ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೆ.ಆರ್. ನಗರ ತಾಲೂಕು ಹಂಪಾಪುರ ಮೂಲದ ಹಣಕಾಸು ತಜ್ಞ ಎಚ್.ಆರ್. ಬದರಿನಾಥ್ ಮತ್ತು ಸ್ಮಿತಾ ಮೈಸೂರು ಅವರ ಪುತ್ರಿ ಅಲ್ಪನಾ ಬದರಿನಾಥ್ ಭರತನಾಟ್ಯ ರಂಗಾರೋಹಣ ಕಾರ್ಯಕ್ರಮ ಗುರುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಖ್ಯಾತ ಕೂಚಿಪುಡಿ ವಿದುಷಿ ವೈಜಯಂತಿ ಕಾಶಿ ಮಾತನಾಡಿ, ರಾಜಧಾನಿಯ ಚಾಮರಾಜ ಪೇಟೆಯ ವೆಂಕಟೇಶ ನೃತ್ಯ ಮಂದಿರದ ಹಿರಿಯ ನೃತ್ಯವಿದುಷಿ ರಾಧಾ ಶ್ರೀಧರ್ ಶಿಷ್ಯೆ ಅಲ್ಪನಾಗೆ ಶಿಕ್ಷಣ ಮತ್ತು ಕಲಾ ರಂಗದಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಸಾಮಾನ್ಯವಾಗಿ ಪಿಯುಸಿ ವಿಜ್ಞಾನ ವ್ಯಾಸಂಗ ಮಾಡುವ ಮಕ್ಕಳು, ಸಂಗೀತ- ನೃತ್ಯವನ್ನು ಈ ಹಂತಕ್ಕೇ ನಿಲ್ಲಿಸಿಬಿಡುತ್ತಾರೆ. ಕಾರಣ ಕೇಳಿದರೆ ಓದುವುದು ಬಹಳ ಇದೆ ಎನ್ನುತ್ತಾರೆ. ಆದರೆ ಈ ಯುವ ನರ್ತಕಿ ವಿಜ್ಞಾನ ಅಧ್ಯಯನ ಮತ್ತು ಭರತನಾಟ್ಯ- ಎರಡನ್ನೂ ಸಮನ್ವಯ ಮಾಡಿಕೊಂಡು ಬಹುಮುಖೀ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಮದ್ರಾಸ್ ಐಐಟಿಯಲ್ಲಿ ಈ ಸಾಲಿನಲ್ಲಿ ಸೀಟು ದಕ್ಕಿಸಿಕೊಂಡಿರುವ ಅಲ್ಪನಾ, ಮುಂಬರುವ ದಿನಗಳಲ್ಲಿ ಭರತನಾಟ್ಯ ರಂಗಕ್ಕೂ ಉತ್ತಮ ಕೊಡುಗೆಗಳನ್ನು ನೀಡಲಿದ್ದಾಳೆ. ಆಕೆಯ ಭಾವಾಭಿನಯವೇ ಇದಕ್ಕೆ ದಿಕ್ಸೂಚಿಯಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಗುರುಗಳು ಶಿಷ್ಯರನ್ನು ಹೊಗಳುವುದು ಕಡಿಮೆ. ಆದರೆ ಕಲಾ ರಂಗದ ದಿಗ್ಗಜರೇ ಆಗಿರುವ ಹಿರಿಯ ವಿದುಷಿ ಮತ್ತು ಗುರು ರಾಧಾ ಅವರೇ ‘ ಇವಳೊಬ್ಬ ವಿಶೇಷ ಪ್ರತಿಭೆ’ ಎಂದಿದ್ದಾರೆ. ಅರಳು ಪ್ರತಿಭೆಗಳ ಬೆಳವಣಿಗೆಗೆ ಇದೇ ಶ್ರೀರಕ್ಷೆಯಾಗಲಿದೆ ಎಂದು ವಿದುಷಿ ವೈಜಯಂತಿ ಕಾಶಿ ನುಡಿದರು.
ಮೈಸೂರಿನಲ್ಲಿ ಖ್ಯಾತ ಆಸ್ಥಾನ ವಿದ್ವಾಂಸರಾಗಿದ್ದ ಬಿ.ಕೆ. ಪದ್ಮನಾಭರಾಯರು ಕಲಾವಿದೆಯ ಕುಟುಂಬದ ಹಿರಿಯರು. ಅವರ ರಚನೆಯ ಗಣೇಶ ಸ್ತುತಿಯಿಂದಲೇ ಕಾರ್ಯಕ್ರಮ ಆರಂಭಿಸಿದ್ದು ಮಾದರಿ. ಹಿರಿಯರ ಕೃಪೆ ಮತ್ತು ಅಶೀರ್ವಾದವೇ ಮಕ್ಕಳ ಬೆಳವಣಿಗೆಗೆ ರಕ್ಷೆ ಎಂಬುದು ಇಲ್ಲಿ ಕಾರ್ಯರೂಪಕ್ಕೆ ಬಂದಿರುವುದು ಅನುಸರಣೀಯ ಎಂದರು.ಮನೋಜ್ಞ ಅಭಿನಯ
ಹಿರಿಯ ಕಲಾ ವಿಮರ್ಷಕ ಡಾ. ಸೂರ್ಯ ಪ್ರಸಾದ್ ಮಾತನಾಡಿ, ಕಲಾವಿದೆ ಅಲ್ಪನಾ ‘ವರ್ಣ‘ವನ್ನು ಮನೋಜ್ಞವಾಗಿ ಪಡ ಮೂಡಿಸಿರುವುದು ಖುಷಿ ನೀಡಿದೆ ಎಂದರು. ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ಕುಮಾರ್, ಗುರುಗಳಾದ ರಾಧಾ ಶ್ರೀಧರ್, ಕುಸುಮಾ ರಾವ್, ಪಾಲಕರಾದ ಬದರಿನಾಥ್ ಮತ್ತು ಮೈಸೂರು ಸ್ಮಿತಾ ಇತರರು ಹಾಜರಿದ್ದರು.
ಗಾಯನದಲ್ಲಿ ವಿದುಷಿ ಐಶ್ವರ್ಯಾ ನಿತ್ಯಾನಂದ, ನಟವಾಂಗದಲ್ಲಿ ವಿದ್ವಾನ್. ಡಿ.ವಿ. ಪ್ರಸನ್ನ ಕುಮಾರ, ಮೃದಂಗದಲ್ಲಿ ವಿದ್ವಾನ್ ಸಾಯಿ ವಂಶಿ, ಕೊಳಲಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಮೈಸೂರು ಆರ್. ದಯಾಕರ್ ಮತ್ತು ರಿದಂ ಪ್ಯಾಡ್ ನಲ್ಲಿ ಮಿಥುನ್ ಶಕ್ತಿ ಸಹಕಾರ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post