ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ತೋಟಗಾರಿಕಾ ಇಲಾಖೆ ಕೆಎಂಎಫ್ ಹಾಲು ಮಾರಾಟ ಮಳಿಗೆಗಳಲ್ಲಿ ರೈತರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ತೋಟಗಾರಿಕಾ ಇಲಾಖೆ ನಿರ್ದೇಶಕರು, ರೈತರು ತಾವು ಬೆಳೆದ ಹೂ, ಹಣ್ಣು ಹಾಗೂ ತರಕಾರಿಗಳನ್ನು ಕೆಎಂಎಫ್ ಮಳಿಗೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಕೆಲವು ನಂದಿನಿ ಮಳಿಗೆ ಪಕ್ಕದಲ್ಲಿ ಹಾಫ್ ಕಾಮ್ಸ್ ಮಳಿಗೆ ಇದೆ. ಅಂತಹ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಾದ್ಯಂತ ಕೆಎಂಎಫ್ ಹಾಗೂ 14 ಜಿಲ್ಲಾ ಹಾಲು ಒಕ್ಕೂಟ ಸೇರಿ 1500 ಕ್ಕಿಂತ ಹೆಚ್ಚು ಮಳಿಗೆಗಳಿವೆ. ರೈತರು ಈ ಸ್ಥಳಗಳಲ್ಲಿ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಬಹುದು. ಹೀಗೆ ಮಾರಾಟಕ್ಕೆ ಬಂದ ರೈತರಿಗೆ ಕೆಎಂಎಫ್ ವತಿಯಿಂದ ಪ್ರತಿನಿತ್ಯ ಉಚಿತವಾಗಿ ನೀರು, ಮಜ್ಜಿಗೆ, ಸ್ಯಾನಿಟೈಸರ್, ಕೈಗವಚ(ಗ್ಲೌಸ್), ಮಾಸ್ಕ್ ಗಳನ್ನ ನೀಡಲಾಗುತ್ತೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಮಾರಾಟ ಮಾಡಬಹುದು. ತೂಕದ ಯಂತ್ರ ಸೇರಿದಂತೆ ಹಣ್ಣು, ತರಕಾರಿ ಮಾರಾಟಕ್ಕೆ ಬೇಕಾದ ಇತರೆ ಸಾಮಗ್ರಿಗಳನ್ನು ರೈತರೆ ತರಬೇಕು. ಮಾರಾಟಕ್ಕೆ ಬರುವ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರತಿ ಹತ್ತು ಮಳಿಗೆಗೆ ಒಬ್ಬರನ್ನ ಮೇಲ್ವಿಚಾರಕರನ್ನು ನೇಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post