ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಗಣಿತ–ವಿಜ್ಞಾನ ಮೇಳಗಳು ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ವಿಜ್ಞಾನ (Science) ವಿಷಯಗಳ ಬಗ್ಗೆ ಆಸಕ್ತಿ, ಸೃಜನಶೀಲತೆ ಹಾಗೂ ತಾರ್ಕಿಕ ಚಿಂತನೆಯನ್ನು ಬೆಳೆಸುವ ಪರಿಣಾಮಕಾರಿ ಶೈಕ್ಷಣಿಕ ವೇದಿಕೆಗಳಾಗಿವೆ ಎಂದು ವಿದ್ಯಾ ಭಾರತಿ ಕರ್ನಾಟಕ ಪ್ರಾಂತೀಯ ಪ್ರಮುಖ ರಾಜಾರಾಮ್ ಶಿಕಾರಿಪುರದಲ್ಲಿ (Shikaripura) ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಾದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ, ವಿದ್ಯಾ ಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಣಿತ–ವಿಜ್ಞಾನ ಮೇಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ವಿದ್ಯಾ ಭಾರತಿ ಒತ್ತು
ದೇಶಭಕ್ತ, ದೇಶನಿಷ್ಠ ಹಾಗೂ ಸಂಸ್ಕಾರಭರಿತ ಪ್ರಜೆಗಳನ್ನು ರೂಪಿಸುವ ಉದ್ದೇಶದಿಂದ ವಿದ್ಯಾ ಭಾರತಿ ಕಾರ್ಯನಿರ್ವಹಿಸುತ್ತಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ರಾಜಾರಾಮ್ ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರ ಹಾಗೂ ಪ್ರಯೋಗಶೀಲತೆಯನ್ನು ಉತ್ತೇಜಿಸುವುದು ಇಂತಹ ಶೈಕ್ಷಣಿಕ ಮೇಳಗಳ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಮ್ಮ ಕರಕುಶಲತೆ, ಕಲ್ಪನಾಶಕ್ತಿ ಹಾಗೂ ಸೃಜನಶೀಲತೆಯನ್ನು ವಿವಿಧ ಮಾದರಿಗಳ ಮೂಲಕ ಪ್ರದರ್ಶಿಸಲು ಇಂತಹ ವೇದಿಕೆಗಳು ಉತ್ತಮ ಅವಕಾಶವನ್ನು ಕಲ್ಪಿಸುತ್ತವೆ ಎಂದು ಹೇಳಿದರು.
Also read>> ರಕ್ಷಾಬಂಧನ ಜಾಹೀರಾತು ವಿವಾದ: ಟೀಕೆ ಬೆನ್ನಲ್ಲೇ ಕೃತಿ ಸನೋನ್ ಜಾಹೀರಾತು ಹಿಂಪಡೆದ GIVA
Shikaripura : ಶಿಕ್ಷಣವೇ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರ
ಶಿಕ್ಷಣವೇ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರವಾಗಿದೆ. ಶಿಕ್ಷಣದ ಮೂಲಕ ಜ್ಞಾನ ಸಂಪಾದನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯವಾಗಿದೆ ಎಂದು ರಾಜಾರಾಮ್ ಅಭಿಪ್ರಾಯಪಟ್ಟರು.
ಮಕ್ಕಳು ಶಿಕ್ಷಣದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳು ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕೇವಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಾಗದೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರತಿನಿತ್ಯ ಹೊಸದನ್ನು ಕಲಿಯುವ ಆಸಕ್ತಿ ಇರಲಿ: ಡಾ. ಶಿವಕುಮಾರ್
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಆಡಳಿತ ಪ್ರತಿನಿಧಿ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ್ ಜಿ.ಎಸ್., ವಿದ್ಯಾರ್ಥಿಗಳು ಪ್ರತಿನಿತ್ಯ ಹೊಸ ವಿಷಯಗಳನ್ನು ಕಲಿಯುವ ಹುಮ್ಮಸ್ಸನ್ನು ಹೊಂದಿರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವದೊಂದಿಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ತಮ್ಮಲ್ಲಿರುವ ಸೃಜನಶೀಲ ಗುಣವನ್ನು ಬೆಳೆಸಿಕೊಂಡು ಹೊಸ ಆಲೋಚನೆಗಳು ಮತ್ತು ಪ್ರಯೋಗಗಳ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾ ಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ರಾಘವೇಂದ್ರ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂತೀಯ ಪ್ರಮುಖ ನಾಗರಾಜ್ ಅಡಿಗ, ಶಾಲಾ ಪ್ರಾಚಾರ್ಯ ವಿಶ್ವನಾಥ್ ಪಿ., ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ್ ಕುಬಸದ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ವಿಜಯಲಕ್ಷ್ಮಿ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಶಾಲಾ ಪ್ರಾಚಾರ್ಯ ವಿಶ್ವನಾಥ್ ಸ್ವಾಗತಿಸಿದರು. ಸುನೀತಾ ವಂದಿಸಿದರು. ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








