ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಈಗಾಗಲೇ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗಿದೆ. ಮುಂದಿನ ಮೂರುವರೆ ವರ್ಷದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್’ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ದಶಕಗಳ ಬೇಡಿಕೆಯಾಗಿದ್ದ ಸಿಗಂಧೂರು ಸೇತುವೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಶೀಘ್ರ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯೂ ಸಹ ಆರಂಭವಾಗಲಿದೆ. ವಿಮಾನ ನಿಲ್ದಾಣವಾದರೆ ಬಹುರಾಷ್ಟ್ರೀಯ ಕಂಪೆನಿಗಳ ಶಿವಮೊಗ್ಗಕ್ಕೆ ಬರಲಿದ್ದು, ಇದು ಮೂಲಭೂತ ಸೌಲಭ್ಯದ ಹೆಚ್ಚಳವಾಗುವ ಜೊತೆಯಲ್ಲಿ ಉದ್ಯೋಗ ಸೃಷ್ಠಿಗೂ ಸಹ ಸಹಕಾರಿಯಾಗಲಿದೆ ಎಂದರು.
ಮಾರ್ಚ್ 5ರಂದು ಬಜೆಟ್ ಮಂಡಿಸಲಿದ್ದು, ಕೃಷಿ ಹಾಗೂ ನೀರಾವರಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಹಿತಿ ಮಿತಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಗೆ ಪೂರಕವಾಗುವ ಜನಪರ ಬಜೆಟ್ ಮಂಡಿಸುವುದಾಗಿ ಅವರು ತಿಳಿಸಿದರು.
ನಾಳೆ ಸೋಮವಾರ ಬೆಳಗ್ಗೆ 10.30ಕ್ಕೆ ಶಿವಮೊಗ್ಗದಲ್ಲಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ, ನಂತರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು. ಆನಂತರ ಹಾವೇರಿ ಜಿಲ್ಲೆಯ ಹಾನಗಲ್’ನಲ್ಲಿ ನೀರಾವರಿ, ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ, ಮಧ್ಯಾಹ್ನ 3.45 ಕ್ಕೆ ಶಿಕಾರಿಪುರದಲ್ಲಿ ನೀರಾವರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ರಾಜ್ಯ ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪ ಸೇರಿದಂತೆ ಇತರರು ಇದ್ದರು.
Photo Courtesy: Thirthesh
Get in Touch With Us info@kalpa.news Whatsapp: 9481252093
Discussion about this post