ಡೆಡ್ಲಿಯಸ್ಟ್ ಟೆರರ್ ಅಟ್ಯಾಕ್ ಇನ್ ಇಂಡಿಯಾ ಎಂದೇ ಕರೆಯಬಹುದಾದ 23/11ರ ಮುಂಬೈ ಉಗ್ರರ ದಾಳಿ ನಡೆದು ಇಂದಿಗೆ 10 ವರ್ಷ. ಪಾಕ್‌ನಿಂದ ನುಸುಳಿ ಬಂದಿದ್ದ ಉಗ್ರರು ನಡೆಸಿದ ರಾಕ್ಷಸೀ ಕೃತ್ಯಕ್ಕೆ ಒಂದೆಡೆ ಇಡಿಯ ದೇಶವೇ ಅಂದು ಬೆಚ್ಚಿ ಬಿದ್ದಿದ್ದರೆ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು.
ಇಂತಹ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಉಗ್ರರನ್ನು ನಾಯಿಗಳಂತೆ ಬೇಟೆಯಾಡಿ ತಾವು ವೀರಸ್ವರ್ಗ ಸೇರಿದ ನಮ್ಮ ವೀರ ಯೋಧರ ತ್ಯಾಗವನ್ನು ನಾವು ನೆನೆಯಲೇ ಬೇಕು. ಇವರೇ ನಮ್ಮ ಆದರ್ಶಪ್ರಾಯ ಹೀರೋಗಳು:
ಹೇಮಂತ್ ಕರ್ಕರೆ, ಎಟಿಎಸ್ ಮುಖ್ಯಸ್ಥ, ಮುಂಬೈ:
ಭಯೋತ್ಪಾದನಾ ನಿಗ್ರಹ ದಳದ ಮುಂಬೈ ಮುಖ್ಯಸ್ಥರಾಗಿದ್ದ ಇವರು, ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಿಂಹದಂತೆ ಸೇವೆ ಸಲ್ಲಿಸಿದವರು. ಮುಂಬೈ ಸರಣಿ ಬಾಂಬ್ ದಾಳಿ ಹಾಗೂ ಮಾಲೆಗಾಂವ್ ಸ್ಫೋಟದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಇವರಿಗೆ 2009ರಲ್ಲಿ ಅಶೋಕ ಚಕ್ರ ಪ್ರಶಸ್ತಿ ನೀಡಲಾಗಿದೆ.
ತುಕಾರಾಂ ಗೋಪಾಲ್ ಓಂಬ್ಲೆ, ಎಎಸ್‌ಐ ಹಾಗೂ ಮಾಜಿ ಯೋಧ:
ಇಂತಹ ಯೋಧರು ತೀರಾ ಅಪರೂಪ. ದೇಶಕ್ಕೆ ಅಜ್ಮಲ್ ಕಸಬ್ ಜೀವಂತ ದೊರೆಯಲು ಇವರೇ ಪ್ರಮುಖ ಪಾತ್ರಧಾರಿ. ಗಿರ್ಗಾಂ ಚೌಪಾಟಿ ಪ್ರದೇಶದಲ್ಲಿ ಕಸಬ್‌ನನ್ನು ಹಿಡಿಯಲು ಯತ್ನಿಸುತ್ತಿದ್ದ ವೇಳೆ ಜೀವವನ್ನೂ ಲೆಕ್ಕಿಸದೇ ಕಸಬ್ ಮೇಲೆರಗಿ ಹೋರಾಡಿದ ಮಹಾನ್ ವೀರ. ಆದರೆ, ಈ ವೇಳೆ ಕಸಬ್ ಹಾರಿಸಿದ ಹತ್ತಾರು ಗುಂಡುಗಳು ಇವರ ದೇಹವನ್ನು ಹೊಕ್ಕಿ, ಪ್ರಾಣ ಬಲಿ ಪಡೆದಿದ್ದವು. ಅಪರೂಪ ವೀರ ಎಂದೇ ಕರೆಯಬಹುದಾದ ಇವರಿಗೆ ಕೇಂದ್ರ ಸರ್ಕಾರ ಅಶೋಕ ಚಕ್ರ ನೀಡಿದೆ.
ಅಶೋಕ್ ಕಾಮ್ಟೆ, ಎಸಿಪಿ, ಮುಂಬೈ:
ಮುಂಬೈ ದಾಳಿಯ ವೇಳೆ ಸೇಂಟ್ ಕ್ಸೇವಿಯರ್ ಕಾಲೇಜಿನ ಬಳಿ ಹೇಮಂತ್ ಕರ್ಕತೆ ಅವರೊಂದಿಗೆ ಕಾರ್ಯಾಚರಣೆಯಲ್ಲಿದ್ದ ವೇಳೆ ಉಗ್ರನ ಗುಂಡಿಗೆ ಬಲಿಯಾದ ವೀರಾಗ್ರಣಿ. ಅಪರಾಧ, ಅಪರಾಧಿಗಳ ವಿಚಾರಣೆಯಲ್ಲಿ ಅತ್ಯಂತ ಅಪರೂಪದ ಕೌಶಲ್ಯ ಹೊಂದಿದ್ದ ಇವರು ಭಾರತೀಯ ಪೊಲೀಸ್ ವಲಯದಲ್ಲೇ ಹೆಸರಾಗಿದ್ದರು. ಇಸ್ಮಾಯಿಲ್ ಖಾನ್ ಎಂಬ ಉಗ್ರ ಹಾರಿಸಿದ ಗುಂಡು ಇವರನ್ನು ಹುತಾತ್ಮರನ್ನಾಗಿಸಿತ್ತು. ಇವರಿಗೆ 2009ರಲ್ಲಿ ಕೇಂದ್ರ ಸರ್ಕಾರ ಅಶೋಕ ಚಕ್ರ ನೀಡಿ ಗೌರವಿಸಿದೆ.
ವಿಜಯ್ ಸಾಲಸ್ಕರ್, ಸೀನಿಯರ್ ಪೊಲೀಸ್ ಇನ್‌ಸ್ಪೆಕ್ಟರ್, ಎನ್‌ಕೌಂಟರ್ ಸ್ಪೆಷಲಿಸ್ಟ್:
ಮುಂಬೈ ಪೊಲೀಸ್ ಇಲಾಖೆ ಕಂಡ ಅತ್ಯಂತ ಅಪರೂಪದ ಎನ್‌ಕೌಂಟರ್ ಸ್ಪೆಷಲಿಸ್‌ಟ್ ಇವರು. ಕ್ರಿಮಿನಲ್‌ಗಳಿಗೆ, ಟೆರರಿಸ್‌ಟ್ಗಳಿಗೆ ಇವರೇ ಟೆರರ್ ಆಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಸುಮಾರು 75-80 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. ಮುಂಬೈ ಕ್ರಿಮಿನಲ್‌ಗಳು ಸಾಲಸ್ಕರ್ ಎಂದರೆ ಅಕ್ಷರಶಃ ನಡುಗಿಹೋಗುತ್ತಿದ್ದರು. ಆದರೆ, ಮುಂಬೈ ದಾಳಿ ವೇಳೆ, ಹೇಮಂತ್ ಕರ್ಕರೆ ಹಾಗೂ ಅಶೋಕ್ ಕಾಮ್ಟೆ ಅವರೊಂದಿಗೆ ಕಾರ್ಯಾಚಣೆಯಲ್ಲಿದ್ದ ವೇಳೆ ಉಗ್ರನ ಗುಂಡಿಗೆ ಬಲಿಯಾದ ಇವರ ದೇಶಭಕ್ತಿಗೆ ಅಶೋಕಚಕ್ರ ನೀಡಿ ಗೌರವಿಸಲಾಗಿದೆ.
ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎನ್‌ಎಸ್‌ಐ ಕಮಾಂಡೋ:
ಇಡಿಯ ಕನ್ನಡನಾಡು ಹೆಮ್ಮೆ ಪಡುವಂತಹ ವೀರಪುತ್ರ ಸಂದೀಪ್ ಉನ್ನಿಕೃಷ್ಣನ್. ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ದೇಶಸೇವೆ ಸಲ್ಲಿಸುತ್ತಿದ್ದ ವೀರ. ಎನ್‌ಎಸ್‌ಜಿಯ ಸ್ಪೆಷಲ್ ಆಕ್ಷನ್ ಗ್ರೂಪ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ತಾಜ್ ಮಹಲ್ ಹೊಟೇಲ್‌ನಲ್ಲಿ ಉಗ್ರರ ವಿರುದ್ದ ಹೋರಾಡುವ ವೇಳೆ ಪ್ರಾಣಾರ್ಪಣೆ ಮಾಡಿದರು. 26/11ರ ದಾಳಿಯ ವಿರುದ್ಧದ ಹೋರಾಟದಲ್ಲಿ ಇವರು 51 ಎಸ್‌ಎಜಿ ಟೀಂ ಕಮಾಂಡರ್ ಹಾಗೂ ಆಪರೇಶನ್ ಬ್ಲಾಕ್ ಟೊರ್ನಾಡೋ ಮುಖ್ಯಸ್ಥರಾಗಿದ್ದರು. ಉಗ್ರರ ಎದೆಗೆ ಎದೆ ಕೊಟ್ಟು ಹೋರಾಡಿದ ಇವರನ್ನು ಶತ್ರುಗಳ ಗುಂಡು ವೀರಸ್ವರ್ಗವನ್ನು ಸೇರಿಸಿತ್ತು. ಇವರಿಗೆ 2009ರಲ್ಲಿ ಅಶೋಕ ಚಕ್ರ ನೀಡಿ ಸರ್ಕಾರ ಗೌರವಿಸಿದೆ.
ಈ ಐದು ಪ್ರಮುಖರೊಂದಿಗೆ ಹವಾಲ್ದಾರ್ ಗಜೇಂದರ್ ಸಿಂಗ್, ನಾಗಪ್ಪ ಆರ್. ಮಹೆಲೆ, ಕಿಶೋರ್ ಕೆ. ಶಿಂಧೆ, ಸಂಜಯ್ ಗೋವಿಲ್ಕರ್, ಸುನೀಲ್ ಕುಮಾರ್ ಯಾದವ್ ಸೇರಿದಂತೆ ಹಲವಾರು ಯೋಧರು ದೇಶಕ್ಕಾಗಿ, ದೇಶವಾಸಿಗಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ನಿಜವಾದ ಹೀರೋಗಳಾಗಿರುವ ಇವರ ತ್ಯಾಗವನ್ನು ಸಾರ್ಥಕ್ಯಗೊಳಿಸುವಂತೆ ದೇಶವಾಸಿಗಳ ನಡೆದುಕೊಳ್ಳಬೇಕಿದೆ.
Discussion about this post