ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸಮಾಜಕ್ಕೆ ಮಾದರಿಯಾಗಬಲ್ಲ ಪಾತ್ರಗಳ ಕೊರತೆಯೇ ಆಧುನಿಕ ಸಿನಿಮಾಗಳ ಪ್ರಮುಖ ಸಮಸ್ಯೆಯಾಗಿದೆ ಎಂದು ಕುವೆಂಪು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ ಎಸ್ ಎಂ ಗೋಪಿನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ #Kuvempu University ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 15ನೇ ಸಹ್ಯಾದ್ರಿ ಚಲನಚಿತ್ರೋತ್ಸವವನ್ನು “ನಿರಾಶ್ರಿತರ ಬಿಕ್ಕಟ್ಟು” ವಿಷಯ ಕುರಿತು ಸೆಪ್ಟೆಂಬರ್ 17-21ರ ವರೆಗೆ ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದು, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಯಕನೇ ಖಳನಾಯಕ ಆಗಿರುವ, ಅತೀ ಹಿಂಸೆ, ಕೊಳ್ಳೆ ಹೊಡೆಯುವಿಕೆ ಅಂತಹ ಪಾತ್ರಗಳನ್ನು, ಸಿನಿಮಾಗಳನ್ನು ನಾವಿಂದು ಕಾಣುತ್ತಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಂದು ಹೇಳಿಕೊಂಡು ಬರುತ್ತಿರುವ ಎಲ್ಲವುಗಳಲ್ಲಿಯೂ ಇದೆ ಕಥಾನಕವಿದೆ. ಯುವಜನರು ಇವುಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕೆ, ಮಾದರಿ ಎಂದುಕೊಳ್ಳಬೇಕೆ ಎಂದು ಕಳವಳ ವ್ಯಕ್ತಪಡಿಸಿದರು.
Also read: ಮೈಸೂರು ರಾಜ್ಯ ಯೋಜನಾ ಬದ್ಧವಾಗಿ ಬೆಳೆಯಲು ವಿಶ್ವೇಶ್ವರಯ್ಯನವರ ಪಾತ್ರ ದೊಡ್ಡದು: ಡಿಸಿ ಲಕ್ಷ್ಮೀಕಾಂತ್
ಶಿವಮೊಗ್ಗ ಚಿತ್ರ ಸಮಾಜ ಸಿನಿಮೊಗೆಯ ಸಂಚಾಲಕ ಮತ್ತು ಪತ್ರಕರ್ತ ವೈದ್ಯನಾಥ ಹೆಚ್ ಯು ಅವರು ಚಿತ್ರೋತ್ಸವ ಉದ್ಘಾಟಿಸಿ ಮಾತನಾಡುತ್ತ, ಇಂದಿನ ಸಿನಿಮಾಗಳಲ್ಲಿ ನಾಯಕ – ನಾಯಕಿಯರ ವಿಜೃಂಭಣೆ ಅಧಿಕಗೊಂಡು ಕಥೆ ಗೌಣವಾಗುತ್ತಿದೆ. ಉತ್ತಮ ಬದುಕಿಗೆ ಬೇಕಾದ ಆದರ್ಶಗಳನ್ನು ಬದಿಗೆ ಸರಿಸಲಾಗುತ್ತಿದೆ. ಸಿನಿಮಾ ರಂಗವು ಉದ್ಯಮ ಆದ ನಂತರ ಈ ಬಿಕ್ಕಟ್ಟುಗಳು ಹೆಚ್ಚಾಗಿದ್ದು, ಸಾಮಾಜಿಕ ಸಂದೇಶ – ಕಾಳಜಿಗಿಂತ, ಲಾಭದ ಉದ್ದೇಶಗಳು ಮುಖ್ಯವಾಗಿರುವುದು ಇದಕ್ಕೆ ಕಾರಣ ಎಂದರು.
ಸಿನಿಮಾವು ಮನರಂಜನೆಯ ಸರಕು ಮಾತ್ರವಲ್ಲ. ಅದು ಸಾಮಾಜಿಕ – ಸಾಂಸ್ಕೃತಿಕ ಬದುಕನ್ನು ದಾಖಲಿಸುವ ಮಾಧ್ಯಮ ರೂಪ. ಅದನ್ನು ಕೇವಲ ಮೋಜಿಗಾಗಿ ನೋಡದೆ, ಅಧ್ಯಯನ ದೃಷ್ಟಿಯಿಂದ ಕಾಣಬೇಕು. ಮೇಲ್ನೋಟದ ಆಚರಣೆ ತೋರಿಕೆಗಿಂತ, ಪಾತ್ರಗಳ ಅನುಭಾವ, ಬದುಕಿನ ಆಳ, ತುಮುಲಗಳನ್ನು ದಾಟಿಸಿಕೊಳ್ಳುವ ಪ್ರಯತ್ನದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಎಂದು ಸಲಹೆಯಿತ್ತರು.
ಉದ್ಘಾಟನಾ ಸಮಾರಂಭದಲ್ಲಿ ವಿಭಾಗದ ಅಧ್ಯಕ್ಷರಾದ ಪ್ರೊ. ಸತ್ಯಪ್ರಕಾಶ್ ಎಂ ಆರ್, ಅಧ್ಯಾಪಕರಾದ ಪ್ರೊ. ವರ್ಗೀಸ್, ಪ್ರೊ. ಸತೀಶ್ ಕುಮಾರ್ ಉಪಸ್ಥಿತರಿದ್ದರು. ಸಿನಿಮೋತ್ಸವದಲ್ಲಿ ವಿವಿಧ ವಿಭಾಗಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಜರಿದ್ದರು.
ಸಿನಿಮೋತ್ಸವದ ಬಗ್ಗೆ
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗ ಪ್ರತಿ ವರ್ಷವೂ ಸಿನಿಮೋತ್ಸವವನ್ನು ಆಚರಿಸುತ್ತಿದ್ದು ಈ ಬಾರಿ 15ನೇ ಸಹ್ಯಾದ್ರಿ ಸಿನಿಮೋತ್ಸವವನ್ನು”ನಿರಾಶ್ರಿತರ ಬಿಕ್ಕಟ್ಟು” ವಿಷಯ ಕುರಿತು ಇಂದಿನಿಂದ 5 ದಿನಗಳ ಕಾಲ ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿದೆ. ಪ್ರತಿದಿನ ಮಧ್ಯಾಹ್ನ 3.45 ರಿಂದ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.
ಸೆಪ್ಟೆಂಬರ್ 17ರಿಂದ 21ರ ವರೆಗೆ ನಡೆಯುವ ಚಲನಚಿತ್ರೋತ್ಸವದಲ್ಲಿ ಈ ಬಾರಿ ಇರಾನಿಯನ್ ಸಿನಿಮಾ “ದ ಸೈಕ್ಲಿಸ್ಟ್”, ಆಫ್ಘನ್ ನಿರಾಶ್ರಿತರ ಕಥೆಯುಳ್ಳ ಚಿತ್ರ “ಕೈಟ್ ರನ್ನರ್”, ಇಂಗ್ಲಿಷ್ ಸಿನಿಮಾ “ನೇಮ್ ಸೇಕ್”, ಬೆಂಗಾಳಿ ಸಿನಿಮಾ “ಸುಬರ್ಣರೇಖ”, ಸಿರಿಯನ್ ನಿರಾಶ್ರಿತರ “ದಿ ಸ್ವಿಮ್ಮರ್ಸ್” ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಹಿಂದಿನ ವರ್ಷಗಳಲ್ಲಿ ಚಾರ್ಲಿ ಚಾಪ್ಲಿನ್, ನಾಗರೀಕ ಹಕ್ಕುಗಳು, ಯುದ್ಧ, ಮುಗ್ಧಮಕ್ಕಳ ನೋಟ ಸೇರಿದಂತೆ ವಿವಿಧ ವಿಷಯಗಳ ಆಧಾರಿತ ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿವಿಧ ಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುವ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಪಾಲ್ಗೊಳ್ಳುವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post