ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 12 ಗಂಟೆಯಿಂದ ಸಂಪೂರ್ಣ ಇಡಿಯ ರಾಷ್ಟ್ರ ಲಾಕ್’ಡೌನ್ ಘೋಷಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ರಾತ್ರಿಯಿಂದ ಮೂರು ವಾರಗಳ ಕಾಲ ಅಂದರೆ 21 ದಿನಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಯಾರೂ ಮನೆಯಿಂದ ಹೊರಕ್ಕೆ ಬರುವಂತಿಲ್ಲ ಎಂದಿದ್ದಾರೆ.
ಕೊರೋನಾ ವೈರಸ್ ತಡೆಗಟ್ಟಲು ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದೆವು. ನಮ್ಮ ಕರೆಗೆ ಓಗೊಟ್ಟು ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಬೆಂಬಲಿಸಿದ್ದು ಸಂಸತ ಮೂಡಿಸಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಈ ಮಹಾ ಮಾರಿಯನ್ನು ದೇಶದಿಂದ ಓಡಿಸಬೇಕಿದೆ ಎಂದರು.
ವಿಶ್ವದ ಸಮರ್ಥ ರಾಷ್ಟ್ರಗಳಿಗೂ ಕೊರೋನಾ ವೈರಸ್ ಸಂಕಷ್ಟ ತಂದಿದೆ. ಎಷ್ಟೇ ಪ್ರಯತ್ನ ಪಟ್ಟರೂ ಇದು ನಿಯಂತ್ರಣಕ್ಕೆ ಸಿಲುಕುತ್ತಿಲ್ಲ. ಇದರ ವಿರುದ್ದ ಹೋರಾಡುವಲ್ಲಿ ಒಂದೇ ಮಹತ್ವದ ಮಾರ್ಗ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಸೋಂಕು ಹರಡುವ ಲಿಂಕ್ ಅನ್ನು ಕತ್ತರಿಸಬೇಕಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಇಟಲಿ, ಅಮೆರಿಕ, ಜರ್ಮನಿ, ಫ್ರಾನ್ಸ್, ಸ್ಪೇನ್ ಅನೇಕ ದೇಶಗಳು ಲಾಕ್‌ಡೌನ್ ಆಗಿವೆ. ಆ ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯಿದೆ. ಆ ದೇಶಗಳಲ್ಲೇ ಕರೊನಾ ನಿಯಂತ್ರಿಸಲು ಆಗ್ತಿಲ್ಲ. ಕರೊನಾ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ದೇಶದ 130 ಕೋಟಿ ಜನತೆ ಮನೆಯಲ್ಲೇ ಇರಿ. ಶೇ. 100ರಷ್ಟು ಸರ್ಕಾರಿ ನಿಯಮ ಪಾಲಿಸಿದ್ರೆ ಕರೊನಾದಿಂದ ಬಚಾವಾಗಬಹುದು. ನಮ್ಮ ಮುಂದೆ ಇದೊಂದೆ ಮಾರ್ಗ ಇರುವುದು. ಮನೆಯಿಂದ ಯಾರೂ ಕೂಡ ಹೊರಬರಬಾರದು. ಏನೆ ಆಗಲಿ ಮನೆಯಲ್ಲೇ ಇರಬೇಕು, ಪ್ರಧಾನಿಮಂತ್ರಿ ಸೇರಿ ಎಲ್ಲರೂ ಮನೆಯಲ್ಲೇ ಇರಬೇಕು ಎಂದರು.
24 ಗಂಟೆಯೂ ಕೆಲಸ ಮಾಡುವ ನಮ್ಮ ಮಾಧ್ಯಮ ಪ್ರತಿನಿಧಿಗಳು ಹಾಗೂ ಸದಾ ಕರ್ತವ್ಯದಲ್ಲಿರುವ ಪೊಲೀಸರು, ಕೊರೋನ ವಿರುದ್ಧ ನೇರವಾಗಿ ಹೋರಾಡುತ್ತಿರುವ ವೈದ್ಯ ಸಮೂಹದ ಆರೋಗ್ಯದ ಕುರಿತಾಗಿಯೂ ಸಹ ನಾವು ಚಿಂತಿಸಬೇಕಿದೆ ಎಂದರು.
ಜಾನ್ ಹೈ ತೋ ಜಹಾನ್ ಹೈ ಎಂದಿರುವ ಪ್ರಧಾನಿಯವರು, ಮನೆಗಳಲ್ಲೇ ಕುಳಿತು ನಿಮ್ಮ ಕುಟುಂಬದ ಕುರಿತು ಯೋಚಿಸಿ. ಉತ್ತಮ ಚಿಂತನೆಗಳತ್ತ ನಿಮ್ಮ ಚಿತ್ತ ಹರಿಸಿ. 21 ದಿನ ನಿಮ್ಮ ಮನೆಯಲ್ಲೇ ಇಲ್ಲದಿದ್ದರೆ, 21 ವರ್ಷ ಹಿಂದೆ ಹೋಗುತ್ತೀರಿ. ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಸರ್ಕಾರ ವಿಧಿಸಿರುವ ಕಾನೂನನ್ನು ಪಾಲಿಸಿ. ಮನೆಗಳಿಂದ ಹೊರಕ್ಕೆ ಬರದೇ ಸರ್ಕಾರಕ್ಕೆ ಸಹಕಾರ ನೀಡಿ ಎಂದಿದ್ದಾರೆ.
ಕೊರೋನಾ ಮಹಾಮಾರಿ ವಿರುದ್ಧ ಹೋರಾಡಲು ನಮಗೆ 15 ಸಾವಿರ ಕೋಟಿ ರೂ. ಹಣದ ಅಗತ್ಯವಿದ್ದು, ಈ ಹಣವನ್ನು ನಾವು ಇದಕ್ಕಾಗಿಯೇ ಮೀಸಲಿಟ್ಟಿದ್ದೇವೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post