ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೊಂದರೆಗೆ, ಕಷ್ಟಕ್ಕೆ ಸಿಲುಕಿದರೆ ಶನಿಕಾಟ ಎನ್ನುತ್ತೇವೆ. `ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ’ ಎಂದು ಕಂಪ್ಲೇಂಟ್ ಮಾಡುತ್ತೇವೆ. ಇಷ್ಟಕ್ಕೂ ಈ ಶನಿ ಯಾರು? ಪುರಾಣದಲ್ಲಿ ಇವನ ಮಹತ್ವವೇನು?
ಈ ವಿಶ್ವದ ಸೃಷ್ಟಿಯ ಮೊದಲ ಏನಿತ್ತು? ಅದೇ ಶೂನ್ಯ. ವಿಶ್ವದ ನಾಶದ ನಂತರ ಏನಿರುವುದು? ಅದೂ ಶೂನ್ಯ. ಈ ವಿಶ್ವದ ಜೀವನ ಈ ಎರಡೂ ಶೂನ್ಯಗಳ ಅಂತರ. ಅದೇ ಅನಂತ ಆಕಾಶ. ಆಕಾಶವೇ ಅವಕಾಶ. ಈ ಅವಕಾಶದ ಆಕಾಶವೇ ಶೂನ್ಯ. ಶೂನ್ಯದ ರೂಪ ವಿಶ್ವರೂಪವೇ ಆಗಿದೆ. ಇದನ್ನೇ `ವಿಶ್ವತಃಚಕ್ಷುರುತ ವಿಶ್ವತೋಮುಖೋ..’ ಎಂದಿರುವುದು.
ಈ ವಿಶ್ವವೊಂದು ದೈವಿಕ ಸೃಷ್ಟಿ. ಇದಕ್ಕೆ ದಿವ್ಯವಾದ ಅನಂತ ದೃಷ್ಟಿ. ಅನಂತ ಆಕಾಶದ ಅರಿವು ಅವ್ಯಕ್ತ. ಅವ್ಯಕ್ತ ಎನ್ನುವುದೇ ಅದರ ಪ್ರಧಾನ ಗುಣ. ಸೃಷ್ಟಿಯ ಸಕಲ ಚರಾಚರಗಳು ಇದರ ಅಧೀನ. ಈ ವಿಶ್ವದ ಮೂಲ ಅಂಧಕಾರಮಯ. ಯಾವ ಅವಕಾಶವೂ ಇಲ್ಲದ ನಿದ್ರಾವಸ್ಥೆ. ಈ ಕತ್ತಲು ಜಡತ್ವವೇ ಶನಿ. ಶನಿ ನಿಶಾಚಾರಿ, ನಿರ್ಗುಣ, ನಿರಾಕಾರ. ಕುದಿಯುವ ಲಾವಾರಸವಾಗಿದ್ದ ವಿಶ್ವಶೂನ್ಯಕ್ಕೆ (ಗೋಲಾಕಾರ) ವಾಯುಚೈತನ್ಯವನ್ನು ಉಂಟುಮಾಡಿದವನು. ವಿಶ್ವಪಾಸ ಅವಯವನಾದವನು. ವಾಯುತತ್ವ ದೇವನಾದವನು.
ದ್ವಾದಶ ರಾಶಿಗಳಲ್ಲಿ ಮಕರ, ಕುಂಭ ರಾಶಿಗಳ ಅಧಿಪತ್ಯ ಶನಿಯದು. ವಿಶ್ವದ ಮೂಲಾಧಾರವೇ ಇದು. ನಂತರ ಮೀನರಾಶಿಯಲ್ಲಿ ಜಲಚರ ಜೀವಿಗಳ ಉತ್ಪತ್ತಿ ಮತ್ಸ್ಯಾವತಾರ. ಮುಂದೆ ಮೇಷ. ಇದು ಸೂರ್ಯ ಲೋಕ. ಇಲ್ಲಿ ಜೀವಾವಸ್ಥೆ ಪ್ರಕಾಶಮಾನ.
ಕರಾಳ ಕತ್ತಲನ್ನು ಕತ್ತರಿಸಲು ಸೂರ್ಯ-ಚಂದ್ರರು ಬೆಳಕಿನ ಕಣ್ಣುಗಳಾದರು. ತಮಸ್ಸನ್ನು ಸುಡಲು ಅಗ್ನಿಯೇ ಮೂರನೇ ಕಣ್ಣಾಯಿತು. ಶುದ್ಧತೆಗೆ ಗಂಗೆ ಬಂದಳು. ಈ ಸಲಕರಣೆಗಳು ಈಶ್ವರನಿಗೆ ಅವ್ಯಕ್ತದಿಂದ ದತ್ತ . ಈ ಕಾರಣ ಜಡತ್ವವಾದ ತಮಸ್ಸಿಗೆ ಅಭಿಮಾನಿ ದೇವತೆ ಏಶ್ವರನು ಅವನು ತ್ರಿನೇತ್ರನು.ಬೆಳಕಿನ ಅರಿವಿನಿಂದ ತಿಳಿದದ್ದು ಕತ್ತಲೆ. ಸೂರ್ಯನ ಮಗನೇ ಶನಿ. ಈತ ಕತ್ತಲೆಯ ಅಂದರೆ ಕಪ್ಪು ಸೂರ್ಯ. ಸಕಲ ಜೀವರಾಶಿಯ ಚೈತನ್ಯ. ಈ ಜೀವಚೈತನ್ಯದಲ್ಲಿ ಮೈಮರೆಯದಂತೆ ಮಾಡುವವನು ಶನಿ. ಸಿಹಿ ತಿಳಿಯಬೇಕಾದರೆ ಕಹಿಯ ಅನುಭವವಾಗಬೇಕು. ಕಷ್ಟವಿಲ್ಲದೆ ಸುಖವಿಲ್ಲ. ಇದೇ ಅಂತರಾರ್ಥ. ಮಗ ಶನಿಯಿಲ್ಲದೆ ಸೂರ್ಯ ತಂದೆಯಲ್ಲ.ಸೂರ್ಯನದು ವೇಗದ ಗತಿಯಾದರೆ ಶನಿಯದು ಮಂದಗತಿ, ಕೂರ್ಮಗತಿ. ಸೂರ್ಯನು ಹೊಳೆಯಿಸುತ್ತಾನಾದರೆ ಶನಿ ಕೊಳೆಯಿಸುತ್ತಾನೆ. ಸೂರ್ಯ ತಲೆಯಾದರೆ ಶನಿ ಪಾದ.
ಅಂತರ್ಮುಖ ಅರಿವು
ಜನ್ಮ-ಜೀವನ ಆಗುಹೋಗಗಳ ರಾಶಿ. ಈ ಜೀವರಾಶಿಗಳಿಗೆ ಕ್ರಿಯೆ (ಕರ್ಮ) ಇದೆ. ಆಗ ಈ ಕ್ರಿಯೆಯ ಗುಣ ಇವನಿಗೆ. ತನ್ನ ಸ್ವಂತ ಗುಣವೇ ನಾಶ. ಇದನ್ನು ಎಚ್ಚರಿಸುವವನೇ ಶನಿ.
ವರ್ತಮಾನದ ಜನ್ಮಕ್ಕೆ ಭೂತಕಾಲದ ಜನ್ಮದ ಅವಶೇಷವಿದೆ. ಈ ಜನ್ಮದ ಕರ್ಮಶೇಷ ಮೋದಿನ ಜನ್ಮಕ್ಕೂ ಕಾರಣವಾಗುತ್ತದೆ. ಆದಿ ದೈವಿಕ, ಆದಿ ಭೌತಿಕ ಮತ್ತು ಆದ್ಯಾತ್ಮಿಕ ಈ ಮೂರು ಬಳೆಗಳು ಶನಿಯ ಕವಚವಾಗಿವೆ. ಈ ತಾಪತ್ರಯ ಋಣ ವಿಮೋಚನೆಯು ಶನಿಯ ಕಾರ್ಯಕಲಾಪವಾಗಿದೆ. ಅದಕ್ಕೆ ಮೃತ್ಯುಕಾರಕ ಸಂಬಂಧದ ಕ್ರಿಯಾಚರಣೆಯಲ್ಲಿ ಶನಿಯ ಧಾನ್ಯ ತಿಲದ ಬಳಕೆಯಾಗುತ್ತದೆ. ಎಲ್ಲಾವೂ ಶನಿಯ(ಶೂನ್ಯ)ಲ್ಲಿ ಲೀನವಾಗಬೇಕು. ಮತ್ತೆ ಪ್ರಾದೂರ್ಭಾವ ಪಡೆಯಬೇಕು . `ಪುನರಪಿ ಜನನಂ ಪುನರಪಿ ಮರಣಂ’.
ಈ ಅವ್ಯಕ್ತವಾದುದನ್ನು ಅಭಿವ್ಯಕ್ತಿಗೋಳಿಸಲು ಆಮೂರ್ತವಾದುದನ್ನು ಮೂರ್ತಗೋಳಿಸಲು ಪುರಾಣಗಳು ಶನಿ ಕಥೆಗಳನ್ನು ಹೇಳಿವೆ. ಅವು ಅವನ ರೂಪುರೇಷೆ ಚಹರೆಗಳನ್ನು ಸಾರುತ್ತವೆ. ಪ್ರಭಾವವೂ ‘ಅಹಂತತ್ವ’ ಇದು ಶಾಶ್ವತವೆನ್ನುವ ಭ್ರಮೆ ಶೂನ್ಯವಾಗುವುದೇ ಈ ಕಾರಣ ‘ ಜಾತಸ್ಯ ಮರಣಂ ಧ್ರುವಂ ’ ಎಂದರು.
ಶನಿಪ್ರದೋಷ – ಶನಿಕಾಟ ನಿವಾರಣೆ
ಶನಿಯ ಅಷ್ಟೋತ್ತರ ನಾಮಾವಲಿಯಲ್ಲಿಯೂ ಶನಿಯನ್ನು ಪುರಾತನೆಯ, ನಿತ್ಯಾಯ, ನಿತ್ಯ ಶುಧ್ದಾಯ, ಪ್ರಕಾಶಾಯ ಶ್ರೀಶನೈಶ್ಚರಾಯ ನಮಃ ಎಂದಿದ್ದಾರೆ. ಇವನನ್ನು ಧ್ಯಾನಿಸುವಲ್ಲಿಯೂ ‘ಭಾಸ್ವಂತಂ ದಿವ್ಯ ತೇಜಃ ಕರಕಮಲಯತಂ ಸ್ವರ್ಣವರ್ಣಪ್ರಭಾಭಿಃ| ವಿಶ್ವಾಕಾಶಾವಕಾಶ ಗ್ರಹಪತಿ ಶಿಖರೇ ಭಾತಿ ಯಬ್ಬೇದಯಾ ದ್ರೌ ಸರ್ವಾನಂದಪ್ರದಾತಾ ಹರಿಹರ ನಮಿತಃಪಾತುಮಾಲ ವಿಶ್ವಚಕ್ಷುಃ ಎಂದಿರುವರು.ಸೂರ್ಯಾತ್ಮಾ ತ್ರಿಭುವನೇಶ್ವರೋ ದೇವತಾ ಎಂದೇ ಶನಿ ಪ್ರಶಂಸಿಸಲ್ಪಟ್ಟಿದ್ದಾನೆ.
‘ಸೂರ್ಯಪುತ್ರಾಯ ವಿದ್ಮಹೇ| ಶನೈಶ್ಚರಾಯ ಧೀಮಹೀ| ತನ್ನೋ ಮಂದಃ ಪ್ರಚೋದಯಾತ್ ‘ ಎಂಬುದು ಶನಿಯ ಗಾಯತ್ರ್ರಿಯಾಗಿದೆ.ಕಷ್ಟಕಾರ್ಪಣ್ಯಗಳ ಅರಿವನ್ನುಂಟು ಮಾಡಿ ಅದರಿಂದ ಬಿಡುಗಡೆಯ ದಾರಿಯನ್ನು ತೋರಿ ನಮ್ಮನ್ನು ಸ್ಥಿರಗೊಳಿಸುವವನೂ, ಸ್ಥಿತಪ್ರಜ್ಞನನ್ನಾಗಿಸುವವನೂ ಶನೈಶ್ಚರನಾಗಿದ್ದಾನೆ.
‘ಬುಧ ಕಾಡಿ ಬದುಕಿದವರಿಲ್ಲ, ಶನಿ ಕಾಡಿ ಸತ್ತವರಿಲ್ಲ’ ಮಾತಿದೆ. ಬುಧ ಅಂದರೆ ಭೌದ್ಧಿಕತೆ ನಾಶವಾದರೆ ಇದ್ದೂ ಸತ್ತಂತಯೇ, ಆದರೆ ಶನಿ ಕಾಡಿದರೂ ಪೀಡಿಸಿದರೂ ಕೊನೆಗೆ ನಿಜತ್ವವನ್ನು ನೀಡುತ್ತಾನೆ. ಶನಿವ್ರತಕತೆಯಲ್ಲಿ ಬರುವ ವಿಕ್ರಮ ಮಹಾರಾಜನ ಕತಯೇ ಇದಕ್ಕೆ ಸಾಕ್ಷಿ.
ನಮ್ಮ ನೆರಳಾಗಿ ಕಣ್ತೆರೆಸುವ ಕರ್ಮಫಲದಾತ: ಶನೈಶ್ಚರ
ವಿಕ್ರಮನ ಕಥೆ
ಪೂರ್ವದಲ್ಲಿ ಉಜ್ಜಯಿನಿಯಲ್ಲಿ ವಿಕ್ರಮನೆಂಬ ರಾಜನಿದ್ದ. ಅವನು ನ್ಯಾಯ, ಧರ್ಮ, ಪ್ರಜಾಪ್ರೀತಿಯಿಂದ ರಾಜ್ಯವಾಳುತ್ತಿದ್ದನು. ಒಮ್ಮೆ ರಾಜನ ಬಳಿಗೆ ದಟ್ಟ ದರಿದ್ರನಾದ ಬ್ರಾಹ್ಮಣನೊಬ್ಬ ಬಂದ. ಅವನ ಕಷ್ಟ ಕಾರ್ಪಣ್ಯ ತಿಳಿದು ವಿಕ್ರಮಾದಿತ್ಯನು ಕುಂಬಳಕಾಯಿ ಒಳಗೆ ಧನಕನಕಗಳನ್ನಿಟ್ಟು ಅವನಿಗೆ ಕೊಟ್ಟನು. ಕುಂಬಳಕಾಯಿ ಹಿಡಿದುಕೊಂಡು ಬ್ರಾಹ್ಮಣ ಹೋಗುತ್ತಿರುವಾಗ ಕಳ್ಳರು ಅದನ್ನು ಅಪಹರಿಸಿಬಿಟ್ಟರು.
ಮರುದಿನ ಮತ್ತೆ ಬ್ರಾಹ್ಮಣನು ವಿಕ್ರಮಾದಿತ್ಯನ ಬಳಿ ಬಂದು ನಡೆದುದೆಲ್ಲವನ್ನೂ ಹೇಳಿ ಬೇಡಿದನು. ಈ ಬಾರಿ ವಿಕ್ರಮಾದಿತ್ಯನು ಒಂದು ಪೆಟ್ಟಿಗೆಯಲ್ಲಿ ನಗನಾಣ್ಯ ತುಂಬಿಸಿ ದೂತರೊಂದಿಗೆ ಬ್ರಾಹ್ಮಣನನ್ನು ಕಳುಹಿಸಿಕೊಟ್ಟನು. ದೂತರು ಬ್ರಾಹ್ಮಣನ ಮನೆಯಲ್ಲಿ ಪೆಟ್ಟಿಗೆಯನ್ನಿಟ್ಟರು. ಆ ಕ್ಷಣವೇ ಪೆಟ್ಟಿಗೆಯು ಇಬ್ಭಾಗವಾಗಿ ಭೂಗತವಾಯಿತು. ವಿಕ್ರಮಾದಿತ್ಯನು ಪಂಡಿತರನ್ನು ಕರೆಸಿ ಕೇಳಿದಾಗ ಅವರು `ಇದು ಶನಿಯ ಪೀಡೆ’ ಎಂದರು. `ಶನೈಶ್ಚರನು ಜನ್ಮವಾಗುತ್ತಲೇ ತನ್ನ ಜನಕವಾದ ಸೂರ್ಯನನ್ನು ವ್ರಕ ದೃಷ್ಟಿಯಿಂದ ನೋಡಿದ್ದನು. ಇದರಿಂದ ಸೂರ್ಯನೇ ವ್ಯಾಧಿಪೀಡಿತನಾಗಿದ್ದನು. ಯಾರ ಜನ್ಮ ರಾಶಿಯಿಂದ ಐದನೇ ರಾಶಿಯಲ್ಲಿ ನಿಲ್ಲುತ್ತಾನೋ ಆಗ ಕಷ್ಟವನ್ನು ಉಂಟು ಮಾಡುತ್ತಾನೆ. ಅಷ್ಟಮರಾಶಿಯಲ್ಲಿದ್ದರೆ ವಾತರೋಗಾದಿ ಪೀಡೆಯನ್ನು, ದ್ವಿತೀಯ ರಾಶಿಗತನಾದರೆ ಸುಖ ನಾಶವಾಗುತ್ತದೆ’ ಎಂದೂ ಹೇಳಿದರು. ವಿಕ್ರಮ ರಾಜನು `ಪಂಡಿತರೇ, ಶನಿಯು ಸೂರ್ಯನ ಮಗನೆನ್ನುತ್ತೀರಿ. `ಪುತ್’ ಎಂಬ ನರಕದಿಂದ ರಕ್ಷಿಸತಕ್ಕವನು ಪುತ್ರ. ಅಂಥಾ ಮಗನು ತಂದೆ ತಾಯಿಗಳನ್ನು ದೇವರ ಸಮಾನ ಕಾಣಬೇಕಲ್ಲವೇ? ಶನೈಶ್ಚರ ಹೀಗೆಕಾದ?’ ಎಂದು ಕೇಳುತ್ತಿರುವಂತೆಯೇ ಆಕಾಶಗಾಮಿಯಾಗಿದ್ದ ಶನೈಶ್ಚರ ವಿಕ್ರಮನ ಸಭಾ ಸ್ಥಾನಕ್ಕೇ ಬಂದ. ಶನಿಯು, `ವಿಕ್ರಮನೇ, ನೀನು ಸಾರ್ವಭೌಮನೆಂದು ಗರ್ವಪಡಬೇಡ. ನಾನು ಭಾವನೆಯನ್ನು ಗೌರವಿಸುತ್ತೇವೆ. ಭ್ರಮೆಯನ್ನು ಇಳಿಸುತ್ತೇನೆ. ನನ್ನ ತಂದೆಯ ಬೆಳಕು ಎಷ್ಟು ಸತ್ಯವೋ ಸಹಜವೋ, ನನ್ನ ತಮೋಗುಣವೂ ಅಷ್ಟೇ ಸತ್ಯ ಸಹಜ. ಅವನು ಆತ್ಮಕಾರಕನಾಗಿ ಆತ್ಮ ವಿಶ್ವಾಸವನ್ನು ವೃದ್ಧಿಸುತ್ತಾನೆ. ನಾನು ಆತ್ಮಘಾತುಕನಾಗಿ ಆತ್ಮಶಕ್ತಿಯನ್ನು ಪರೀಕ್ಷಿಸುತ್ತೇನೆ. ನಾನು ಹೇಗೆ ತಂದೆಯ ವಿರೋಧಿಯಾಗುತ್ತೇನೆ? ನಾನು ನಿಜವಾದ ನ್ಯಾಯ ಧರ್ಮ ನಿಷ್ಪಕ್ಷಪಾತಿ. ನೋಡು, ನಿನ್ನ ಬರಲಿರುವ ಕನ್ಯಾರಾಶಿಯನ್ನು ಪ್ರವೇಶಿಸಿ ಏಳರಾಟವನ್ನು ಅನುಭವಿಸು’ ಎಂದು ತೆರಳುತ್ತಾನೆ. ವಿಕ್ರಮಾದಿತ್ಯನಿಗೆ ಶನಿಯ ಎಚ್ಚರಿಕೆ ಅಶಾಂತಿಯನ್ನುಂಟು ಮಾಡಿತು. ಆದರೂ ಆಗಲಿಕೆಯೆಂದು ಅಚಲನಾದ.
ಪ್ರಭಾವ ಪರಿಣಾಮ
ವಿಕ್ರಮಾದಿತ್ಯನ ಪ್ರೀತ್ಯಸ್ಥøರಾದ ಪಂಡಿತರು ಕುದುರೆಯ ಕಾಲಿನ ಲಾಳದ ಕಬ್ಬಿಣದಿಂದ ನಿರ್ಮಿಸಿದ ನಾಲ್ಕು ಕೈಗಳುಳ್ಳ ಮತ್ತು ಕೈಗಳಲ್ಲಿ ತೂಣೀರ, ಬಾಣ ಧರಿಸಿದ ಗೃಧ್ರಾಸಗತನಾದ ಶನೈಶ್ಚರ ಪ್ರತಿಮೆಯನ್ನು ಮಾಡಿಸಿ ಪೂಜಾವಿಧಿಗಳನ್ನು ಮಾಡಿದರು. ಆದರೆ ಶನಿಯು ಶಾಂತನಾಗಲಿಲ್ಲ. ಪ್ರಾರಬ್ಧಕರ್ಮವನ್ನು ಅವರವರೇ ಅನುಭವಿಸಬೇಕು.
ವಿಕ್ರಮಾದಿತ್ಯನ ಮೇಲೆ ಶನಿ ಪ್ರಭಾವ ಪ್ರಾರಂಭವಾಯಿತು. ಶನಿಯು ಕುದುರೆ ಮಾರುವವನ ವೇಷದಲ್ಲಿ ಉತ್ತಮವಾದ ಕುದುರೆಯನ್ನು ಹಿಡಿದುಕೊಂಡು ಕ್ರಯ ವಿಕ್ರಯದಲ್ಲಿ ನಿಪುಣನಂತೆ ನಟಿಸಿ ರಾಜನೆಂದು ಹಾಜಾರಾದನು. ವಿಕ್ರಮಾದಿತ್ಯನು ಕುದುರೆಯನ್ನು ಕಂಡದ್ದೇ ಅದಕ್ಕೆ ವಶನಾದನು. ಕುದುರೆಯೇರಿ ಪರೀಕ್ಷಿಸುವುದಾಗಿ ಅದನ್ನು ಏರಿ ಹೊರಟನು. ಕುದುರೆಯೋ ವಾಯುವೇಗದಲ್ಲಿ ಓಡಿ ಸಂಧ್ಯಾಕಾಲದಲ್ಲಿ ನದಿತೀರದಲ್ಲಿ ಅವನನ್ನು ಇಳಿಸಿ ಮಾಯವಾಗಿ ಬಿಟ್ಟಿತು. ಕರಾಳ ಕತ್ತಲು ಕವಿಯಿತು. ವಿಕ್ರಮಾದಿತ್ಯನು ಇದು ಶನಿದೇವರ ಲೀಲೆಯೆಂದು ಅರಿತನು. ಮುಂದೆ ತಾಮಲಿನಿಂದಾ ಪಟ್ಟಣ ಸೇರಿದವನು. ಇತ್ತ ಉಜ್ಜಯಿನಿ ರಾಜನಿಲ್ಲದೆ ಅನಾಥವಾಯಿತು.
ತಾಮಲಿಂದಾದಲ್ಲಿ ವಿಕ್ರಮಾದಿತ್ಯನು ವೈಶ್ಯನೊಬ್ಬನ ಆಶ್ರಯ ಪಡೆದನು. ವೈಶ್ಯನ ಮಗಳು ಲೋಲೆಯು ವಿಕ್ರಮಾದಿತ್ಯನಿಗೆ ಮರುಳಾದಳು. ಆದರೆ ವಿಕ್ರಮನು ಒಲಿಯಲಿಲ್ಲ. ಅವನ ಮೇಲೆ ಕಳ್ಳತನದ ಅಪವಾದ ಹೊರಿಸಿ, ದೇಶದ ದೊರೆಯ ಮೂಲಕ (ಚಂದ್ರಸೇನ) ವಿಕ್ರಮಾದಿತ್ಯನ ಕೈಕಾಲು ಕತ್ತರಿಸಿ ಕಾಡಿಗಟ್ಟಲಾಯಿತು. ಒಂದು ದಿನ ವಿಕ್ರಮನಿಗೆ ಉಜ್ಜಯಿನಿಯ ಗಾಣಿಗನೊಬ್ಬನ ಭೇಟಿಯಾಯಿತು. ಅವನ ನೆರವಿನಿಂದ ಅವನ ಎಣ್ಣೆಗಾಣದ ಕಾರ್ಯದಲ್ಲಿ ತೊಡಗಿದ. ಗಾಣಿಗನು ಎಣ್ಣೆ ಮಸಾಜು ಮಾಡಿ ವಿಕ್ರಮಾದಿತ್ಯನಿಗೆ ಹೊಸ ಚೈತನ್ಯ ತಂದ. ವಿಕ್ರಮಾದಿತ್ಯನು ಸಂತೋಷದಿಂದ ಸಂಜೆ ಹೊತ್ತು ಶಾಸ್ತ್ರೀಯವಾಗಿ ದೀಪಕರಾಗವನ್ನು ಹಾಡತೊಡಗಿದ. ವಿಕ್ರಮನ ಸಂಗೀತ ಸ್ವರದಿಂದ ಚಂದ್ರಸೇನನ ರಾಜಭವನದಲ್ಲಿ ದೀಪಗಳು ಬೆಳಗಿದವು. ಚಂದ್ರಸೇನನ ಮಗಳು ಪದ್ಮಾವತಿ ಈ ರಾಗವನ್ನು ಹಾಡುವವನು ಸಾಮಾನ್ಯನಲ್ಲವೆಂದು ಹುಡುಕುತ್ತಾ ವಿಕ್ರಮಾದಿತ್ಯನನ್ನು ಕಂಡು ಮೋಹಗೊಂಡಳು. ವಿಕ್ರಮಾದಿತ್ಯನನ್ನು ಉಪಚರಿಸಿ ಅರಮನೆಗೇ ಕರೆತಂದಳು.
ವಿಕ್ರಮಾದಿತ್ಯನಿಗೆ ಶನಿ ಪೀಡೆಯ ಏಳುವರೆ ವರ್ಷಗಳು ಮುಗಿಯುತ್ತಾ ಬಂದಿತು. ಶನಿದೇವನು ವಿಕ್ರಮಾದಿತ್ಯನಿಗೆ ಗೋಚರವಾಗಿ `ಎಲೈ ಸಾರ್ವಭೌಮನೇ, ನಾನು ನಿಶಾಚರಿ, ನಿಷ್ಠುರವಾದಿ. ತೋರಿಕೆಯ ಭಕ್ತಿ. ತೋರಿಕೆಯ ನ್ಯಾಯ, ಧರ್ಮವನ್ನು ನಾನು ಒಪ್ಪುವುದಿಲ್ಲ. ಜೀವರಾಶಿಯ ಅಂತರಂಗವನ್ನು ಅಗೆದು ಬಗೆದು ಆತ್ಮಸ್ಥೈರ್ಯದ ಅರಿವನ್ನುಂಟು ಮಾಡುತ್ತೇನೆ. ನನ್ನ ತಂದೆ ಸೂರ್ಯದೇವನೋ ಉದಾರವಾದಿ, ಉದಾತ್ತ, ಉಜ್ವಲ, ತಾರತಮ್ಯವಿಲ್ಲದವನು. ಆದ್ದರಿಂದ ಅವನು ಉದಾಸೀನನೂ ಆಗಿದ್ದಾನೆ. ಉಪೇಕ್ಷೆಗೂ ಒಳಗಾಗಿದ್ದಾನೆ. ನಾನು ಅವನ ವಿರೋಧಿಯಲ್ಲ. ಆತ್ಮಶಕ್ತಿಗೆ ಒಂದು ಸ್ಥಿರತೆ ತಂದುಕೊಡುವುದು ನನ್ನ ಕಾರ್ಯ. ಜೀವನ ವ್ಯಾಮೋಹಕ್ಕೆ ಒಂದು ಎಚ್ಚರವಿರಬೇಕು. ನೃಪನೇ ನೀನು ಸಂಯಮ, ಸಾಮಥ್ರ್ಯವಿರುವವನು. ಸತ್ಯಂವದ, ಧರ್ಮಂಚರ, ನಿನ್ನ ಸ್ಥಿತಪ್ರಜ್ಞೆಗೆ ಮೆಚ್ಚಿದ್ದೇನೆ. ನೀನು ಕಳೆದುಕೊಂಡುದೆಲ್ಲವನ್ನೂ ಪಡೆಯುವೆ’ ಎಂದು ಅಗೋಚರನಾದನು.
ಇತ್ತ ಪದ್ಮಾವತಿಯು ತಂದೆ ಚಂದ್ರಸೇನನಿಗೆ `ನಿನ್ನ ರಾಜ್ಯದಲ್ಲಿ ನ್ಯಾಯವೇನು? ರಾಕ್ಷಸ ಸ್ವಭಾವ ನಿನ್ನದು. ವ್ಯಾಘ್ರರೂಪರಾದ ಮಂತ್ರಿಗಳು, ಶ್ವಾನಸಮಾನ ಸಿಬ್ಬಂದಿ. ದರ್ಪದೌಲತ್ತಿನಿಂದ ಮೆರೆಯುತ್ತಿರುವೆ’ ಎಂದು ಛೀಮಾರಿ ಹಾಕಿ ವಿಕ್ರಮನನ್ನು ವಿವಾಹವಾಗಿ ಉಜ್ಜಯಿನಿ ಸಾರ್ವಭೌಮನಾಗಿ ಆಳಿದನು.
ಶಿವನನ್ನು ಬಿಡಲಿಲ್ಲ
ಕೈಲಾಸ ಪರ್ವತದಲ್ಲಿ ಶಿವನು ಧ್ಯಾನಸ್ಥನಾಗಿದ್ದ. ಕಣ್ಣು ಬಿಟ್ಟು ನೋಡಿದಾಗ ಶನಿದೇವನಿದ್ದ. ಶಿವನು `ಏನಯ್ಯ, ನನ್ನೆಡೆಗೆ ಬಂದೆಯಲ್ಲ, ಏನು ಸಮಾಚಾರ’ ಎಂದು ಕೇಳಿದ. `ಪ್ರಭು, ಪರಮೇಶ್ವರ, ಇವತ್ತಿನಿಂದ ಈ ಮೂಹೂರ್ತದಲ್ಲಿ ಇನ್ನು ಎರಡೂವರೆ ವರ್ಷ ನಾನು ಶನಿದೇವ ನಿಮ್ಮನ್ನು ಕಾಡುತ್ತೇನೆ. ವಿಧಿಯಾಟ’ ಎಂದ. ಪರಮೇಶ್ವರ ತನ್ನ ಮೂರನೆಯ ಕಣ್ಣನ್ನು ತೆರೆದು ತಕ್ಷಣ ಮತ್ತೆ ಮುಚ್ಚಿ, `ಆಗಲಿ, ನಿನ್ನ ಸಂವಿಧಾನದಂತೆ ನೀನು ನಡೆದುಕೋ’ ಎಂದು ಹೊರಡುಹೋದ.
ಪಾರ್ವತಿಯು `ಪತಿದೇವ, ಶನಿಯ ಕಾಟವೆಂದರೆ ನನಗೆ ಭಯವಾಗುತ್ತದೆ. ಏನಾದರೂ ಉಪಾಯ ಮಾಡಿ ಅವನಿಗೆ ಅವಕಾಶವಾಗದಂತೆ ಮಾಡಬೇಕು’ ಎಂದಳು.
ಆಗ ಪರಮೇಶ್ವರನನು `ಪಾರ್ವತಿ, ಕಾಲಾಯ ತಸ್ಮೈ ನಮಃ ಶನಿ ಪೀಡೆಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾವೂ ನಮ್ಮ ಕರ್ಮಾನುಸಾರ ನಡೆದುಕೊಂಡರಾಯಿತು’ ಎಂದ.
ಪಾರ್ವತಿಗೆ ಪರಮೇಶ್ವರನ ಮಾತು ಹಿಡಿಸಲಿಲ್ಲ. `ಪತಿದೇವಾ, ಇದೆಲ್ಲಾ ಕೈಲಾಗದವರ ಮಾತು. ಪ್ರಯತ್ನದ ಮುಂದೆ ಯಾವುದೂ ಅಸಾಧ್ಯವಲ್ಲ. ನನಗೊಂದು ಉಪಾಯ ಹೊಳೆದಿದೆ’ ಎಂದಳು.
`ಏನದು ನಿನ್ನ ಆಲೋಚನೆ’ ಎಂದು ಪರಮೇಶ್ವರ ನಸುನಕ್ಕ.
`ನಾನು ತವರುಮನೆಗೆ ಹೋಗಿ ಇದ್ದುಬಿಡುತ್ತೇನೆ. ನೀವು ತಪಸ್ಸಿಗೆ ಕುಳಿತುಬಿಡಿ. ತಪಸ್ಸಿನ ತಾಪದ ಬಳಿ ಯಾರೂ ಬರಲಾರರು. ಎರಡೂವರೆ ವರ್ಷ ಮುಗಿಯುವವರೆಗೂ ತಪಸ್ಸಿನಿಂದ ಏಳಬೇಡಿ. ನಾನೂ ತವರಿನಲ್ಲಿಯೇ ಇದ್ದುಬಿಡುತ್ತೇನೆ’ ಎಂದು ಹೊರಟು ಹೋದಳು.
ಎರಡೂವರೆ ವರ್ಷ ಪರಮೇಶ್ವರ ತಪಸ್ಸಿನಲ್ಲಿ ಸ್ಥಿರವಾಗಿ ಬಿಟ್ಟಿದ್ದ. ಯಾರೂ ಅವನ ಬಳಿಗೆ ಬರಲಿಲ್ಲ. ನಂತರ ಪಾರ್ವತಿ ತವರುಮನೆಯಿಂದ ವಾಪಸಾದಳು. ಪರಮೇಶ್ವರನು ತಪಸ್ಸಿನಿಂದ ಎದ್ದ. `ಶನಿದೇವ ನಿಮ್ಮ ಬಳಿ ಬರಲಿಲ್ಲವಷ್ಟೇ?’ ಎಂದು ಪಾರ್ವತಿ ಕೇಳಿದಳು. `ಇಲ್ಲ ಯಾರೂ ಬರಲಿಲ್ಲ. ನಾನು ಸ್ಥಿರವಾಗಿದ್ದೆ’ ಎಂದ ಪರಮೇಶ್ವರ. ನನ್ನ ಉಪಾಯ ಫಲಿಸಿತು’ ಎಂದಳು ಪಾರ್ವತಿ, ಅದೇ ಸಮಯಕ್ಕೆ ಶನಿದೇವ ಬಂದ. `ಎರಡೂವರೆ ವರ್ಷ ನನ್ನ ಪತಿಯನ್ನು ಕಾಡಿದೆಯಾ?’ ಎಂದು ಪಾರ್ವತಿ ಕೇಳಿದಳು.
`ತಾಯಿ, ಕರ್ತವ್ಯದಲ್ಲಿ ನಾನೆಂದೂ ಚ್ಯುತನಲ್ಲ. ಎರಡೂವರೆ ವರ್ಚ ನಿಮ್ಮನ್ನಗಲಿರಬೇಕೆಂದು ನನ್ನ ಇಚ್ಛೆಯಾಗಿತ್ತು. ನನ್ನ ಇಚ್ಛೆ ತಾನಾಗಿಯೇ ನೆರವೇರಿತು. ಪರಮೇಶ್ವರನ ಸ್ಥಿರಗುಣವೂ ನನ್ನದೇ’ ಎಂದು ಶನಿದೇವ ನುಡಿದ.
ಪುರಾಣ ಕಥೆ
ಶನಿ ಕಾಟ
ನವಗ್ರಹಗಳಲ್ಲಿ ಶನಿಯಷ್ಟು ಪ್ರಚಾರ ಪಡೆದ ಗ್ರಹ ಇನ್ನೊಂದಿಲ್ಲ. ಅದಕ್ಕೆ ಕಾರಣ ಶನಿಯ ಕುರಿತು ಇರುವ ಕತೆಗಳು.
ದೇವಲೋಕದ ಇಂದ್ರನು ಶನಿಬಾಧೆಯಿಂದ ಗೌತಮನ ಪತ್ನಿಯಾದ ಅಹಲ್ಯಯೊಂದಿಗೆ ಸಂಸರ್ಗ ಮಾಡಿ ಋಷಿಶಾಪಕ್ಕೆ ಒಳಗಾಗಿ ದೇಹದಲ್ಲಿ ಯೋನಿತ್ವವನ್ನು ಹೊಂದಿ, ಉಷಃಶಾಪದಿಂದ ಇಂದ್ರನಿಗೆ ಮಾತ್ರ ಯೋನಿಯಾಗಿ ಕಾಣುವಂತಾಯಿತು. ಬೇರೆ ದೇವಾಸುರರಿಗೆ ಕಣ್ಣಾಗಿ ಕಾಣುವಂತಾಗಿ `ಸಹಸ್ರಾಕ್ಷ’ ಎಂದು ಕರೆಯುವಂತಾಯಿತು. ಶ್ರೀಕೃಷ್ಣನು ಜನ್ಮರಾಶಿಯ ಶನಿದೋಷದಿಂದ ಶ್ಯಮಂತಕ ಮಣಿ ಅಪಹರಿಸಿದ ಅಪವಾದ ಹೊಂದಿದನು. ಚಂದ್ರನೂ ಶನಿದೋಷದಿಂದ ಗುರುಪತ್ನಿಯ ಸಮಾಗಮ ಮಾಡಿ ಕ್ಷಯರೋಗ ಪೀಡಿತನಾಗಿದ್ದಾನೆ. ಪಾಂಡವರು ಅರಣ್ಯವಾಸ ಅನುಭವಿಸಿದ್ದು, ಕೌರವರು ನಾಶವಾದದ್ದು, ನಳ ದಮಯಂತಿ ಕಷ್ಟಕಾರ್ಪಣ್ಯಕ್ಕೊಳಗಾಗಿದ್ದಕ್ಕೆಲ್ಲಾ ಕಾಟವೇ ಕಾರಣ.
ಬೃಹಸ್ಪತಿ ಫಜೀತಿ
ನವಗ್ರಹದ ಮಧ್ಯದಲ್ಲಿ ತಾನು ದೇವಗುರುವೆಂಬ ಗರ್ವದಲ್ಲಿ ಬೃಹಸ್ಪತಿಯಿದ್ದನು. ಶನಿಯು ಬೃಹಸ್ಪತಿಯ ಬಳಿ ಹೋಗಿ ದ್ವಾದಶ ರಾಶಿಯಲ್ಲಿ ಪ್ರವೇಶ ಕೊಡುವಂತೆ ಬೇಡಿಕೊಂಡನು. ಆದರೆ ಬೃಹಸ್ಪತಿಯು ಶನಿಯ ಸಂಸರ್ಗ ಮಾಡಲು ಒಪ್ಪಲಿಲ್ಲ. ಕೊನೆಗೆ ಒಂದೂ ಕಾಲು ಪ್ರಹರ (ಜಾಮ) ಸಮಯ ತನ್ನ ಜನ್ಮರಾಶಿಯಲ್ಲಿ ಶನಿಯಿರಲು ಸಮ್ಮತಿಸಿದನು. ಶನಿಯು ಸಂತೋಷದಿಂದ ಬೃಹಸ್ಪತಿಯ ಜನ್ಮರಾಶಿಯನ್ನು ಪ್ರವೇಶಿಸಿದನು.
ಶನಿಯ ಸ್ಪರ್ಶವಾಯಿತೆಂದು ಬೃಹಸ್ಪತಿ ಸ್ನಾನ ಮಾಡಿ ಪವಿತ್ರನಾಗಬೇಕೆಂದು ನದಿಯತ್ತ ನಡೆದನು. ಶನಿಯು ಬೃಹಸ್ಪತಿಯು ನದಿಗೆ ಹೋಗುವ ದಾರಿಯಲ್ಲಿ ಎರಡು ಕರಬೂಜ (ಊರ್ವಾರುಕ) ಫಲಗಳನ್ನು ಇಟ್ಟುಕೊಂಡು ಕುಳಿತುಕೊಂಡನು. ಬೃಹಸ್ಪತಿಯನ್ನು ಕಂಡಕೂಡಲೇ ಆ ಹಣ್ಣುಗಳನ್ನು ಕಾಣಿಕೆಯಾಗಿ ಕೊಟ್ಟನು. ಬೃಹಸ್ಪತಿಯು ಸಂತೋಷದಿಂದ ಸ್ವೀಕರಿಸಿ. ನದಿಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆ ತೀರಿಸಿ ಆ ಹಣ್ಣುಗಳನ್ನು ವಸ್ತ್ರದಲ್ಲಿ ಕಟ್ಟಿಕೊಂಡು ಬರತೊಡಗಿದನು. ಆಗ ಅಲ್ಲಿಗೆ ಬಂದ ರಾಜಭಟರು ಬೃಹಸ್ಪತಿಯ ಕೈಯಲ್ಲಿಯ ವಸ್ತ್ರದ ಗಂಟು ರಕ್ತಮಯವಾದದ್ದನ್ನು ಕಂಡು ಬೃಹಸ್ಪತಿಯನ್ನು ಬಂಧಿಸಿ ಆ ದೇಶದ ಅರಸನೆದುರು ತಂದು ನಿಲ್ಲಿಸಿದರು. ಅರಸನ ಪುತ್ರ ದೇಶ ಸಂಚಾರಕ್ಕೆ ಹೋದವರು ಮರಳಿರಲಿಲ್ಲ. ರಾಜಭಟರು ಅವರ ಅನ್ವೇಷಣೆಯಲ್ಲಿದ್ದರು. ವಸ್ತ್ರದ ಗಂಟನ್ನು ತೆರೆದು ನೋಡಿದಾಗ ಕರಬೂಜದ ಹಣ್ಣು ಮಾಯವಾಗಿ ಅರಸು ಪುತ್ರರ ರುಂಡಗಳಾಗಿ ಕಂಡವು. ಅರಸನಿಗೆ ದುಃಖವಾಯಿತು. ಬೃಹಸ್ಪತಿಯನ್ನು ಶೂಲಕ್ಕೆ ಹಾಕಿ ವಧೆ ಮಾಡಿ ಎಂದು ಅರಸನು ಆಜ್ಞೆ ಮಾಡಿದನು. ರಾಜಭಟರು ಬೃಹಸ್ಪತಿಯನ್ನು ಕಟ್ಟಿ ಶೂಲದ ಬಳಿ ತಂದರು. ಬೃಹಸ್ಪತಿಗೆ ಪರಿಸ್ಥಿತಿಯೆಲ್ಲವೂ ಅರ್ಥವಾಯಿತು. ಶನಿಯು ಇವರಿಗೆ ಮಂಕು ಹಿಡಿಸಿದ್ದಾನೆ. ಭಟರಿಗೆ ಬೃಹಸ್ಪತಿಯು `ಅಯ್ಯಾ, ನನ್ನನ್ನು ಶೂಲಕ್ಕೇರಿಸಬಹುದು. ಸ್ವಲ್ಪ ಸಮಯ ಕಳೆಯಲಿ, ಸುಮೂಹೂರ್ತೇ ಸಾವಧಾನ’ ಎಂದಾಗ ಭಟರು ಆಯಿತೆಂದರು. ಸ್ವಲ್ಪ ಹೊತ್ತಿಗೇ ಶನಿಯು ಗುರುರಾಶಿಯನ್ನು ಬಿಟ್ಟು ಹೋದನು. ದೇಶಾಂತರಕ್ಕೆ ಹೋಗಿದ್ದ ಅರಸು ಪುತ್ರರು ಅರಮನೆಗೆ ಬಂದರು. ಅರಸನಿಗೆ ಅಚ್ಚರಿಯೂ ಆತಂಕವೂ ಆಗಿ ಬೃಹಸ್ಪತಿಯ ವಧಾಸ್ಥಾನಕ್ಕೆ ಓಡಿಬಂದನು. ರಾಜಭಟರನ್ನು ಕೂಗಿ ಕರೆದು, `ಬ್ರಾಹ್ಮಣನನ್ನು ಕೊಲ್ಲಬೇಡಿ, ಬ್ರಹ್ಮಹತ್ಯಾ ದೋಷವು ಏಳೇಳು ಜನ್ಮಕ್ಕೂ ನನ್ನನ್ನು ಬೆನ್ನಟ್ಟಿ ಬರುತ್ತದೆ’ ಎಂದು ಬೃಹಸ್ಪತಿಯ ಕಾಲಿಗೆರಗಿ ಕ್ಷಮಿಸಬೇಕೆಂದು ಅಂಗಲಾಚಿದನು. ಬೃಹಸ್ಪತಿಯು `ಅರಸನೇ, ಈ ಬುದ್ಧಿ ಭ್ರಮಣೆಯ ಅವಿವೇಕವೆಲ್ಲ ಶನಿಯದು’ ಎಂದನು. ಮತ್ತೆ ವಸ್ತ್ರದ ಗಂಟನ್ನು ಬಿಡಿಸಿ ನೋಡಲು ರುಂಡಗಳಿರದೇ ಕರಬೂಜದ ಎರಡು ಹಣ್ಣುಗಳು ಇದ್ದವು. ಅಂದಿನಿಮದ `ಮಾಂದಿ ದೋಷಂ ಗುರೋರ್ ಹಂತಿ’, ಅಂದರೆ, ಮನಸ್ಸಿನ ಮಾಲಿನ್ಯವನ್ನು ಜ್ಞಾನದಿಂದ ತೊಳೆದುಕೊಳ್ಳಬೇಕು ಎಂಬುದ ಪ್ರಚಲಿತವಾಯಿತು.
ರಾವಣನ ಮೇಲೆ ವಕ್ರದೃಷ್ಟಿ
ಶನಿಯು ರಾಮನ ಜನ್ಮರಾಶಿಯನ್ನು ಪ್ರವೇಶಿಸಿದಾಗ ರಾಮ ವನವಾಸವನ್ನು ಹೊಂದಿದನು. ಸೀತೆಯು ಶನಿಯ ಮಾಯೆಯಿಂದ ದುಃಖವನ್ನು, ವನವಾಸವನ್ನು ಅನುಭವಿಸಿ ರಾವಣನಿಂದ ಅಪಹರಿಸಲ್ಪಟ್ಟಳು. ಒಮ್ಮೆ ರಾವಣಾಸುರನು ನವಗ್ರಹರನ್ನು ಕಟ್ಟಿ ತಂದು ತನ್ನ ಸಿಂಹಾಸನದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದನು. ಅವರ ಬೆನ್ನು ತುಳಿದು ಗರ್ವದಿಂದ ಸಿಂಹಾನವೇರಿ ಕುಳಿತುಕೊಳ್ಳುತ್ತಿದ್ದನು. ಒಂದು ದಿನ ನಾರದರು ಲಂಕೆಗೆ ಬಂದು ನವಗ್ರಹರ ನರಳಾಟ ನೋಡಿದರು. `ಎಲೈ ಶನೈಶ್ಚರನೇ, ನೀನೂ ರಾವನಣನ ಬಂಧನಕ್ಕೊಳಗಾಗಿರುವೆಯಾ? ನಿನ್ನನ್ನು ಮೇಲ್ಮುಖನನ್ನಾಗಿ ಮಾಡುವೆ. ಆಗ ನಿನ್ನ ಪರಾಕ್ರಮ ತೋರಿಸುವಿಯೆಂತೆ’ ಎಂದು ರಾವಣನ ಬಳಿ ಸಾರಿ, `ರಾಕ್ಷಸೇಂದ್ರಾ, ನೀನು ನವಗ್ರಹರನ್ನು ಅಧೋಮುಖ ಮಾಡಿ ಮೆಟ್ಟಿಲನ್ನಾಗಿಸಿ ಬೆನ್ನು ಹತ್ತಿ ಸಿಂಹಾಸನ ಏರುವಿಯಾ? ನಿನಗಿದು ಶೋಭೆಯಲ್ಲ. ಶತ್ರುಗಳ ಎದೆಯನ್ನು ಮೆಟ್ಟುವುದು ವೀರೋಚಿತ’ ಎಂದರು. ನಾರದರ ಮಾತು ರಾವಣನಿಗೆ ನಾಟಿತು. ಕೂಡಲೇ ದೂತರನ್ನು ಕರೆದು ನವಗ್ರಹರನ್ನು ಮೇಲ್ಮುಖ ಮಾಡಿ ಕಟ್ಟಲಾಯಿತು. ರಾವಣ ಅವರ ಎದೆ ಮೆಟ್ಟಿ ಸಿಂಹಾಸನವನ್ನೇರುತ್ತಿದ್ದನು. ಶನಿಯ ವಕ್ರದೃಷ್ಟಿ ರಾವಣನ ಮೇಲೆ ಬಿದ್ದಿತು. ಮುಂದೆ ಆರೇ ತಿಂಗಳೊಳಗೆ ರಾವಣ ಯಮಲೋಕ ಸೇರಿದನು.
ನತದೃಷ್ಟ ಗ್ರಹ
ಪುರಾಣ ಕಥೆಗಳ ಪ್ರಕಾರ ಶನಿದೇವ ಹುಟ್ಟಿದಾಕ್ಷಣ ಕಣ್ಣು ತೆರೆದನಂತೆ. ಅವನು ಕಣ್ಣು ತೆರೆದ ಕೂಡಲೇ ಆಕಾಶದಲ್ಲಿ ಸೂರ್ಯ ಗ್ರಹಣ ಸಂಭವಿಸಿತಂತೆ. ಬಹುಶಃ ಆ ಕಾರಣದಿಂದಲೇ ಶನಿ ಸಂಕಟಗಳನ್ನು ತಂದೊಡ್ಡುತ್ತಾನೆ, ನತದೃಷ್ಟ ಗ್ರಹ ಎನ್ನುವ ನಂಬಿಕೆಯಿದೆ. ಕಥೆಗಳ ಪ್ರಕಾರ ಶನಿಯದು ನೀಲವರ್ಣ. ಆತ ಕಪ್ಪು ಬಟ್ಟೆಗಳನ್ನು ಧರಿಸಿರುತ್ತಾನೆ. ಒಂದು ಕೈಯಲ್ಲಿ ಬಿಲ್ಲನ್ನು, ಮತ್ತೊಂದು ಕೈಯಲ್ಲಿ ಬಾಣವನ್ನು ಹಿಡಿದಿರುತ್ತಾನೆ. ಕಾಗೆಯ ಮೇಲೆ ವಿರಾಜಮಾನನಾಗಿದ್ದಾನೆ. ಯಮನೊಂದಿಗೆ ಸೆಣಸಾಡುವಾಗ ಆತನ ಮೊಣಕಾಲಿಗೆ ಏಟು ತಗುಲಿದ ಕಾರಣ ಕುಂಟ ಎಂತಲೂ ಕರೆಯಲ್ಪಟುತ್ತಾನೆ.
ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ ಶನಿಗ್ರಹವು ಪ್ರತಿಯೊಂದು ರಾಶಿಯಲ್ಲೂ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಹೀಗೆ ಮೂರು ಮನೆಗಳನ್ನು ದಾಟುವ ಹೊತ್ತಿಗೆ 7.5 ವರ್ಷಗಳಾಗಿರುತ್ತವೆ. ಅದರಿಂದಾಗಿ ಸಾಡೇಸಾತಿ ಎನ್ನುವ ಪದ ಪ್ರಯೋಗ ಬಂದಿರಬಹುದು.
ಪ್ರತಿಯೊಬ್ಬನ ಬದುಕು ಒಂದು ಸವಾಲು, `ಬುದ್ಧಿ ಕರ್ಮಾನುಸಾರೇಣ ಜಾಯತೇ’ ಎನ್ನುವ ಉಕ್ತಿಯಂತೆ ಕರ್ಮಕ್ಕೆ ಅನುಸಾರವಾಗಿ ಫಲ ದೊರೆಯುತ್ತದೆ. ಅದರ ನಿರ್ಣಾಯಕ ಶನಿಯೇ ಆಗಿದ್ದಾನೆ. ಅಂದರೆ ಶನಿಯದು ನ್ಯಾಯೋಚಿತ ಮಾರ್ಗ. ಬಿತ್ತಿದಂತೆ ಬೆಳೆ ಎನ್ನುವ ಮಾತು ಶನಿಯ ಕಾರ್ಯವೈಖರಿಗೆ ಅನ್ವರ್ಥಕವಾಗಿದೆ.
ಶನಿಯೇ ಗುರು
‘ಅಧ್ಯಾತ್ಮ ದೃಷ್ಟಿಯಲ್ಲಿ ಶನಿಯೇ ಗುರು. ಆತನೇ ಯೋಗ್ಯ ಶಿಕ್ಷಕ. ಗುರುವಿನಷ್ಟು ಮೃದುವಲ್ಲದಿದ್ದರೂ ಸ್ವಲ್ಪಮಟ್ಟಿಗೆ ಕಠೋರ ಹೃದಯಿ, ಶನಿಯ ಕಾರಣ ಜೀವನದ ಕಠೋರ ಸತ್ಯದ ಅನುಭವವಾಗುತ್ತದೆ. ವಾಸ್ತವ ಜಗದ ಅರಿವು ಉಂಟಾಗುತ್ತದೆ. ನಿಂದಕರಿರಬೇಕಯ್ಯಾ ಜಗದೊಳು ನಿಂದಕರಿರಬೇಕು ಎನ್ನುವಂತೆ. ಜೀವನವೆಂಬ ವನದಲ್ಲಿ ಮನದೊಳಗಿನ ಹುಡುಕಾಟದಲ್ಲಿ ಶನಿಯ ಪಾತ್ರ ಅನನ್ಯ ಹಾಗೂ ಅಚಿಂತ್ಯ. ಆ ಕಾರಣ ಶನಿಯ ಬಗ್ಗೆ ಇನ್ನಿಲ್ಲದ ಅಪನಂಬಿಕೆ ಸರಿಯಲ್ಲ.
ಶನಿ ಯೋಗ್ಯ ಬದುಕಿಗೆ ಅತ್ಯವಶ್ಯವಾದ ಶಿಸ್ತಿನ ಪಾಠ ಹೇಳಿಕೊಡುತ್ತಾನೆ. ಆದರೆ ಈತನ ಗತಿ ಮಂದ. ಬದುಕಿನ ಹುಡುಕಾಟದಲ್ಲಿ ಯಶಸ್ಸು ಸುಮ್ಮನೇ ಬರುವುದಿಲ್ಲ. ಯಶಸ್ಸು ನಿಮ್ಮದಾಗಲು ಒಂದಿಷ್ಟು ಶಿಸ್ತು, ಪರಿಶ್ರಮ ಮತ್ತು ಒಂದಿಷ್ಟು ನರಳಾಟದ ಅನುಭವ ಬೇಕು. ಕೇವಲ ಸಿಹಿಯನ್ನೇ ತಿನ್ನುತ್ತಿದ್ದರೆ ಸಿಹಿ ಅಷ್ಟಾಗಿ ರುಚಿಸುವುದಿಲ್ಲ. ಸಿಹಿಯೊಂದಿಗೆ ಸ್ವಲ್ಪ ಕಹಿಯನ್ನು ಸೇವಿಸಿದಾಗ ಮಾತ್ರ ಅದರ ಮಧುರ ಅನುಭವ ಉಂಟಾಗುತ್ತದೆ. ಜೀವನವೆಂದರೆ ಬರೀ ನರಳಾಟ, ಚೀರಾಟ, ಗೋಳಾಟವಲ್ಲ, ಅದೊಂದು ಸಂಕಷ್ಟಗಳ ಸರಮಾಲೆ. ಅದನ್ನು ಸಮರ್ಪಕವಾಗಿ ಎದುರಿಸುವವನೇ ಜಾಣ. ಒಬ್ಬ ವ್ಯಕ್ತಿ ತನಗೆ ಬಂದೊದಗಿದ ಕಷ್ಟಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದು ಅವನ ವೈಯುಕ್ತಿಕ ಬುದ್ಧಿಮತ್ತೆಗೆ ಹಚ್ಚುವ ಪರೀಕ್ಷೆ ಎಂದರೂ ತಪ್ಪಿಲ್ಲ. ಆ ಹಂತದಲ್ಲೇ ವ್ಯಕ್ತಿಯ ಪ್ರಬುದ್ಧತೆ ತಿಳಿಯುತ್ತದೆ. ಅವನ ವಿವೇಕಕ್ಕೆ ಒರೆಹಚ್ಚಲು ಸಾಧ್ಯವಾಗುವುದು. ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅಂತಹದ್ದೊಂದು ಪ್ರಜ್ಞೆ ತಾನೇ ತಾನಾಗಿ ಒಡಮೂಡುತ್ತದೆ.
ಛಾಯಾ ಪುತ್ರ ಶನಿ ನಮ್ಮ ಕರ್ಮಕ್ಕೆ ಕಣ್ತೆರೆಸಿ ಕ್ರಿಯಾಶೀಲಗೊಳಿಸುತ್ತಾನೆ. ಶಿವನಿಗೂ ಶನಿಗೂ ಕಾರ್ಯಕಾರಣ ಸಂಬಂಧವಿದೆ. ರಾಮೇಶ್ವರಕ್ಕೆ ಹೋದರೂ ಶನೈಶ್ಚರ ಬಿಡಲಿಲ್ಲ ಎಂದರೆ ನಮ್ಮ ಬೆನ್ನಿಗೆ ಬಂದಿರುತ್ತಾನೆ ಎಂದರ್ಥ.
ಅನಾಥನಾಥ ಛಾಯಾಪುತ್ರ
ನಮ್ಮನ್ನು ಬಹುವಾಗಿ ಕಾಡುವ ಪ್ರಶ್ನೆಯೆಂದರೆ ಶನಿ ಸ್ನೇಹಿತನೇ ಅಥವಾ ವೈರಿಯೇ? ಶನಿ ದೆಶೆ ಬಂದಾಗ ಕಷ್ಟಪಡುವವರೇ ಹೆಚ್ಚು. ನನಗೆ ಮಹಾದೆಶೆ ಬಂದಿದೆ ಅಂತ ಇಷ್ಟ ಪಡುವವರನ್ನು ಎಲ್ಲಿಯಾದರೂ ಕಂಡಿದ್ದೀರಾ? ಬಹುಶಃ ಇಲ್ಲ. ನಳ ಮಹರಾಜನನ್ನು ಹೊರತು ಪಡಿಸಿ ಮತ್ಯಾರೂ ಕಾಣಸಿಗರೇನು ಈ ಪ್ರಪಂಚದಲ್ಲಿ ! ಶನಿದೇವರು ಒಂದಿಲ್ಲೊಂದು ಕಷ್ಟಗಳನ್ನು ಕೊಡುತ್ತಲೇ ಅವರ ತಾಳ್ಮೆಯನ್ನು ಪರಿಶೀಲಿಸುತ್ತಾನೆ.
ಶನಿ ಎಂದರೆ ಕಪ್ಪು. ಅಮಾವಾಸ್ಯೆಯೂ ಕಪ್ಪು. ಮನೋವಿಜ್ಞಾನದ ಪ್ರಕಾರ ಅಮಾವಾಸ್ಯೆಯಂದು ಚಿತ್ತ ಶುದ್ಧಿ ಅಷ್ಟಾಗಿ ಇರುವುದಿಲ್ಲ ಎನ್ನುತ್ತಾರೆ. ಹಾಗೆಂದಾಕ್ಷಣ ಅಮಾವಾಸ್ಯೆಯನ್ನು ಹೊರತು ಪಡಿಸಿ ಹುಣ್ಣಿಮೆ ಕಾಣಲು ಸಾಧ್ಯವೇ? ಒಂದು ದಿನದಲ್ಲಿ ಹಗಲು, ರಾತ್ರಿ ಇರುವಂತೆ ಕಪ್ಪಿಲ್ಲದೆ ಬಿಳುಪಿಲ್ಲದೇ ಕಪ್ಪಿಲ್ಲ. ಸೂರ್ಯನಿಲ್ಲದೇ ಚಂದ್ರನಿಲ್ಲ. ಚಂದ್ರನಿಲ್ಲದೇ ಸೂರ್ಯನಿಲ್ಲ.
ಭ್ರಮೆ ಮತ್ತು ಭಾವನೆ
ಶನಿ ಎಂದರೆ ಅದೇನೋ ಹೆದರಿಕೆ. ಬಾಗಿದರೆ ಎಲ್ಲಿ ಬಂದು ಮೇಲೇರಗುತ್ತಾನೋ ಎನ್ನುವ ಅಂಜಿಕೆ. ದುರ್ಬಲ ಮನಸ್ಸಿನವರಾಗಿದ್ದರಂತೂ ಕಥೆ ಮುಗಿದೇ ಹೋಯಿತು. ಒಂದು ದಿನದಲ್ಲಿ ಹಗಲು, ರಾತ್ರಿ ಇದ್ದಂತೆ ಜೀವನ ಸಂಧ್ಯೆಯಲ್ಲೂ ಸುಖ, ದುಃಖಗಳಿರುತ್ತವೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೇ ಸ್ಥಿತಪ್ರಜ್ಞನಾಗಿ ಬಾಳಬೇಕು ಎನ್ನುತ್ತಾನೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ.
ಸೌರಮಂಡಲದಲ್ಲಿರುವ ಗ್ರಹಗಳಲ್ಲಿ ಶನಿಯೇ ಅತ್ಯಂತ ಸುಂದರ ಎನ್ನುತ್ತಾರೆ ಖಗೋಳ ವಿಜ್ಞಾನಿಗಳು. ಸೌರಮಂಡಲದ ಎರಡನೇ ಅತಿ ದೊಡ್ಡ ಗ್ರಹವೇ ಶನಿ. ಶನಿಗ್ರಹದ ಸುತ್ತ ಉಂಗುರಗಳಿವೆ. ಅದರಲ್ಲಿ ಒಂಬತ್ತು ಉಂಗುರುಗಳು ಪ್ರಮುಖವಾಗಿದ್ದು ಪೂರ್ಣವಾಗಿವೆ, ಮೂರು ಉಂಗುರುಗಳು ಅಪೂರ್ಣವಾಗಿವೆ. ಉಂಗುರಗಳ ಇರುವಿಕೆಯಿಂದಾಗಿ ಶನಿ ಗ್ರಹ ಆಕಾಶಗಂಗೆಯಲ್ಲೇ ಅತ್ಯದ್ಭುತ ಗ್ರಹವಾಗಿ ಕಾಣಸಿಗುತ್ತದೆ.
ನಮ್ಮ ಪುರಾಣಗಳು ಶನಿ ದೇವನನ್ನು ಸೂರ್ಯ ಮತ್ತು ಛಾಯಾದೇವಿಯ ಮಗ ಎಂದು ಬಣ್ಣಿಸುತ್ತವೆ. ಆ ಕಾರಣ ಶನಿದೇವನಿಗೆ ಛಾಯಾಪುತ್ರ ಎನ್ನುವ ಹೆಸರಿದೆ. ಪುರಾಣಗಳ ಕಲ್ಪನೆಯ ಪ್ರಕಾರ, ಆತ ಯಮನ ಸೋದರ. ಕಠೋರ ನ್ಯಾಯವಾದಿ ಹಾಗೂ ಕರ್ಮ ಪಾಲಕ. ನಮ್ಮ ಕರ್ಮಕ್ಕೆ ಅನುಸಾರವಾಗೇ ಫಲ, ಶಿಕ್ಷೆ, ಪ್ರಶಸ್ತಿಗಳನ್ನು ನೀಡುವ ದೇವತೆ ಎಂದರೂ ತಪ್ಪಿಲ್ಲ.
(ವಿವಿಧ ಮೂಲಗಳಿಂದ)
Get in Touch With Us info@kalpa.news Whatsapp: 9481252093
Discussion about this post