ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಿವೃತ್ತ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದಲ್ಲಿ ಸೈನಿಕ ಶಾಲೆ ಆರಂಭಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕೇವಲ ಎರಡು ಕಡೆಗಳಲ್ಲಿ ದಕ್ಷಿಣ ಕರ್ನಾಟಕ ಭಾಗದ ಕೊಡಗು ಮತ್ತು ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಮಾತ್ರ ಸೈನಿಕ ಶಾಲೆಗಳಿವೆ. ಮಧ್ಯ ಕರ್ನಾಟಕದ ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಮೂರು ಪ್ರಕಾರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ನಿವೃತ್ತರಾದ ಸಿಬ್ಬಂದಿಗಳು ವಾಸ ಮಾಡುತ್ತಿದ್ದು, ಅವರ ಮಕ್ಕಳುಗಳು ಸೈನಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಲು ಅನುಕೂಲಕರವಾಗುವ ಕಾರಣ, ಶಿವಮೊಗ್ಗದಲ್ಲಿ ಸೈನಿಕ ಶಾಲೆಯನ್ನು ಮಂಜೂರು ಮಾಡಿ ಎಂದು ಮನವಿ ಮಾಡಿದ್ದಾರೆ.

ಇನ್ನು, ಶಿವಮೊಗ್ಗದಲ್ಲಿ ಡಿಆರ್’ಡಿಓ ಪ್ರಯೋಗಾಲಯವನ್ನು ಸ್ಥಾಪಿಸುವ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆ ಬಗ್ಗೆ ಚರ್ಚಿಸಿದರು.

ಶಿವಮೊಗ್ಗದಲ್ಲಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಡಿಆರ್’ಡಿಓ ಸಂಶೋಧನಾ ಘಟಕವನ್ನು ಸ್ಥಾಪಿಸಲು ಡಿಆರ್’ಡಿಓದ ತಾಂತ್ರಿಕ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೆ ಏರೋನಾಟಿಕ್ಸ್, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಯುದ್ದ ವಾಹನಗಳು, ಇಂಜಿನಿಯರಿಂಗ್ ವ್ಯವಸ್ಥೆಗಳು, ಸಲಕರಣೆಗಳು, ಕ್ಷಿಪಣಿಗಳು, ಸುಧಾರಿತ ಕಂಪ್ಯೂಟಿಂಗ್ ಮತ್ತು ಸಿಮ್ಯುಲೇಶನ್, ವಿಶೇಷ ವಸ್ತುಗಳು, ನಾಕಾ ವ್ಯವಸ್ಥೆಗಳಂತ ವಿವಿಧ ವಿಭಾಗಗಳನ್ನು ಒಳಗೊಂಡ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತಹ ಹಲವಾರು ಕಾರ್ಯಗಳನ್ನು ಡಿಆರ್’ಡಿಓ ಘಟಕವು ನಿರ್ವಹಿಸುತ್ತದೆ. ಪ್ರಯುಕ್ತ ಶಿವಮೊಗ್ಗದಲ್ಲಿ ಉದ್ದೇಶಿತ ಡಿಆರ್’ಡಿಓ ಸಂಶೋಧನಾ ಕೆಂದ್ರದ ಬದಲಾಗಿ ಸುಸಜ್ಜಿತ ಮತ್ತು ಸ್ವತಂತ್ರವಾಗಿರುವ ಡಿಆರ್’ಡಿಓ ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















