ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಮ್ಮ ಮಕ್ಕಳಿಗೆ ಕನ್ನಡದ ಇತಿಹಾಸ ಹಾಗೂ ಸಾಹಿತ್ಯವನ್ನು ತಿಳಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವದ ಬಗ್ಗೆ ಅರಿವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮ.ನ. ಲತಾ ಮೋಹನ್ ಕರೆ ನೀಡಿದರು.
ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸುವರ್ಣ ಕರ್ನಾಟಕ ಕನ್ನಡ ಹಬ್ಬದಲ್ಲಿ ಅವರು ಮಾತನಾಡಿದರು.
ಹಲವಾರು ಪ್ರಥಮಗಳಿಗೆ ಕನ್ನಡ ಹಾಗೂ ಕರುನಾಡು ಸಾಕ್ಷಿಯಾಗಿದೆ. ಭಾರತದಲ್ಲಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು ಆದರೆ ಇಂದು ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ನಾವು ಮಕ್ಕಳೊಂದಿಗೆ ಕೇವಲ ಇಂಗ್ಲಿಷ್’ನಲ್ಲೇ ಮಾತನಾಡುತ್ತೇವೆ. ಮಕ್ಕಳು ಕನ್ನಡ ಬಳಸಬೇಕು, ಕನ್ನಡದ ಇತಿಹಾಸ, ಸಾಹಿತ್ಯ ಎಲ್ಲವನ್ನೂ ತಿಳಿಯ ಬೇಕು ಹಾಗಾದರೆ ಮಾತ್ರ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವದ ಅರಿವಾಗುತ್ತದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರಾದ ಸುರೇಶ್ ಋಗ್ವೇದಿ ಮಾತನಾಡಿ, ಮೈಸೂರು ಮಹಾರಾಜರ ಕೊಡುಗೆ ಅಪಾರವಾದುದು ಅವರು ಮಾಡಿದ ಅಭಿವೃದ್ಧಿ, ಆಡಳಿತ ದಿಂದ ನಾವು ಇಷ್ಟು ಮುಂದುವರೆದಿದ್ದೇವೆ. ಹಲವಾರು ರಾಷ್ಟ್ರ ಪುರುಷರ ತ್ಯಾಗ ಬಲಿದಾನದಿಂದ ನಾವು ಇಂದು ನೆಮ್ಮದಿಯಾಗಿ ಇದ್ದೇವೆ ಎಂದರು.
ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಅಂದು ಮಾಡಿದ ಏಕೀ ಕರಣದ ಹೋರಾಟದ ಫಲ ಇಂದು ನಾವು ನೋಡುತ್ತಿದ್ದೇವೆ. ಕನ್ನಡ ಭಾಷೆಯ ಹಾಗೂ ರಾಷ್ಟ್ರದ ಸೇವೆಗೆ ಪ್ರತಿ ನಾಗರೀಕನು ಸ್ವ ಇಚ್ಚೆಯಿಂದ ಮುಂದೆ ಬರಬೇಕು ಹಾಗೆ ಬಂದಾಗಲೆ ನಾವು ಸಮರ್ಥ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಾಲು ಗಿಡಗಳ ಸಾಧಕ ಸಿ.ಎಂ. ವೆಂಕಟೇಶ್ ಮಾತನಾಡಿ, ದೆಹಲಿ ಮಹಾನಗರ ಇಂದು ಉಸಿರಾಡಲು ಆಗದಂತೆ ಆಗುತ್ತಿದೆ. ಆದರೆ, ನಮ್ಮ ಭಾಗ್ಯ ಕರ್ನಾಟಕ ಉತ್ತಮವಾದ ಅರಣ್ಯ ಸಂಪತ್ತು ಹೊಂದಿದೆ. ಪ್ರತಿ ಮನುಷ್ಯನೂ ಸಹ ಗಿಡ ನೆಡುವ ಮೂಲಕ ಭಾರತವನ್ನು ಸಸ್ಯ ಶ್ಯಾಮಲೆಯಾಗಿಯೂ ಕರ್ನಾಟಕವನ್ನು ನಿತ್ಯ ಹರಿದ್ವರ್ಣವಾಗಿಯೂ ಮಾಡಬೇಕು. ಇದೇ ನಾವು ಮುಂದಿನ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇವತ್ತಿನ ಮಕ್ಕಳ ಕೈಯಲ್ಲಿ ಇದೆ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್ ಮಾತನಾಡಿ, ಮನೆಗಳಲ್ಲಿ ಎಲ್ಲರೂ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಪ್ರತಿಯೊಬ್ಬರು ಸಹ ಪ್ರತಿದಿನ ಕನ್ನಡ ದಿನಪತ್ರಿಕೆಗಳನ್ನು ಮಕ್ಕಳು ಓದುವಂತೆ ಮಾಡಬೇಕು. ದಿನಪತ್ರಿಕೆ ಓದುವುದು ಮಕ್ಕಳಿಗೆ ಹವ್ಯಾಸವಾದರೆ ಅವರಿಗೆ ಸಾಮಾಜಿಕ ಜ್ಞಾನ ತಾನಾಗಿಯೇ ಬರುತ್ತದೆ. ಇದು ಮಕ್ಕಳ ಬೆಳವಣಿಗೆಗೆ ಪೂರಕ ಎಂದು ತಿಳಿಸಿದರು.
ವಿಶ್ವ ದಾಖಲೆ ನಿರ್ಮಿಸಿರುವ ಬಾಲಕ ಪೃಥು ಪಿ. ಅದ್ವೈತ್ ಮಾತನಾಡಿ, ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಶಿವಮೊಗ್ಗದ ಈಸೂರು ಗ್ರಾಮ ಸ್ವಾತಂತ್ರ ಪಡೆದ ಮೊದಲ ಹಳ್ಳಿ ಹೇಗಾಯಿತೆಂದು ತಿಳಿಸಿದರು. ಮಾತನಾಡುವ ಗೊಂಬೆ ಕಲಾವಿದೆ ಎಂ. ಕಾವ್ಯ ಮಾತನಾಡುವ ಗೊಂಬೆಯ ಮೂಲಕ ಹಾಸ್ಯದ ಲೋಕವನ್ನೇ ಸೃಷ್ಟಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯಲ್ಲಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪುನೀತ್ ನಿರೂಪಿಸಿದರು. ಕುಮಾರಿ ಮೈತ್ರೇಯಿ ಪ್ರಾರ್ಥಿಸಿದರು. ಮೂಕಾಂಬಿಕಾ ಸತ್ಸಂಗ ಬಳಗದಿಂದ ನಾಡಗೀತೆ, ವರ್ಷ ಭರತನಾಟ್ಯ, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಮಕ್ಕಳಿಂದ ಸಾಮೂಹಿಕ ನೃತ್ಯ, ವೆಂಟಕರಾಘವ ಗಾಯನ ಕಾರ್ಯಕ್ರಮ ನಡೆಸಿದರು.
ಪೃಥು ಪಿ ಅದ್ವೈತ್ ಜಾನಪದ ಗಾಯನ, ಹರಣ್ ಪಿ. ಜೈನ್ ಕರಾಟೆ ಪ್ರದರ್ಶನ, ಸೋನಾ ಸಹೋದರಿಯರಿಂದ ನೃತ್ಯ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಮಹಿಳೆಯರಿಂದ ಸಾಮೂಹಿಕ ಜಾನಪದ ನೃತ್ಯ ಪ್ರದರ್ಶನ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಾಲುಮರದ ವೆಂಕಟೇಶ್, ಸಮಿತಿಯ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ಪುನೀತ್, ಪಾರ್ಶ್ವನಾಥ ಜೈನ್, ಮಂಜುನಾಥ್, ಮೋಹನ್, ರಚನಾ, ಪೂಜಾ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post