ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಕೇಳುಗರೊಂದಿಗೆ ಆಚರಿಸುತ್ತಿದೆ. ಆ.15ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವವರೆಗೆ ಅವಿರತ ನೇರಪ್ರಸಾರ ಸಲ್ಯೂಟ್ ಇಂಡಿಯಾ ಕಾರ್ಯಕ್ರಮವಿದ್ದು, ಇದರಲ್ಲಿ ಕೇಳುಗರೂ ಭಾಗವಹಿಸಲು ಅವಕಾಶವಿದೆ.
ಸಲ್ಯೂಟ್ ಇಂಡಿಯಾ ನೇರಪ್ರಸಾರದಲ್ಲಿ, ಆರ್ ಜೆ ಗಳಾದ ಶ್ವೇತಾ, ರಕ್ಷಿತಾ ಹೊಳ್ಳ, ಅರ್ಪಿತಾ, ಮಹಾಲಕ್ಷ್ಮೀ. ಪವಿತ್ರಾ ದಿನೇಶ್, ಶ್ರೀಧರ್ ಇದರಲ್ಲಿ ಭಾಗವಹಿಸಲಿದ್ದಾರೆ. ತಾಂತ್ರಿಕ ಸಂಯೋಜಕ ಶ್ರೀಕಾಂತ್ ಸಹಕಾರ ನೀಡಲಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥನ, ಇದರಲ್ಲಿ ಸಾಹಿತ್ಯದ ಕೊಡುಗೆ.
ರೈತರು, ವಿದ್ಯಾರ್ಥಿಗಳು, ಜನಸಾಮಾನ್ಯರ ಪಾತ್ರ ಇತ್ಯಾದಿ ವಿಶೇಷತೆಗಳನ್ನು ಇದು ಒಳಗೊಂಡಿರುತ್ತದೆ. ಇದರ ಜೊತೆಯಲ್ಲಿ ಕೇಳುಗರು ನೀಡಿದಂತಹ ದೇಶಭಕ್ತಿ ಗೀತ ಗಾಯನ, ಮಾತುಗಳೂ ಇರುತ್ತವೆ. ನೇರಪ್ರಸಾರದಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ಮಾಹಿತಿ ಇರುತ್ತದೆ. ಕಾರ್ಯಕ್ರಮದ ನಡುವೆ ದೇಶಭಕ್ತಿ ಗೀತೆಗಳನ್ನೂ ಕೇಳಬಹುದಾಗಿದೆ.
ಕೇಳುಗರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಾಗಿದೆ. ನೇರಪ್ರಸಾರ ಸಮಯದಲ್ಲಿ (ಮೊ: 96 860 96 279) ಗೆ ಕರೆ ಮಾಡಿ ಮಾತನಾಡಬಹುದು. ನಿಮ್ಮ ಸ್ವಾತಂತ್ರ್ಯೋತ್ಸವದ ನೆನಪುಗಳು, ಮರೆಯಲಾರದ ಮಹನೀಯರ ಕುರಿತು ಮಾತನಾಡಬಹುದು, ದೇಶಭಕ್ತಿ ಗೀತೆಗಳನ್ನೂ ಕೂಡಾ ಹಾಡಬಹುದಾಗಿದೆ.
ಈ ನೇರಪ್ರಸಾರದ ಆಯೋಜನೆಯಲ್ಲಿ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರವು ಸಹಭಾಗಿಗಳಾಗಿವೆ. ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
Radio App Link https://play.google.com/store/apps/details?id=com.atclabs.radioshivmogga
ನಿಮ್ಮೊಂದಿಗೆ…
ಆರ್ ಜೆ ಶ್ವೇತಾ ಪ್ರದೀಪ್
ರೇಡಿಯೋ ಶಿವಮೊಗ್ಗದ ಆರಂಭದ ದಿನದಿಂದಲೂ ಜೊತೆಯಾಗಿರುವ ಇವರು ಪ್ರಸ್ತುತ ವಿಜ್ಞಾನ, ತಂತ್ರಜ್ಞಾನದ ಕುತೂಹಲಕಾರಿ ವಿಷಯಗಳನ್ನು ತಿಳಿಸುವ ಕೌತುಕ ಕಾರ್ಯಕ್ರಮವನ್ನು ಪ್ರತಿದಿನ ಬೆಳಗ್ಗೆ 8:30ಕ್ಕೆ ನಡೆಸುತ್ತಾರೆ. ವಿದ್ಯಾರ್ಥಿಗಳು, ವಿಜ್ಞಾನ ಕುತೂಹಲಿಗಳ ಕೇಳುಗ ಬಳಗ ಇದಕ್ಕಿದೆ. ಇದರ ಜೊತೆಗೆ ಈ ಮೊದಲು ಸಿಟಿ ಸ್ಟೋರೀಸ್, ಕಲರವ, ಲರ್ನಿಂಗ್ ಕಾರ್ನರ್ ಇತ್ಯಾದಿ ಕಾರ್ಯಕ್ರಮಗಳನ್ನೂ ನಿರ್ವಹಿಸಿ, ಜನರ ಪ್ರಶಂಸೆ ಗಳಿಸಿರುತ್ತಾರೆ.
ಆರ್ ಜೆ ಶ್ರೀಧರ್
ಕಳೆದ ಎರಡೂವರೆ ವರ್ಷಗಳಿಂದಲೂ ಬಾನುಲಿಯ ಜೊತೆಯಾಗಿರುವ ಇವರು ಪ್ರಸ್ತುತ ಆಹಾರದ ಕುರಿತಾಗಿ ಕಾಳಜಿ ಮಾತುಗಳ ಊಟದ ತಾಟು ಕಾರ್ಯಕ್ರಮವನ್ನು ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ನಡೆಸುತ್ತಾರೆ. ಇದರ ಜೊತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳತ್ತ ಗಮನ ನೀಡುವ ಆಗಬೇಡಿ ಆಲಸಿ, ನಮ್ಮನ್ನೂ ಆಲಿಸಿ ಕಾರ್ಯಕ್ರಮ ಪ್ರತಿದಿನ ಸಂಜೆ 5:30ಕ್ಕೆ ನಿರ್ವಹಿಸುತ್ತಾರೆ. ಈ ಎರಡೂಕಾರ್ಯಕ್ರಮವೂ ತನ್ನದೇ ಆದ ಕೇಳುಗ ವಲಯ ಹೊಂದಿದ್ದು, ಜನಪ್ರಿಯತೆ ಪಡೆದಿದೆ.
ಆರ್ ಜೆ ರಕ್ಷಿತಾ ಹೊಳ್ಳ
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗ್ರಾಮದವರಾದ ಇವರು, ಬಾನುಲಿಯಲ್ಲಿ ಎರಡು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಲೋಕದ ಅನಾವರಣವಾದ ಒಂದು ಅಧ್ಯಾಯ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ 9:30ಕ್ಕೆ ಪ್ರಸಾರವಾಗುತ್ತಿದೆ. ಪ್ರಾಣಿ, ಪಕ್ಷಿಗಳ ಜೀವನಶೈಲಿಯ ಕುರಿತಾದ ಕಲವರ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 6 ಗಂಟೆಗೆ ನಡೆಸುತ್ತಿದ್ದಾರೆ. ಎರಡೂ ವಿಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ, ಉತ್ತಮ ಕೇಳುಗ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.
ಆರ್ ಜೆ ಅರ್ಪಿತ ವಿ.ಎನ್.
ಬಾನುಲಿಯಲ್ಲಿ ನಡೆದ ತರಬೇತಿಯಿಂದಲೂ ಜೊತೆಗಿರುವ ಇವರು, ಮುಂಜಾನೆಯ ಸುಮಧುರ ಮಾತುಗಳೊಂದಿಗೆ ಕೇಳುಗರಿಗೆ ಜೊತೆಯಾಗಲಿದ್ದು, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮುಂಗೋಳಿ ಕೂಗ್ಯಾವೋ ಕಾರ್ಯಕ್ರಮ ನಡೆಸುತ್ತಾರೆ. ಶಿವಮೊಗ್ಗದ ಯಶಸ್ವಿ ಉದ್ಯಮಿಗಳನ್ನು , ಉದ್ಯಮಗಳನ್ನು ಪರಿಚಯಿಸುವ ಬ್ಯುಸಿನೆಸ್ ಬಝ್ ಕಾರ್ಯಕ್ರಮವನ್ನು ಸಂಜೆ 6:30ಕ್ಕೆ ನಿರ್ವಹಿಸುತ್ತಾರೆ. ಈ ಎರಡೂ ಕಾರ್ಯಕ್ರಮಗಳನ್ನೂ ನಿರ್ವಹಿಸುತ್ತಾ, ಕೇಳುಗರ ವಲಯದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುತ್ತಾರೆ.
ಆರ್ ಜೆ ಮಹಾಲಕ್ಷ್ಮೀ
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದವರಾದ ಇವರು ಪ್ರಸ್ತುತ ಶಿವಮೊಗ್ಗದಲ್ಲೇ ನೆಲೆಸಿರುತ್ತಾರೆ. ಬಾನುಲಿ ಆರಂಭದಿಂದಲೂ ರೈತಾಪಿ ಬದುಕನ್ನು ಹಸನಗೊಳಿಸುವ ಕಾರ್ಯಕ್ರಮ ಒಕ್ಕಲುತನ ಪ್ರತಿದಿನ ಸಂಜೆ 7 ಗಂಟೆಗೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಪ್ರಸಾರವಾಗುವ ನಿಮ್ಮ ಜರ್ನಿ ನಮ್ಮ ಜೊತೆ ಕಾರ್ಯಕ್ರಮ ನಡೆಸುವ ಮುಖಾಂತರ ಪ್ರವಾಸಿ ಸ್ಥಳಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಈ ಎರಡೂ ವಿಭಿನ್ನ ನೆಲೆಯ ಕಾರ್ಯಕ್ರಮಗಳ ಮುಖಾಂತರ ಜನಪ್ರಿಯತೆ ಗಳಿಸಿರುತ್ತಾರೆ.
ಆರ್ ಜೆ ಪವಿತ್ರಾ ದಿನೇಶ್
ಮೂಲತಃ ಸಾಗರ ಸಮೀಪದ ಗೌತಮಪುರದವರು. ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಜನಪದ ಕಾರ್ಯಕ್ರಮವನ್ನು ಆರಂಭದಿಂದಲೂ ನಡೆಸಿಕೊಂಡು ಬಂದವರು, ಪ್ರಸ್ತುತ ವಚನ ವಿಹಾರ ಕಾರ್ಯಕ್ರಮವನ್ನು ಪ್ರತಿದಿನ ಬೆಳಗ್ಗೆ 7 ಗಂಟೆಗೆ ನಡೆಸುತ್ತಿದ್ದಾರೆ. ಇದರ ಮುಖಾಂತರ ಜನಪ್ರಿಯ ವಚನಕಾರರ ಜೊತೆಗೆ ಗೌಪ್ಯ ವಚನಕಾರರನ್ನು, ವಚನಗಳ ಭಾವಾರ್ಥವನ್ನು ತಿಳಿಸುತ್ತಾ, ಮನ್ನಣೆ ಪಡೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post