ಆಡಿಯೋದಲ್ಲಿ ಹೊರಹೊಮ್ಮಲಿದ್ದು ಮುಂಬರುವ ಫೆಬ್ರವರಿ 7ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಲೇಖನ: ಸುಮುಖ
ಪತ್ರಿಕೋದ್ಯಮ ವಿದ್ಯಾರ್ಥಿ
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ
Get in Touch With Us info@kalpa.news Whatsapp: 9481252093








Discussion about this post