ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರಿಹಾರವನ್ನು ಸುಳ್ಳು ಅಂಕಿಅಂಶಗಳ ಆಧಾರದಲ್ಲಿ ವಿತರಿಸಲಾಗುತ್ತಿದೆ. ಆದರೆ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಜಿಲ್ಲಾಧ್ಯಕ್ಷ ಹೆಚ್. ರವಿಕುಮಾರ್ ಆಗ್ರಹಿಸಿದ್ದಾರೆ.
“ರಾಜ್ಯದಲ್ಲಿ ಕೋವಿಡ್‌ನಿಂದ ಮೂರು ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ ನೈಜ ಸಂಗತಿಯನ್ನು ಮರೆಮಾಚಲು, 22 ಸಾವಿರ ಜನರಿಗೆ ಮಾತ್ರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಪ್ರಮಾಣಪತ್ರ ನೀಡಲಾಗಿದೆ. ಪರಿಹಾರದ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ದುರುದ್ದೇಶದಿಂದ, ಸರ್ಕಾರದ ಸೂಚನೆ ಮೇರೆಗೆ ಆಸ್ಪತ್ರೆಗಳು “ಕೋವಿಡ್ ರೀತಿಯ ಸಾವು” ಎಂದು ಅನೇಕರಿಗೆ ಪ್ರಮಾಣಪತ್ರ ನೀಡಿವೆ. ಸರ್ಕಾರವು ಆ ಪ್ರಮಾಣಪತ್ರವನ್ನು ನಂಬಿ ಪರಿಹಾರ ನೀಡುವ ಬದಲು ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.
ಕೋವಿಡ್ ಇಲ್ಲದ 2018ರಲ್ಲಿ ರಾಜ್ಯದ 2.69 ಲಕ್ಷ ಜನರು ಹಾಗೂ 2019ರಲ್ಲಿ 2.79 ಲಕ್ಷ ಜನರು ಮೃತಪಟ್ಟಿದ್ದರು. ಕೋವಿಡ್ ಒಂದನೇ ಅಲೆ ಇದ್ದಾಗಲೂ ರಾಜ್ಯದ 2.64 ಲಕ್ಷ ಜನರು ಮೃತಪಟ್ಟಿದ್ದರು. ಆದರೆ 2021ರಲ್ಲಿ ಕೇವಲ ಮೊದಲ ಆರು ತಿಂಗಳಲ್ಲೇ ಬರೋಬ್ಬರಿ 4.26 ಲಕ್ಷ ಜನರು ರಾಜ್ಯಾದ್ಯಂತ ಮೃತಪಟ್ಟಿದ್ದಾರೆ. ಅಂದರೆ ವಾರ್ಷಿಕ ಸರಾಸರಿಗಿಂತ 1.62 ಲಕ್ಷ ಜನರು ಹೆಚ್ಚುವರಿಯಾಗಿ ಆರು ತಿಂಗಳಲ್ಲೇ ಮೃತಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ಗೆ ಬಲಿಯಾಗಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ” ಹಾಗೂ
“ಎಪಿಎಲ್ ಹಾಗೂ ಬಿಪಿಎಲ್ ಎಂದು ಬೇರ್ಪಡಿಸದೇ ಕೋವಿಡ್‌ನಿಂದ ಮೃತಪಟ್ಟ ಪತ್ರಿಯೊಬ್ಬರ ಕುಟುಂಬಕ್ಕೂ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕೋವಿಡ್‌ನಿಂದಾದ ಸಾವನ್ನೂ ಕೂಡ ಬಿಜೆಪಿಯು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಪರಿಹಾರ ವಿತರೀಸಲು ಬಸವನಗುಡಿಯ ನ್ಯಾಷನಲ್ ಗ್ರೌಂಡ್‌ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೃಹತ್ ಸಮಾವೇಶ ಮಾಡುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ.
ದುಡಿಯುತ್ತಿದ್ದ ಸದಸ್ಯರನ್ನೇ ಕಳೆದುಕೊಂಡು ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಆಸ್ಪತ್ರೆಯ ವೆಚ್ಚವನ್ನು ಸಾಲ ಮಾಡಿ ಭರಿಸಿ, ನಂತರ ದುಡಿಯುವ ಸದಸ್ಯರನ್ನೂ ಕಳೆದುಕೊಂಡ ಅವರ ಕಷ್ಟ ಹೇಳತೀರದು. ಇದರಿಂದಾಗಿ ಸಾವಿರಾರು ಮಹಿಳೆಯರ ಜೀವನ ಅತಂತ್ರವಾಗಿದೆ. ಅವರೆಲ್ಲರಿಗೂ ಸರಿಯಾದ ಪರಿಹಾರ ತಲುಪಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಯತ್ನಿಸುತ್ತಿರುವುದು ಬೇಸರದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post