ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಾಯಕ ನಟ ದಿ.ಡಾ.ವಿಷ್ಣುವರ್ಧನ್ ಅವರ ಪತ್ನಿ ಹಿರಿಯ ನಟಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್ #BharatiVishnuvardhan ಅವರ ಕುರಿತಾಗಿನ `ಬಾಳೆ ಬಂಗಾರ` #BaleBangara ಸಾಕ್ಷ್ಯ ಚಿತ್ರಕ್ಕಾಗಿ ನಟ ಅನಿರುದ್ ಜತ್ಕರ್ #AnirudhJatkar ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.
ಈ ಕುರಿತಂತೆ ಸ್ವತಃ ಮಾತನಾಡಿರುವ ನಟ ಅನಿರುದ್, ಇದೊಂದು ಅತೀವ ಸಂತೋಷದ ಕ್ಷಣಗಳಾಗಿದ್ದು, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪದ್ಮಶ್ರೀ #Padmasri ಪ್ರಶಸ್ತಿ ವಿಜೇತ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಕುರಿತ ಬಾಳೆ ಬಂಗಾರ ನನ್ನ ಕನಸಿನ ಸಾಕ್ಷ್ಯಚಿತ್ರವಾಗಿದೆ. ನಮ್ಮ ಹಿರಿಯರ ಸಾಧನೆಯ ಕುರಿತಾಗಿ ತಿಳಿಸುವ ಪ್ರಯತ್ನಗಳಿಗೆ ಇದು ನಾಂದಿಯಾಗಬೇಕು ಎಂಬುದು ನನ್ನ ಆಸೆ ಎಂದರು.
ನಮ್ಮ ಹಿರಿಯ ಹಾಗೂ ಹಿಂದಿನ ತಲೆಮಾರುಗಳ ಜೀವನ, ಸಾಧನೆಗಳ ಕುರಿತಾಗಿ ಇಂದಿನ ಹಾಗೂ ಮುಂದಿನ ತಲೆಮಾರುಗಳಿಗೆ ತಿಳಿಸುವ ಕಾರ್ಯಗಳು ಹೆಚ್ಚು ಹೆಚ್ಚಾಗಿ ಆಗಬೇಕು. ನಮ್ಮ ಹಿರಿಯರ ಬಗ್ಗೆ ನಮಗೆ ಪರಿಚಯ ಆದಾಗ, ನಮ್ಮ ಬುನಾದಿ, ನಮ್ಮ ಭವ್ಯ ಇತಿಹಾಸ, ದೇಶ, ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಕುರಿತಾಗಿ ಪರಿಚಯವಾದಾಗ ನಮ್ಮ ಹಿರಿಮೆ ಇನ್ನೂ ಏರಿಕೆಯಾಗುತ್ತದೆ. ಮಾತ್ರವಲ್ಲ, ಮುಂದಿನ ತಲೆಮಾರಿಗೆ ಇದು ಪ್ರೇರಣೆಯಾಗುತ್ತದೆ ಎಂದರು.
ಇಂತಹ ಪ್ರಯತ್ನಗಳು ನಿರಂತರವಾಗಿ ಆಗಬೇಕು. ಹಿರಿಯರ ಜೀವನ ಹಾಗೂ ಸಾಧನೆಯ ಪ್ರಯಾಣದ ಕುರಿತಾಗಿ ದಾಖಲೆಯ ಸ್ವರೂಪದಲ್ಲಿ ಇರಬೇಕು ಎಂದರು.
ಇಂದು ಈ ಪ್ರಶಸ್ತಿ ಸಂದಿರುವ ಹಿಂದಿನ ಕಾರಣಕರ್ತರು ನನ್ನ ಇಡಿಯ ತಂಡ. ನನ್ನ ಶ್ರೀಮತಿಯವರಾದ ಕೀರ್ತಿ ವಿಷ್ಣುವರ್ಧನ್ ಇದರ ನಿರ್ಮಾಪಕರು. ಇವರ ಹಾಗೂ ಇಡಿಯ ತಂಡದ ಸಹಕಾರ, ನನ್ನ ಕುಟುಂಬವೇ ಆಗಿರುವ ಹಿತೈಷಿಗಳು, ಅಭಿಮಾನಿಗಳು, ಮಾಧ್ಯಮದವರ ಸಹಕಾರ ಹಾಗೂ ಬೆಂಬಲದಿಂದ ಇದು ಸಾಧ್ಯವಾಗಿದೆ. ಇದು ನನ್ನ ಯಶಸ್ಸಲ್ಲ. ಬದಲಾಗಿ ಎಲ್ಲರ ಪ್ರೋತ್ಸಾಹ ಹಾಗೂ ಹಾರೈಕೆಗೆ ದೊರೆತ ಫಲವಾಗಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಪ್ರತಿಭಾನ್ವಿತ ನಟ ಅನಿರುದ್ ಜತ್ಕರ್ ಅವರು, ತಮ್ಮ ಅಪರೂಪದ ಪ್ರಯತ್ನಗಳಿಂದಾಗಿ ಈಗಾಗಲೇ ಸಾಲು ಸಾಲು ದಾಖಲೆಗಳನ್ನು #Record ನಿರ್ಮಿಸಿ, ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕಾಗಿ ಸಂಶೋಧನೆ, ಬರವಣಿಗೆ, ನಿರೂಪಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಇವರ ಹೆಸರಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಕಲಾ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ದಾಖಲಾಗಿದೆ.
ಉತ್ತಮ ಸಾಕ್ಷ್ಯಚಿತ್ರವೊಂದರ ಮೂಲಕ ಕರ್ನಾಟಕವನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿರುವ ನಟ ಅನಿರುದ್ ಜತ್ಕರ್ ಅವರಿಗೆ ಕಲ್ಪ ಮೀಡಿಯಾ ಹೌಸ್(ರಿ.) ಮನದುಂಬಿ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post