ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ಕುರಿತ ಎರಡು ಪತ್ರಗಳು ಅಧಿಕಾರಿಗಳಿಗೆ ದೊರೆತಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಈ ಪತ್ರಗಳು ಮಾವೋವಾದಿಗಳ ನಡುವೆ ಹರಿದಾಡಿದೆ.
ಇದರ ಆಧಾರದಂತೆ, 2016ರಲ್ಲೇ ಮೋದಿ ಹತ್ಯೆಗೆ ಸಂಚು ರೂಪಿಸಿಲಾಗಿತ್ತು. ಆದರೆ, 2017ರಲ್ಲಿ ಹತ್ಯೆ ಮಾಡಲು ಪೂರ್ಣ ಪ್ರಮಾಣದ ಯೋಜನೆಯನ್ನು ದುಷ್ಟರು ತಯಾರಿಸಿಕೊಂಡಿದ್ದರು.
ಇದರ ಆಧಾರದಲ್ಲಿ ಪುಣೆ, ರಾಂಚಿ, ಗೋವಾ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಉಸ್ಮಾಯಿನ್ ವಿಶ್ವವಿದ್ಯಾಲಯದ ಪ್ರೊ. ಸತ್ಯನಾರಾಯಣರಾವ್, ವರವರರಾವ್, ಕುರ್ಮನಾಥ ಹಾಗೂ ಪತ್ರಕರ್ತ ಕ್ರಾಂತಿ ಸೇರಿದಂತೆ ಹಲವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಅಧಿಕಾರಿಗಳಿಗೆ ದೊರೆತಿರುವ ಎರಡನೆಯ ಪತ್ರ ದೆಹಲಿ ಮೂಲಕ ಕಾರ್ಯಕರ್ತ ರೋನಾ ವಿಲ್ಸನ್ ಎಂಬುವವರ ನಿವಾಸದಲ್ಲಿ ದೊರೆತಿದ್ದು, ಈ ವೇಳೆ ಅಧಿಕಾರಿಗಳು ವಿಲ್ಸನ್ ಮತ್ತು ಇತರೆ ನಾಲ್ಕು ಮಂದಿಯನ್ನು ಬಂಧಿಸಿದ್ದರು.
ಇದಕ್ಕೂ ಮೊದಲು ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಮೊದಲ ಪತ್ರ ದೊರೆತಿದ್ದು, ಇದರಲ್ಲಿ ಈ ಹಿಂದೆ ಕೂಂಬಿಂಗ್ ಆಪರೇಷನ್ ನಲ್ಲಿ ಸಾವನ್ನಪ್ಪಿದ್ದ 39 ನಕ್ಸಲರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಕುರಿತು ಬರಹಗಳಿದ್ದವು ಎನ್ನಲಾಗಿದೆ. ಅಂತೆಯೇ ಪತ್ರದಲ್ಲಿ ಪ್ರತೀಕಾರಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ತಿಳಿಸಲಾಗಿತ್ತು ಎಂದು ಹೇಳಲಾಗಿದೆ.
Discussion about this post