ಚಳ್ಳಕೆರೆ: ಯುವ ಉತ್ಸಾಹಿ ಸಂಜೀವಿನಿ ಗ್ರೂಪ್ಸ್‌ನ ಇಂಗಳದಾಳು ಡಿ. ರಂಗಸ್ವಾಮಿ ಅಪಘಾತ ನಡೆದ ವಿಷಯ ತಿಳಿದು ಅಪಘಾತದ ಸ್ಥಳಕ್ಕೆ ಧಾವಿಸುವ ಮೂಲಕ ನೂರಾರು ಗಾಯಾಳುಗಳ ರಕ್ಷಣೆಗೆ ಮುಂದಾಗುತ್ತಿರುವುದು ಚಿತ್ರದುರ್ಗದ ನಾಗರಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯ ಅಪಘಾತ ವಲಯಗಳಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ಮತ್ತು ಅಪಘಾತ ನಡೆದ ಸ್ಥಳಗಳಿಗೆ ಕ್ಷಣಾರ್ಧದಲ್ಲಿ ಧಾವಿಸಿ ಸಹಾಯ ಹಸ್ತ ಚಾಚುವ ಚಿತ್ರದುರ್ಗದ ಡಿ. ರಂಗಸ್ವಾಮಿ ಮತ್ತು ಇವರ ಸಂಜೀವಿನ ಗ್ರೂಪ್ಸ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯ.
ಚಿತ್ರದುರ್ಗದ ಸಾಮಾನ್ಯ ಕುಟುಂಬದ ಡಿ. ರಂಗಸ್ವಾಮಿ ತಾವು ಮಾಡುತ್ತಿರುವ ಕಾರ್ಯದಿಂದ ಜೀವ ರಕ್ಷಕ ಎಂದೆನಿಕೊಂಡಿದ್ದಾರೆ. ಇವರು ಸಂಜೀವಿನ ಎಂಬ ಸಂಘಟನೆ ಸ್ಥಾಪಿಸಿ 200 ಸದಸ್ಯರನ್ನು ಸೇರಿಸಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಕಾರ್ಯವನ್ನು ಅನೇಕ ಸಂಘಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.
ಪ್ರಸ್ತುತ ಈ ಬಗ್ಗೆ ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್, ಹಲವು ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಗುತ್ತಿದೆ.
ಜತೆಗೆ ಸಂಜೀವಿನಿ ಗ್ರೂಪ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಿ. ರಂಗಸ್ವಾಮಿ ತಮ್ಮ ಸಂಘವನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯದಾದ್ಯಂತ ವಿಸ್ತರಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಜು.28ರಂದು ಬೆಳಿಗ್ಗೆ 11.30ಕ್ಕೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆಗಳು ಮತ್ತು ನಾಗರಿಕರು ಆಗಮಿಸಿ ಬೆಂಬಲ ಸೂಚಿಸಲು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್, ಟ್ರಸ್ಟ್ ಸದಸ್ಯ ಮತ್ತು ಚಿತ್ರದುರ್ಗ ರಾಜವಂಶಸ್ಥ ರಾಜಾ ಪರಶುರಾಮ ನಾಯಕ ಅರಸು ಕೋರಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post