ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಾಚೀನ ಋಷಿಮುನಿಗಳು ಜ್ಞಾನದ ದ್ರಷ್ಟಾರರಾಗಿದ್ದು, ಇಂದು ಭಾರತ ಹೊಂದಿರುವ ಅಪಾರ ಜ್ಞಾನ ಸಂಪತ್ತಿನ ಹಿಂದೆ ಅವರ ಕೊಡುಗೆ ಅಪಾರವಾಗಿದೆ. ಹೀಗಾಗಿ ಋಷಿಗಳ ಋಣವನ್ನು ತೀರಿಸುವ ಬದ್ಧತೆ ಸಮಾಜದ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ನವದೆಹಲಿಯಲ್ಲಿ (NewDelhi) ನಡೆಯುತ್ತಿರುವ ಶ್ರೀ ಪೇಜಾವರ (Pejavara Shree) ಶ್ರೀಗಳ ಚಾತುರ್ಮಾಸ್ಯ 2026ರ ಅಂಗವಾಗಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಶ್ರೀಗಳಿಗೆ ‘ಸನಾತನ ಧರ್ಮ ಪ್ರವರ್ತನಾಚಾರ್ಯ’ ಎಂಬ ಗೌರವ ಉಪಾಧಿಯನ್ನು ಪ್ರದಾನ ಮಾಡಿ ಗುರುವಂದನೆ ಸಲ್ಲಿಸಿತು.
ಗೌರವ ಸ್ವೀಕರಿಸಿದ ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂಸ್ಕೃತ ಭಾಷೆಯಲ್ಲಿಯೇ ಅನುಗ್ರಹ ಸಂದೇಶ ನೀಡಿದರು. ಭಾರತೀಯ ಜ್ಞಾನ ಪರಂಪರೆಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಅದರ ಪ್ರಸರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.
Delhi: ಬ್ರಹ್ಮಸೂತ್ರ ಭಾಷ್ಯದ ಹಿಂದಿ ಆವೃತ್ತಿ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಕಾಶನಗೊಂಡ ಜಗದ್ಗುರು ಶ್ರೀ ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಹಿಂದಿ ಆವೃತ್ತಿಯನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು.
ಭಾರತೀಯ ತತ್ತ್ವಶಾಸ್ತ್ರ ಹಾಗೂ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿರುವ ಬ್ರಹ್ಮಸೂತ್ರ ಭಾಷ್ಯದ ಹಿಂದಿ ಆವೃತ್ತಿಯ ಪ್ರಕಟಣೆಯು ಈ ಜ್ಞಾನವನ್ನು ಹಿಂದಿ ಭಾಷಿಕ ವಲಯದ ಓದುಗರಿಗೂ ತಲುಪಿಸಲು ಸಹಕಾರಿಯಾಗಲಿದೆ.
Also read>> ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ರಾಘವೇಶ್ವರ ಶ್ರೀ
ಋಷಿಗಳ ಜ್ಞಾನ ಪರಂಪರೆ ಮುಂದುವರಿಯಲಿ
ಭಾರತೀಯ ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯ ಕುರಿತು ಮಾತನಾಡಿದ ಶ್ರೀಗಳು, ಪ್ರಾಚೀನ ಋಷಿಮುನಿಗಳು ಕೇವಲ ಧಾರ್ಮಿಕ ಪರಂಪರೆಯ ಪ್ರತಿನಿಧಿಗಳಲ್ಲ, ಅವರು ಜ್ಞಾನದ ದ್ರಷ್ಟಾರರಾಗಿದ್ದರು ಎಂದು ಹೇಳಿದರು. ವೇದ, ಉಪನಿಷತ್ತು, ದರ್ಶನಗಳು ಸೇರಿದಂತೆ ಭಾರತೀಯ ಜ್ಞಾನ ಸಂಪತ್ತಿನ ಬಹುಪಾಲು ಋಷಿ ಪರಂಪರೆಯ ಕೊಡುಗೆಯಾಗಿದೆ. ಇಂತಹ ಮಹಾನ್ ಪರಂಪರೆಯ ಋಣವನ್ನು ಸಮಾಜ ಮರೆಯಬಾರದು ಎಂದು ಅವರು ಕರೆ ನೀಡಿದರು.
ಋಷಿಗಳಿಂದ ದೊರೆತ ಜ್ಞಾನವನ್ನು ಅಧ್ಯಯನ ಮಾಡುವುದು, ಸಂರಕ್ಷಿಸುವುದು ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕವೇ ಋಷಿ ಋಣವನ್ನು ತೀರಿಸುವ ಪ್ರಯತ್ನ ನಡೆಯಬೇಕು ಎಂದು ಶ್ರೀಪಾದರು ತಿಳಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ವರಖೇಡಿ ಶ್ರೀನಿವಾಸ ಆಚಾರ್ಯ ವಹಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುರಳೀಮನೋಹರ ಪಾಠಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಸುಕಾಂತ ಕುಮಾರ ಸೇನಾಪತಿ, ಡಾ. ಪೂರಣ್ ಮಲಗುಪ್ತ, ಶ್ರೀಧರ ಮಿಶ್ರಾ, ಲಲಿತಕುಮಾರ ತ್ರಿಪಾಠಿ, ಸಂಜೀವ್ ಗೋಯಲ್, ಲೀನ್ ಸಕ್ಕರ್‌ವಾಲ್, ರಾ.ಗಾ. ಮುರಳೀಕೃಷ್ಣ, ಡಾ. ವಿಠೋಬಾಚಾರ್ಯ ಹಾಗೂ ಪವನಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಮಧುಕೇಶ್ವರ ಭಟ್ಟರು ಮಾನಪತ್ರ ವಾಚಿಸಿದರು. ಡಾ. ಗಣೇಶ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಪೇಜಾವರ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ನಡೆದ ಈ ಗೌರವಾರ್ಪಣೆ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ಭಾರತೀಯ ಸಂಸ್ಕೃತಿ, ಸಂಸ್ಕೃತ ಭಾಷೆ ಮತ್ತು ಸನಾತನ ಜ್ಞಾನ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








