ಮುಂಬೈ: ಇಂದಿಗೆ ಸರಿಯಾಗಿ 10 ವರ್ಷಗಳ ಹಿಂದೆ ನಡೆದ, ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಇಡಿ ದೇಶವೇಕೆ ಪ್ರಪಂಚವೇ ಒಮ್ಮೆ ಬೆಚ್ಚಿ ಬಿದ್ದಿತ್ತು. ಹೌದು, ಅದೇ ಮುಂಬೈ ಮೇಲಿನ ಉಗ್ರರ ದಾಳಿ… ಡೆಡ್ಲಿಯಸ್ಟ್ ಅಟ್ಯಾಕ್ ಇನ್ ಇಂಡಿಯಾ!
ಅದು 2008ರ ನವೆಂಬರ್ 26. ಆ ದಾಳಿಗೆ ಭಾರತವೇ ಅಕ್ಷರಶಃ ಹೆದರಿತ್ತು. ಪಾಕ್ ಕೃಪಾಪೋಷಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಲಿಯುಗ ರಾಕ್ಷಸರು ವಾಣಿಜ್ಯ ನಗರಿ ಮುಂಬೈ ಮೇಲೆ ವ್ಯವಸ್ಥಿತ ದಾಳಿ ನಡೆಸಿದ್ದರು. ಈ ದಾಳಿಗೆ ವಿದೇಶಿಯರೂ ಸೇರಿ 166 ಮಂದಿ ಬಲಿಯಾಗಿದ್ದರೆ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಪಾಕಿಸ್ಥಾನದಿಂದ ದೋಣಿ ಮೂಲಕ ಭಾರತ ಪ್ರವೇಶಿಸಿದ್ದ 16 ಉಗ್ರರು ವಾಣಿಜ್ಯನಗರಿಯ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಈ 16 ಮಂದಿಯ ಕಪಿಮುಷ್ಠಿಯಲ್ಲಿ ಮುಂಬೈ 3 ದಿನಗಳ ಕಾಲ ನಲುಗಿಹೋಗಿತ್ತು. 2008ರ ನ.26ರಂದು ದಾಳಿ ಆರಂಭಿಸಿದ್ದ ಉಗ್ರರು ಮೂರು ದಿನಗಳ ಕಾಲ ಅಕ್ಷರಶಃ ರಾಕ್ಷಸರಂತೆ ದಾಳಿ ನಡೆಸಿದ್ದರು. ಇವರ ಕ್ರೂರ ಅಟ್ಟಹಾಸ ಎಷ್ಟಿತ್ತು ಎಂದರೆ ಹಾಲುಗಲ್ಲದ ಕಂದನಿಂದ ಹಿಡಿದು, ಆಸ್ಪತ್ರೆಯಲ್ಲಿ ನಡೆಯಲೂ ಸಾಧ್ಯವಾಗದ ವಯೋವೃದ್ದರ ಮೇಲೂ ಸಹ ಯಾವುದೇ ರೀತಿಯ ಕರುಣೆಯಿಲ್ಲದೇ ಗುಂಡಿನ ದಾಳಿ ನಡೆಸಿದ್ದರು.
ಮುಂಬೈನ ಹೃದಯ ಭಾಗ ಛತ್ರಪತಿ ಶಿವಾಜಿ ಟರ್ಮಿನಸ್, ಪ್ರತಿಷ್ಠಿತ ಒಬರಾಯ್ ಟ್ರೈಡೆಂಟ್, ತಾಜ್ ಹೊಟೇಲ್, ಲಿಯೋಪೋಲ್‌ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜುಗಳ ಮೇಲೆ ಉಗ್ರರ ಭೀಕರ ದಾಳಿ ನಡೆದಿದ್ದವು. ಎಳೆಯ ಕಂದಮ್ಮಗಳಿಂದ ಮೊದಲ್ಗೊಂಡು ವೃದ್ದರವರೆಗೂ ಯಾವುದೇ ರೀತಿಯ ಕರುಣೆಯಿಲ್ಲದೇ ಕೊಂದ ರೀತಿಗೆ ನಿಜಕ್ಕೂ ಪ್ರಪಂಚವೇ ನಡುಗಿತ್ತು.
ಅಖಾಡಕ್ಕಿಳಿದ ಎನ್‌ಎಸ್‌ಜಿ
ದಾಳಿ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಭದ್ರತಾ ಪಡೆಗಳು ಯುದ್ದಕ್ಕೆ ಸನ್ನದ್ಧವಾಗಿದ್ದವು. ತತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಯೋಧರು ತಾಜ್ ಹೊಟೇಲ್ ಹೊರತುಪಡಿಸಿ ಎಲ್ಲ ಪ್ರದೇಶಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಎನ್‌ಎಸ್‌ಜಿ ಸಹ ಅಖಾಡಕ್ಕೆ ಇಳಿದಿತ್ತು. ಎಂತಹ ಕ್ಲಿಷ್ಟ ಸಂದರ್ಭವನ್ನೂ ಸಹ ತಹಬಂಧಿಗೆ ತರುವ ರೀತಿಯಲ್ಲಿ ತರಬೇತಿ ಪಡೆದ ಈ ಯೋಧರು ನಡೆಸಿದ ಕಾರ್ಯಾಚರಣೆ ನಿಜಕ್ಕೂ ಸೂರ್ಯಚಂದ್ರರಿರುವವರೆಗೂ ಭಾರತೀಯರು ಗೌರವಿಸುವಂತಿತ್ತು.
ಎನ್‌ಎಸ್‌ಜಿ ಕಾರ್ಯಾಚರಣೆಗೆ ಇಳಿದಿದ್ದೇ ತಡ ಉಗ್ರರರನ್ನು ಇರುವೆಗಳಂತೆ ಹೊಸಕಿ ಹಾಕಲು ಆರಂಭಿಸಿದರು. ಅಲ್ಲಿಯವರೆಗೂ ಅಟ್ಟಹಾಸ ಮೆರೆದ ಉಗ್ರರರನ್ನು ಅಕ್ಷರಶಃ ಬೇಟೆಯಾಡಿದ ಯೋಧರು, ಓರ್ವ ಉಗ್ರ ಅಜ್ಮಲ್ ಕಸಬ್‌ನನ್ನು ಜೀವಂತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇಂತಹ ಭೀಕರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನಲ್ಲಿ ಪಾಕಿಸ್ಥಾನದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಆದರೆ, ಲಗಾಯ್ತಿನಿಂದಲೂ ಉಗ್ರರನ್ನು ಪೋಷಣೆ ಮಾಡಿಕೊಂಡು ಬರುತ್ತಲೇ ಇರುವ ಪಾಕಿಸ್ಥಾನ ಈ ಬಾರಿ ತನ್ನ ಕುತಂತ್ರವನ್ನು ಬಳಸಿ, ಅಲ್ಲಿನ ನ್ಯಾಯಾಲಯದಿಂದ ಹಫೀಸ್ ಸ್ವತಂತ್ರ್ಯವಾಗಿ ತಿರುಗಾಡಿಕೊಂಡಿರುವಂತೆ ಮಾಡಿದೆ.
ಹಫೀಜ್ ವಿರುದ್ಧ ಭಾರತ ಸರ್ಕಾರ ಸಾಕಷ್ಟು ಸಾಕ್ಷಿಗಳನ್ನು ನೀಡಿದ್ದರೂ ಸಹ ಪಾಕಿಸ್ಥಾನ ಮಾತ್ರ ತನ್ನ ಈ ಪಾಪದ ಪಿಂಡವನ್ನು ರಕ್ಷಣೆ ಮಾಡುವ ಕಾರಣದಿಂದ ಎಲ್ಲ ಸಾಕ್ಷಿಗಳನ್ನು ತಿರಸ್ಕರಿಸುತ್ತಲೇ ಬಂದಿದೆ. ಪರಿಣಾಮ ನೂರಾರು ಜನರನ್ನು ಬಲಿ ಪಡೆದಿರುವ ಈ ರಾಕ್ಷಸರ ಮುಖಂಡ ಈಗ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದಾನೆ. ಅಲ್ಲದೇ, ತಾನು ಬಿಡುಗಡೆಯಾದ ತತಕ್ಷಣ ಭಾರತದ ವಿರುದ್ಧ ಬಾಲ ಬಿಚ್ಚಿದ್ದು, ಕಾಶ್ಮೀರದ ಸ್ವಾತಂತ್ರ್ಯವೇ ತನ್ನ ಗುರಿ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಮತ್ತೆ ಹೋರಾಟ ಅಥವಾ ದಾಳಿ ನಡೆಸುತ್ತೇನೆ ಎಂಬ ಸೂಚನೆ ನೀಡಿದ್ದಾನೆ.
ಇನ್ನು ದೇಶದೊಳಗಿನ ಉಗ್ರ ದಾಳಿಗಳ ಕುರಿತಾಗಿ ನೋಡುವುದದರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಯಾವುದೇ ದೊಡ್ಡ ಮಟ್ಟದ ಉಗ್ರರ ದಾಳಿಗಳು ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿ. ಮೋದಿಯವರ ದಿಟ್ಟಕ್ರಮ ಜಾಗತಿಕ ಮಟ್ಟದಲ್ಲಿ ಎಲ್ಲ ಉಗ್ರ ಸಂಘಟನೆಗಳು ಕನಸಿನಲ್ಲೂ ಬಟ್ಟೆಯನ್ನು ಒದ್ದೆ ಮಾಡಿಕೊಳ್ಳುವಂತೆ ಮಾಡಿವೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಮೋದಿ ಉಗ್ರರ ವಿರುದ್ದ ಹೋರಾಟದ ಕಿಚ್ಚು ಹೊತ್ತಿಸುತ್ತಿರುವುದು ಹಾಗೂ ಇದಕ್ಕೆ ಅಪಾರ ಬೆಂಬಲ ದೊರೆಯುತ್ತಿರುವುದು, ಅಮೇರಿಕಾ ಸೇರಿದಂತೆ ಜಾಗತಿಕ ಹಣಕಾಸಿನ ಸಹಕಾರ ಪಾಕ್‌ಗೆ ಸಿಗದಂತೆ ನೋಡಿಕೊಳ್ಳುವಲ್ಲಿ ಮೋದಿ ಯಶಸ್ವಿಯಾಗಿರುವುದು ಉಗ್ರರು ಭಾರತದ ವಿರುದ್ಧ ಕೆಂಗಣ್ಣು ಬಿಡುವಂತೆ ಮಾಡಿದೆ. ಆದರೆ, ಮೋದಿ ಪ್ರಧಾನಿಯಾದ ನಂತರ ಯಾವುದೇ ದಾಳಿಗಳು ದೇಶದಲ್ಲಿ ನಡೆದಿಲ್ಲ ಎನ್ನುವುದು ಎಷ್ಟು ಸತ್ಯವೋ, ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ ಎನ್ನುವುದೂ ಅಷ್ಟೇ ಸತ್ಯ.
ಗಮನಿಸಬೇಕಾದ ಅಂಶವೇನೆಂದರೆ: ಯಾವುದೇ ಉಗ್ರರು ಗಡಿಯ ಮೂಲಕ ದೇಶವನ್ನು ಪ್ರವೇಶಿಸದಂತೆ ರಕ್ಷಣೆ ಒದಗಿಸಲಾಗಿದೆ. ದೇಶದೊಳಕ್ಕೆ ನುಗ್ಗಲು ಯತ್ನಿಸುವ ಉಗ್ರರನ್ನು ಗಡಿಯಲ್ಲೇ ಹತ್ಯೆ ಮಾಡಲಾಗುತ್ತಿದೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹಸಚಿವ ರಾಜನಾಥ್ ಸಿಂಗ್ ಅವರ ದಿಟ್ಟ ನಿಲುವು, ಸೇನೆಯ ಆತ್ಮಸ್ಥೈರ್ಯ ಹೆಚ್ಚಿಸುವುದು, ಸೇನೆಯನ್ನು ಆಧುನೀಕರಣಗೊಳಿಸುವ ಕ್ರಮಗಳಿಂದಾಗಿ ಗಡಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಎಲ್ಲಕ್ಕೂ ಮಿಗಿಲಾಗಿ, ಮೋದಿ ಸರ್ಕಾರ ಬಂದ ನಂತರ ಪಾಕಿಸ್ಥಾನ ಹಾಗೂ ಉಗ್ರರ ಉಪಟಳಕ್ಕೆ ಗಡಿಯಲ್ಲಿ ತಕ್ಕ ಉತ್ತರ ನೀಡಲು ಸೇನೆಗೆ ಸ್ವಾತಂತ್ರ್ಯ ನೀಡಿರುವುದು ಯೋಧರಿಗೆ ಆನೆಬಲ ಬಂದಿದೆ. ಪರಿಣಾಮವೇ ದೇಶದೊಳಗೆ ಉಗ್ರರ ದಾಳಿ ಕಡಿಮೆಯಾಗಿರುವುದು.
ಇನ್ನು, ಹಫೀಜ್ ಸಯೀದ್ ವಿಚಾರದಲ್ಲಿ ಪಾಕಿಸ್ಥಾನವನ್ನು ಅಮೆರಿಕಾ ಹಲವು ಬಾರಿ ತರಾಟೆಗೆ ತೆಗೆದುಕೊಂಡಿರುವುದು ಪ್ರಶಂಸನೀಯ ಬೆಳವಣಿಗೆ. ಉಗ್ರವಾದದ ವಿರುದ್ಧ ಕ್ರಮಕೈಗೊಳ್ಳದೇ ಇದ್ದರೆ ತನ್ನಿಂದ ಯಾವ ನೆರವೂ ಸಿಗುವುದಿಲ್ಲ ಎಂಬುದನ್ನು ಅಮೇರಿಕಾ ಈಗಾಗಲೇ ಹಲವು ಬಾರಿ ಸಾಬೀತು ಮಾಡಿದೆ.
ಭಯೋತ್ಪಾದನೆ ವಿಚಾರದಲ್ಲಿ ಅತ್ಯಂತ ಕಠಿಣ ಮನಃಸ್ಥಿತಿ ಹೊಂದಿರುವ ಡೊನಾಲ್‌ಡ್ ಟ್ರಂಪ್ ಸರ್ಕಾರದ ಈ ನೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಕಾದುನೋಡಬೇಕಿದೆ.
Discussion about this post