ಕಲ್ಪ ಮೀಡಿಯಾ ಹೌಸ್ | ಮೈಸೂರು | ವಿಶೇಷ ಲೇಖನ: ಶಿವಮೊಗ್ಗ ರಘುರಾಮ |
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಸುವಿಖ್ಯಾತವಾಗಿರುವ ನೃತ್ಯಾಲಯ ಟ್ರಸ್ಟ್ ಪ್ರದರ್ಶಕ ಕಲೆಗಳ ಅಕಾಡೆಮಿಯು `ನಲಿವಿನ ಪಯಣ-44′ ಎಂಬ ಹರಿದಾಸ ಸಾಹಿತ್ಯ, ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಮಾ. 4 ಮತ್ತು 5 ರಂದು ಹಮ್ಮಿಕೊಂಡಿದೆ.
ಮೈಸೂರಿನ ಕುವೆಂಪುನಗರದ ಗಾನಭಾರತಿಯಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ಮಾ. 4 ರಂದು ಸಂಜೆ 5.30ಕ್ಕೆ ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡೆಮಿ ವ್ಯವಸ್ಥಾಪಕ ಟ್ರಸ್ಟಿ ಡಾ.ಆರ್.ವಿ. ರಾಘವೇಂದ್ರ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ. ಸುದರ್ಶನ, ಖ್ಯಾತ ಕಲಾವಿದೆ ಮತ್ತು ನೃತ್ಯಾಲಯ ಟ್ರಸ್ಟ್ ಮುಖ್ಯಸ್ಥೆ ಡಾ.ತುಳಸೀ ರಾಮಚಂದ್ರ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ನೃತ್ಯಾಲಯದ ಹಿರಿಯ ವಿದ್ಯಾರ್ಥಿಗಳು `ಪುಷ್ಪಾಂಜಲಿ’ ಹಾಗೂ `ಶ್ರೀ ಹರಿಭಜನೆ’ ಕಾರ್ಯಕ್ರಮ ನೀಡಲಿದ್ದಾರೆ.

ಮಾ.5 ರಂದು ಸಂಜೆ 6 ಗಂಟೆಗೆ ಕರ್ನಾಟಕದ ವಿಶೇಷ ನೃತ್ಯ ಪ್ರಕಾರ ಸ್ವರಮಂಥನ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸಂಜೆ 6.15ಕ್ಕೆ ಪ್ರಸಿದ್ಧ ವಯೋಲಿನ್ ವಿದ್ವಾಂಸರಾದ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಅವರಿಂದ `ಯುಗಳ ಪಿಟೀಲು ವಾದನ’ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಅರ್ಜುನ್‌ಕುಮಾರ್(ಮೃದಂಗ), ವಿದ್ವಾನ್ ಗುರು ಪ್ರಸನ್ನ(ಘಟಂ) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ. ಆಸಕ್ತರು ಆಗಮಿಸಲು ನೃತ್ಯಾಲಯ ಟ್ರಸ್ಟ್ ಕೋರಿದೆ.
ಪ್ರಖ್ಯಾತ ಕಲಾವಿದೆ ಡಾ. ತುಳಸೀ ರಾಮಚಂದ್ರ ವ್ಯಕ್ತಿಚಿತ್ರ
ತುಳಸೀ ರಾಮಚಂದ್ರ- ಭರತನಾಟ್ಯ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಸರು. ಕಲಾರಾಧಕರು ಕೇವಲ ವ್ಯಕ್ತಿಗಳಲ್ಲ- ಅವರು ದೈವಿಕ ಶಕ್ತಿಗಳು ಎಂಬ ಮಾತು ತುಳಸೀ ಅವರಿಗೆ ಅನ್ವರ್ಥವಾಗುತ್ತದೆ. ತುಳಸೀ ಎಂಬ ಹೆಸರೇ ಪ್ರಾಕೃತಿಕ ಚೇತನ ಶಕ್ತಿಯಾಗಿ, ಅಭಿವ್ಯಕ್ತಿಯಾಗಿ ಇವರಲ್ಲಿ ರೂಪುಗೊಂಡಿದೆ ಎಂದರೆ ಅತಿಶಯೋಕ್ತಿ ಏನಲ್ಲ.
ಹೌದು…
ತುಳಸೀ ರಾಮಚಂದ್ರ ಎಂದರೆ ಕಲಾವಿದರು, ಸಾಹಿತಿಗಳು ಸೇರಿದಂತೆ ವಿವಿಧ ರಂಗದ ಗಣ್ಯಾತಿಗಣ್ಯರು ಹೃದಯಾಂತರಾಳದಿಂದ ಗೌರವ ನೀಡುತ್ತಾರೆ. ಅವರಿಗೆ ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲ, ಹಲವು ಹತ್ತು ರಂಗದಲ್ಲಿ ಗೌರವಾದರ ಪ್ರಾಪ್ತವಾಗಿವೆ. ಈ ಸಾಧನೆ ಹಿಂದೆ ಸತತ 50 ವರುಷಗಳ ಕಠಿಣ ಪರಿಶ್ರಮವಿದೆ. ನಿರಂತರ ಕಲಾರಾಧನೆ ಇದೆ. ಸಮನ್ವಯತೆಯಿದೆ. ಮನೆತನದಿಂದ ಬಂದ ಸಂಸ್ಕಾರದೊಂದಿಗೆ ವೈಯಕ್ತಿಕ ಸಾಧನೆಯೂ ಮಿಳಿತವಾಗಿದೆ. ಸಂಮಯ, ಸೈರಣೆ, ಸಮಾಧಾನ, ಪ್ರೀತಿ, ವಾತ್ಸಲ್ಯಭರಿತವಾದ ವ್ಯಕ್ತಿತ್ವದೊಂದಿಗೆ ಸಾಧಿಸಿ ತೋರಿಸುವ ಹಠ, ಛಲ ಅವರಲ್ಲಿ ಇರುವುದೇ ಒಂದು ಮಹತ್ವದ ಸಂಗತಿ.

ತುಳಸೀ ಅವರು ಕೃಷ್ಣಗಿರಿ ರಾಮಚಂದ್ರರೊಂದಿಗೆ ವಿವಾಹವಾಗಿ ಮೈಸೂರಿನಲ್ಲಿ ನೆಲೆ ಕಂಡರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ರಾಮಚಂದ್ರ ಪ್ರವೃತ್ತಿಯಲ್ಲಿ ಗಮಕಿಗಳು. ಅವರ ಮಾತೇ ಒಂದು ಕಾವ್ಯಝರಿ ಇದ್ದಂತೆ. ಇನ್ನು ವ್ಯಕ್ತಿತ್ವವೆಂಬುದು ಅಪ್ಪಟ ಚಿನ್ನ. ಹೀಗಾಗಿ ಡಾ. ತುಳಸಿ ರಾಮಚಂದ್ರ ಹುಟ್ಟಿದ ಮನೆ- ಸೇರಿದ ಮನೆ ಎರಡೂ ಕಲಾಭಿವ್ಯಕ್ತಿಗೆ ಮಹತ್ವ ನೀಡುವ ನೆಲೆಗಟ್ಟಾಗಿದ್ದು ಅಪರೂಪದಲ್ಲಿ ಅಪರೂಪ. ವಿಶೇಷತೆಯಲ್ಲಿ ವೈವಿಧ್ಯವಾಯಿತು. ಇವೆಲ್ಲದರೊಂದಿಗೆ ಸ್ವಯಂ ಆಸಕ್ತಿ ಮತ್ತು ಶ್ರದ್ಧೆಗಳೇ ಅವರನ್ನು ಕಲಾರಂಗದಲ್ಲಿ ಧೃವತಾರೆಯನ್ನಾಗಿಸಿತು.
ತುಳಸಿ ಅವರಿಗೆ ಪ್ರಾರಂಭಿಕ ನೃತ್ಯ ಶಿಕ್ಷಣ ಅವರ ಅಕ್ಕ ಚೂಡಾಮಣಿ ಅವರಿಂದಲೇ ದೊರಕಿತು. ನಂತರದಲ್ಲಿ ಅವರು ಗುರು ಲಲಿತಾ ದೊರೈ ಅವರಲ್ಲಿ ತಮ್ಮ ಭರತನಾಟ್ಯ ಶಿಕ್ಷಣವನ್ನು ಪಡೆದರು. ತೀರ್ಥರಾವ್ ಆಜಾದ ಅವರಿಂದ ಕಥಕ್ ಮತ್ತು ಸಿ. ಆರ್. ಆಚಾರ್ಯಲು ಅವರಿಂದ ಕೂಚಿಪುಡಿ ಅಭ್ಯಾಸವನ್ನೂ ತುಳಸೀ ಅವರು ಮಾಡಿದರು.

ದೇಶ-ವಿದೇಶಗಳಲ್ಲಿ ಅವರ ಶಿಷ್ಯಬಳಗವಿದೆ. ಎಲ್ಲರೂ ನರ್ತನವನ್ನು ಜೀವನದ ಅವಿಭಾಜ್ಯ ಅಂಗವಾಗಿರಿಸಿಕೊಂಡಿದ್ದಾರೆ. ತಮ್ಮ ಬಳಿ ಬಂದ ಒಂದು ಪುಟ್ಟ ಮಗುವನ್ನೂ ಅವರು ಪ್ರೀತಿ ಮತ್ತು ಮಮತೆಯಿಂದ ಕಂಡಿದ್ದಾರೆ. ಪಾಲಕರನ್ನು- ಪೋಷಕರನ್ನು ಆದರಿಸಿದ್ದಾರೆ. ಇದು ಅವರ ಶಿಷ್ಯ ವಾತ್ಸಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಒಬ್ಬ ಗುರು ಹೇಗೆ ಇರಬೇಕು ಎಂಬುದಕ್ಕೆ ತುಳಸೀ ಮೇಡಂ ಮಾದರಿ ಎಂದು ಅವರ ಶಿಷ್ಯಬಳಗವೇ ಹೇಳುತ್ತದೆ. ಕಾರಣ ಅವರು ಕೇವಲ ಶಿಕ್ಷಕಿಯಾಗಿಲ್ಲ, ಮಮತೆ ನೀಡುವ ಅಮ್ಮನೂ ಆಗಿ ನೂರಾರು ಮಕ್ಕಳ ಹೆಜ್ಜೆಗೆ ಗೆಜ್ಜೆ ನಾದದ ಇಂಪನ್ನು ಪೂರಣ ಮಾಡಿದ್ದಾರೆ. ಇದು ಮಹತ್ವದ ಅಂಶ.
ಸಾಗರದಾಚೆಗೂ ಹಬ್ಬಿದ ಪಾಂಡಿತ್ಯ
ನೃತ್ಯಕ್ಕೆ ಪೂರಕವಾದ ಕೆಲವು ತಿಲ್ಲಾನ ಗಳನ್ನೂ ಅವರು ರಚಿಸಿಲ್ಲಾರೆ. ದೇಶದ ಹಲವು ಪ್ರತಿಷ್ಠಿತ ನೃತ್ಯೋತ್ಸವ- ಮಹೋತ್ಸವಗಳಲ್ಲಿ ಅವರ ಕಲಾ ಪ್ರೌಢಿಮೆ ಮೆರೆದಾಡಿದೆ. ಶಿಷ್ಯರು ಈ ತಂಡಗಳಲ್ಲಿ ಸಹಕರಿಸಿ ಗುರುವಿನ ಅನುಸರಣೆಯಿಂದ ಖ್ಯಾತಿ ಪಡೆದಿದ್ದಾರೆ. ತುಳಸೀ ಕೇವಲ ಕರುನಾಡಿಗೆ, ಭಾರತಕ್ಕೆ ಸೀಮಿತವಾಗಿಲ್ಲ. ಕಲೆಯ ಮೂಲಕ ಅವರು ಸಾಗರೋಲ್ಲಂಘನ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇವರ ನೃತ್ಯಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳು ನಡೆದಿವೆ. ಮತ್ತು ನಡೆಯುತ್ತಲೇ ಇರುತ್ತವೆ ಎಂಬುದು ಇವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ.
ಡಾಕ್ಟರೇಟ್ ಪಡೆದ ಕಲಾವಿದೆ
ತುಳಸೀ ಅವರು ಕೇವಲ ನರ್ತನ ಶಾಲೆ ಮಾಡಿಕೊಂಡು ಮಕ್ಕಳಿಗೆ ಕಲಾಶಿಕ್ಷಣ ನೀಡುವ ಕಾಯಕಕ್ಕೆ ಮಾತ್ರ ಸೀಮಿತವಾಗಲಿಲ್ಲ. ಅವರದ್ದು ಬಹುಮುಖೀ ವ್ಯಕ್ತಿತ್ವ. ಪ್ರಸಿದ್ಧ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತುಳಸಿ ರಾಮಚಂದ್ರ ಸಿದ್ಧಪಡಿಸಿದ `ಕನ್ನಡ ಸಾಹಿತ್ಯದಲ್ಲಿ ನೃತ್ಯ ಕಲೆಯ ಉಗಮ ಮತ್ತು ವಿಚಾರದ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ದೊರಕಿತು. ಈ ಮಹಾಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪದಗತಿ ಪಾದಗತಿ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿರುವುದು ಗಮನೀಯ ಸಂಗತಿ.
ಪ್ರಶಸ್ತಿ- ಪುರಸ್ಕಾರ
ಕಲೆಯ ಹಲವು ಮಜಲುಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ತುಳಸೀ ರಾಮಚಂದ್ರ ಅವರಿಗೆ ಹತ್ತಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ- ಪುರಸ್ಕಾರ- ಸನ್ಮಾನಗಳು ಸಂದಿವೆ. ಕಲಾಶಾರದೆ, ನೃತ್ಯ ವಿದ್ವಾನಿಧಿ, ಆದರ್ಶ ಸೇವಾರತ್ನ ಮುಂತಾದ ಬಿರುದುಗಳೊಂದಿಗೆ ಗೌರವಿಸಲ್ಪಟ್ಟಿರುವ ಡಾ. ತುಳಸಿ ರಾಮಚಂದ್ರ ಅವರನ್ನು ಕರ್ನಾಟಕ ಸರ್ಕಾರವು 2004ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಿದೆ. 2007-08ರ ಸಾಲಿನಲ್ಲಿ ಸಂಗೀತ ನೃತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡಿದೆ. ಇವೆಲ್ಲವೂ ತುಳಸೀ ಅವರಿಗೆ ಸಲ್ಲಲೇಬೇಕಾದ ಗೌರವವೂ ಆಗಿದೆ. ಪ್ರಶಸ್ತಿ- ಪುರಸ್ಕಾರಗಳಿಗೇ ಇವರಿಂದ ಗೌರವ-ಪ್ರತಿಷ್ಠೆ ಹೆಚ್ಚಾಗಿದೆ ಎನ್ನಬಹುದು.
ಇದೊಂದು ಸಂಕೀರ್ಣ ಕಲೆ
ನೃತ್ಯ ಎಂಬುದು ಒಂದು ಸಂಕೀರ್ಣ ಕಲೆ. ಇದರಲ್ಲಿ ಸಂಗೀತ-ನರ್ತನ, ಸಾಹಿತ್ಯ, ಅಭಿನಯ ಮತ್ತು ಅಧ್ಯಾತ್ಮದ ಸಂಗಮವಿದೆ ಎನ್ನುತ್ತಾರೆ ತುಳಸೀ. ಈ ಕಲೆಯನ್ನು ಮೈಗೂಡಿಸಿಕೊಂಡರೆ ಜೀವನ ಸುಗಮ ಮತ್ತು ಸುಲಲಿತ ಎಂಬುದು ಅವರ ಅಭಿಮತ. ಪ್ರತಿ ಸಂದರ್ಭವೂ ವೇದಿಕೆಯೇ ಬೇಕು ಎಂಬ ಹಂಬಲ ಬೇಡ. ನಲಿವಿಗೆ ನಿತ್ಯ ಜೀವನವೇ ವೇದಿಕೆ. ಅದರಿಂದ ನನಗೆ ಸಂತೋಷ ದೊರಕಿದೆ ಎನ್ನುತ್ತಾರೆ ತುಳಸೀ.
ದೇವರು ನೀಡಿರುವ ವರ
ಜೀವನ ಎಂಬುದು ದೇವರು ನೀಡಿದ ವರ. ಅದರಲ್ಲೂ ಅನುರೂಪ, ಅಪರೂಪವಾದ ಕಲೆ ಎಂಬ ನಿಧಿಯನ್ನು ಬದುಕು ನನಗೆ ಕೊಟ್ಟಿರುವುದು ಮಹತ್ತರವಾದ ವರ. ಅದನ್ನು ಕಿಂಚಿತ್ ಸಮರ್ಪಣೆ ಮಾಡುವುದು ನನ್ನ ಕರ್ತವ್ಯ. ಹಾಗಾಗಿ ನಮ್ಮ ನಲಿವಿನ ಪಯಣ 44 ಸಂಪನ್ನಗೊಳ್ಳುತ್ತಿದೆ ಎಂದು ಬಹಳ ಧನ್ಯತೆ ಮತ್ತು ಹೆಮ್ಮೆಯಿಂದ ಹೇಳುತ್ತಾರೆ ಡಾ. ತುಳಸೀ.

`ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ
ಕುಳಿತು ಕೇಳಲು ನಲಿವ, ನಿಂತರೆ ಒಲಿವ,
ನಲಿದರೆ ಒಲಿವ….. ಎಂಬ ದಾಸರ ಪದವನ್ನು ಅವರು ಈ ಸಂದರ್ಭ ಸ್ಮರಿಸಿಕೊಳ್ಳುತ್ತಾರೆ. ಜೀವನಕ್ಕೆ ನಲಿವು ಬೇಕು ಎಂಬುದನ್ನು ಈ ಮೂಲಕ ಅವರು ಉಲ್ಲೇಖಿಸುವ ಪರಿ ಅದ್ಭುತ.
ಗಣ್ಯರೊಂದಿಗೆ ಸಖ್ಯ
ತುಳಸೀ ರಾಮಚಂದ್ರ ಎಂಬ ಹೆಸರು ಕೇವಲ ನೃತ್ಯ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕಲಿಕೆ- ಪಾಠಾಂತರಕ್ಕೆ ಮಾಥ್ರ ಪರಿಧಿಯನ್ನು ಸೀಮಿತಗೊಳಿಸಿಕೊಂಡಿಲ್ಲ. ವೇದಿಕೆ ಪ್ರಸ್ತುತಿಗೆ ಮಾತ್ರ ಅವರು ಎಂದೂ ಗೆರೆ ಹಾಕಿಕೊಂಡಿಲ್ಲ.
ಸಾಹಿತಿ, ಕಲಾವಿದರು, ಸಂಗೀತಗಾರರು, ಯೋಗ ಮತ್ತು ಧ್ಯಾನ ಸಾಧಕರು- ಹೀಗೆ ವಿದ್ವತ್ ಪ್ರಪಂಚವೇ ಅವರ ತವರು. ಅಲ್ಲಿ ತಮ್ಮ ಅನುಭವ- ಅಭಿನಯ- ಆಪ್ತತೆಗಳನ್ನು ಅವರು ಹಂಚಿ ಸಂಭ್ರಮಿಸಿದ್ದಾರೆ.
ವಿಶ್ವ ಖ್ಯಾತಿಯ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು `ಮಂದ್ರ’ ಕಾದಂಬರಿ ರಚಿಸುವ ಸಂದರ್ಭ ನರ್ತನದ ಸೂಕ್ಷ್ಮಗಳನ್ನು ಅರಿಯಲು ಡಾ. ತುಳಸೀ ಅವರ ಬಳಿ ಹಲವು ಬಾರಿ ಚರ್ಚೆ, ಸಂವಾದ ನಡೆಸಿದ್ದು ದಾಖಲಾರ್ಹ ಸಂಗತಿ. ಇಷ್ಟು ಮಾತ್ರವಲ್ಲ, `ಮಂದ್ರ’ ದ ಕರಡು ಪ್ರತಿಯನ್ನು ಸೂಕ್ಷ್ಮವಾಗಿ ಓದಿ, ವಿಮರ್ಶಿಸಿದವರಲ್ಲಿ ತುಳಸೀ ಅಗ್ರಪಂಕ್ತಿಯವರು.
ಡಾ. ತುಳಸೀ ಅವರು ಆರಂಭಿಸಿದ ನೃತ್ಯ ಶಾಲೆಗೆ ಈಗ 44ನೇ ವಸಂತ. ಹಾಗಾಗಿ ನೃತ್ಯಾಲಯದಿಂದ ನಲಿವಿನ ಪಯಣ-44 ಇದೀಗ ಸಮರ್ಪಣೆಗೆ ಸನ್ನದ್ಧವಾಗಿದೆ. ಬನ್ನಿ. ನಾವೂ ಈ ನಲಿವಿನಲ್ಲಿ ಒಂದಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post