ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಬೆಂಗಳೂರು-ಮೈಸೂರು ದಶಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಸಾಂಜೋ ಆಸ್ಪತ್ರೆ ಬಳಿ ಬೆಳಿಗ್ಗೆ 9:50ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಎಕ್ಸ್‌ಪ್ರೆಸ್ ವೇ ನಿಂದ ಸರ್ವಿಸ್ ರಸ್ತೆಗೆ ಬರುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ.
Also read: ಕುಸ್ತಿ ಸ್ಪರ್ಧೆ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ಪೂರ್ಣಿಮ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ
ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ. ಅಪಘಾತದ ವೇಳೆ ಬಸ್‌ನಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಪ್ರಯಾಣ ಮಾಡುತ್ತಿದ್ದರು. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳ ಪೈಕಿ ವಿದ್ಯಾರ್ಥಿಗಳೇ ಹೆಚ್ಚು ಗಾಯಗೊಂಡಿದ್ದು, ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಬಸ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅನುಷಾ ಮಾತನಾಡಿ, ಮೊದಲು ಫ್ರೀ ಬಸ್ ಯೋಜನೆ ನಿಲ್ಲಿಸಿ. ಶಕ್ತಿ ಯೋಜನೆಯಿಂದ ಬಸ್‌ಗಳು ಸಿಕ್ಕಾಪಟ್ಟೆ ರಶ್ ಆಗುತ್ತಿವೆ. ಇವತ್ತು ಕೂಡ ಬಸ್‌ನಲ್ಲಿ 60-70 ಪ್ರಯಾಣಿಕರಿದ್ದರು. ಬಸ್ ಓವರ್ ಸ್ಪೀಡ್‌ನಲ್ಲಿದ್ದ ಕಾರಣ ನಿಯಂತ್ರಣ ಸಿಗದೇ ಪಲ್ಟಿಯಾಯಿತು. ಬಸ್ ಒಳಗಿದ್ದ ನಾವೆಲ್ಲರು ಗಾಬರಿಯಾಗಿದ್ದೆವು. ಕಿಟಕಿ ಗಾಜು ಒಡೆದು ಯುವಕರು ಹೊರಬಂದಿದ್ದು, ಸ್ಥಳೀಯರು ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಸರ್ಕಾರ ಮೊದಲು ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post