ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ವಿಫುಲ ಅವಕಾಶವಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಪ್ರವಾಸೋದ್ಯಮದ ಉನ್ನತಿಗೆ ಸಹಕರಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್‌ಪೋರ್ಸ್‌ನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಧಾಮೂರ್ತಿ ಅವರನ್ನು ಭೇಟಿ ಮಾಡಿ, ಅಭಿನಂದಿಸಿದ ನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಅವರು ಸಮಾಲೋಚನೆ ನಡೆಸಿದರು.
ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯು ಒಂದು ಉತ್ತಮ ಪ್ರವಾಸಿತಾಣವಾಗಿ ಬೆಳೆಯಲು ಪೂರಕವಾಗುವಂತ ಹಲವು ಪ್ರವಾಸಿ ತಾಣಗಳಿವೆ. ವಿಶ್ವವಿಖ್ಯಾತ ಜೋಗದ ಜಲಪಾತ, ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆ, ಬಸವಣ್ಣನವರ ಅನುಯಾಯಿ ಮಹಾದೇವಿಯಕ್ಕ ಹುಟ್ಟಿದ ಸ್ಥಳ ಉಡುತಡಿ, ಭದ್ರಾವತಿಯಲ್ಲಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ, ಹುಲಿ-ಸಿಂಹಧಾಮ, ಕೊಡಚಾದ್ರಿ, ಕವಲೆದುರ್ಗ, ನಗರದ ಕೋಟೆ, ಇಕ್ಕೇರಿ, ಕೆಳದಿ, ಮಂಡಗದ್ದೆ ಮತ್ತು ಗುಡವಿ ಪಕ್ಷಿಧಾಮ, ಚಂದ್ರಗುತ್ತಿ ದೇವಸ್ಥಾನ, ಕೂಡ್ಲಿ ಸಂಗಮ ಕ್ಷೇತ್ರ, ಕೋಟಿಪುರ, ಬಳ್ಳಿಗಾವಿ, ಬಂದಳಿಕೆ, ಮುಂತಾದ ಪುರಾತನ ದೇವಾಲಯಗಳಿರುವ ಅನೇಕ ಕ್ಷೇತ್ರಗಳಿವೆ ಎಂದವರು ತಿಳಿಸಿದ್ದಾರೆ.
ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರವಾಸೋದ್ಯಮದ ಹಲವು ಮಗ್ಗಲುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳ ಅಭಿವೃದ್ಧಿಗೂ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅನೇಕ ಯುವಕರಿಗೆ ಉದ್ಯೋಗಾವಕಾಶಗಳು ದೊರೆತು ನಿರುದ್ಯೋಗ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ದೊರೆಯಲಿದೆ. ಮಾತ್ರವಲ್ಲ ಉದ್ಯೋಗವನ್ನರಸಿ ದೂರದ ಊರುಗಳಿಗೆ ತೆರಳುವ ಯುವಜನತೆಯನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ಪೋಸಿಸ್’ನ ಶಾಖೆಯೊಂದನ್ನು ಜಿಲ್ಲೆಯಲ್ಲಿ ಆರಂಭಿಸಿ, ವಿದ್ಯಾವಂತ ನಿರುದ್ಯೋಗಿಗಳ ನೆಮ್ಮದಿಯ ಜೀವನಕ್ಕೆ ಆಸರೆಯಾಗುವಂತೆ ಸುಧಾಮೂರ್ತಿ ಅವರಲ್ಲಿ ಮನವಿ ಮಾಡಿಲಾಗಿದೆ ಎಂದಿದ್ದಾರೆ.
Discussion about this post