ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಬೀರಲಿಂಗೇಶ್ವರ ದೇವಾಲಯ ಸೇವಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಕನಕ ಲೇಔಟ್‌ನಲ್ಲಿ ಶ್ರೀ ಬೀರಲಿಂಗೇಶ್ವರ ದೇವಾಲಯವನ್ನು ನಿರ್ಮಾಣ ಮಾಡಲಾಗಿದ್ದು, ನ.12 ರಿಂದ 14ರವರೆಗೆ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಮಾಲತೇಶ್ ಹೇಳಿದರು.
ಇಂದು ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 1 ಎಕರೆಯಷ್ಟು ವಿಸ್ತೀರ್ಣದ ಜಾಗದಲ್ಲಿ ವಿಶಾಲ ಪ್ರಾಂಗಣದಲ್ಲಿ ಕೊಟ್ಯಂತರ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಿದ್ದು, ದೇವಾಲಯದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ, ಕುರುಬ ಸಮುದಾಯದ ಕುಲಗುರುಗಳಾದ ಶ್ರೀ ರೇವಣ ಸಿದ್ದೇಶ್ವರ ಮೂರ್ತಿ ಮತ್ತು ಶ್ರೀ ಲಕ್ಷ್ಮೀದೇವರ ಸ್ಥಿರಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗುವುದು. ಅಲ್ಲದೆ ದೇವಾಲಯದ ಆವರಣದಲ್ಲಿ ನಯನ ಮನೋಹರ ಕನಕ ಮಂಟಪ ನಿರ್ಮಿಸಲಾಗಿದ್ದು, ಮಂಟಪದಲ್ಲಿ ದಾಸಶ್ರೇಷ್ಠ ಕನಕದಾಸರ ಪುತ್ಥಳಿ ಪ್ರತಿಷ್ಠಾಪನೆ, ಏಕಶಿಲೆಯಲ್ಲಿ ನಿರ್ಮಿಸಿರುವ ಬಯಲು ಉದ್ಭವಲಿಂಗದ ಲೋಕಾರ್ಪಣೆ ನಡೆಯಲಿದೆ. ಸುಂದರ ಪುಷ್ಕರಣಿಯಲ್ಲಿ ವಿಘ್ನನಿವಾರಕ ಶ್ರೀ ವಿನಾಯಕ ಮೂರ್ತಿ ಸ್ಥಾಪನೆಯಾಗಲಿದೆ ಎಂದರು.
ಅಪರೂಪ ಹಾಗೂ ಜಿಲ್ಲೆಯಲ್ಲೇ ಮೊದಲು ಎನ್ನಲಾದ ಶ್ರೀ ಬೀರಲಿಂಗೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು,12ರ ಶುಕ್ರವಾರ ಸಂಜೆ ಕಾಗಿನೆಲೆ ಕನಕಗುರುಪೀಠದ ಹೊಸದುರ್ಗ ಶಾಖಾಮಠದ ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸು ಮೂಲಕ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಅಂದು ಸಂಜೆ 4 ಗಂಟೆಗೆ ವಿನೋಬನಗರದ ಶಿವಾಲಯದಿಂದ ಶ್ರೀ ಬೀರಲಿಂಗೇಶ್ವರ ದೇವಾಲಯದ ವರೆಗೆ ಪರಮಪೂಜ್ಯರನ್ನು 108 ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಮೆರವಣಿಗೆಯಲ್ಲಿ ಶ್ರೀಗಳೊಂದಿಗೆ ಹರಮಘಟ್ಟದ ಶ್ರೀ ಬೀರದೇವರು, ಬೊಮ್ಮನಕಟ್ಟೆಯ ಶ್ರೀ ಕೆಂಚಮ್ಮ, ಕಾಶೀಪುರದ ಶ್ರೀ ದುರ್ಗಮ್ಮ, ಮಾದನಬಾವಿಯ ಶ್ರೀ ಬೀರದೇವರು, ಹರಳಹಳ್ಳಿಯ ಶ್ರೀ ಬೀರದೇವರು, ಶಿವಾಲಯದ ಶ್ರೀ ಈಶ್ವರ ಮುಂತಾದ ದೇವಾಲಯಗಳ ಉತ್ಸವಮೂರ್ತಿಗಳು ಪಾಲ್ಗೊಳ್ಳಲಿವೆ. ಮೆರವಣಿಗೆಯಲ್ಲಿ ಆಕರ್ಷಕ ಡೊಳ್ಳುಕುಣಿತ, ವೀರಗಾಸೆ ತಂಡಗಳು ಇರಲಿವೆ. ಮೆರವಣಿಗೆಯ ನಂತರ ಸಮಾಜದ ಬಂಧುಗಳಿಂದ ದೇವಾಲಯಕ್ಕೆ ಮೀಸಲು ಸಮರ್ಪಣೆ ಹಾಗೂ ಮಾತೆಯರಿಗೆ ಮಡಿಲು ತುಂಬುವ ಕಾರ್ಯಕ್ರಮವಿರುತ್ತದೆ.
ನಂತರ ಗೋಧೂಳಿ ಲಗ್ನದಲ್ಲಿ ಗೋಮಾತಾ ಸಹಿತ ಗಂಗಾಪರಮೇಶ್ವರಿಯೊಂದಿಗೆ ಆಲಯ ಪ್ರವೇಶ ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಾಹ, ನಾಂದಿ ಹಾಗೂ ರಾಕ್ಷೋಘ್ನಹೋಮ ಮತ್ತು ಬಲಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
13ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ವಿವಿಧ ಮಹಿಳಾ ಮಂಡಳಿಯಿಂದ ಭಜನಾಮೃತ ಕಾರ್ಯಕ್ರಮವಿರಲಿದೆ. ಸಂಜೆ 4 ಗಂಟೆಗೆ ಮಹಾಗಣಪತಿ ಸಮೇತ ಉಮಾ ಮಹೇಶ್ವರ, ಲಕ್ಷ್ಮೀನಾರಾಯಣ, ಅಷ್ಟಲಕ್ಷ್ಮೀ, ನವಗ್ರಹ ಸಮೇತ ಮೃತ್ಯುಂಜಯ, ಸಪ್ತಸಭಾ ದೇವತಾ ಅಷ್ಟದಿಕ್ಪಾಲಕ ದೇವತಾ ಸಮೇತ ಪ್ರಧಾನ ದೇವತೆಗಳ ಕಳಶ ಪೂಜೆಗಳು ನೆರವೇರಲಿವೆ. ನಂತರ ಸಂಜೆ 4 ಗಂಟೆಗೆ ದೇವಾಲಯದ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿದ ದಾನಿಗಳಿಗೆ ಸ್ವಾಮೀಜಿಗಳಿಂದ ಸನ್ಮಾನ ಕಾರ್ಯಕ್ರಮವಿರುತ್ತದೆ. ಇದೇ ಸಂದರ್ಭದಲ್ಲಿ ಉಪನ್ಯಾಸಕ ಲಿಂಗದಹಳ್ಳಿ ಹಾಲಪ್ಪ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಂಜೆ 7 ಗಂಟೆಗೆ ಸರಿಯಾಗಿ ಮಹಾಗಣಪತಿ ಹೋಮ, ವಾಸ್ತು ವರುಣ ಹೋಮ, ಪಂಚಬ್ರಹ್ಮ ರುದ್ರದೇವತಾ ಹೋಮ, ಸಪ್ತಸಭಾ ದೇವತಾ ಹೋಮ, ದಶದಿಕ್ಪಾಲಕ ಹೋಮ, ನವಗ್ರಹ ಸಮೇತ ಮೃತ್ಯುಂಜಯ ಹೋಮ ಇತ್ಯಾದಿ ಹೋಮಗಳು ನೆರವೇರಲಿದ್ದು, ನಂತರ ಪ್ರಸಾದ ವಿನಿಯೋಗವಿರುತ್ತದೆ.
ನವೆಂಬರ್ 14ರಂದು ಬೆಳಿಗ್ಗೆ 6.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ರುದ್ರಾಭಿಷೇಕ, 108 ಕಳಶ ಕುಂಭದೊಂದಿಗೆ ವಿಗ್ರಹ ಪ್ರತಿಷ್ಠಾಪನೆ, ಪೂರ್ಣಾಹುತಿ, ನೇತ್ರೋನ್ಮಿಲನ ಕದಳಿ ಫಲ ವೃಕ್ಷ ಛೇದನ, ಪುಷ್ಪಾಲಂಕಾರ ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶಿವನಿಯ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ದೇವಾಲಯದ ಅರ್ಚಕ ನವೀನ್ ಆರ್.ಒಡೆಯರ್ ಮತ್ತು ಸಂಘಡಿಗರು ನಡೆಸಿಕೊಡಲಿದ್ದಾರೆ ಎಂದರು.
ಬೆಳಿಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಕೃಪಾಶೀರ್ವಾದೊಂದಿಗೆ ಶ್ರೀಕ್ಷೇತ್ರ ಕಾಗಿನೆಲೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶ್ರೀಕ್ಷೇತ್ರ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹಾಗೂ ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಬಿ.ವೈ. ರಾಘವೇಂದ್ರ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಾಜಿ ಶಾಸಕ ವರ್ತೂರ್ ಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಂ. ಶ್ರೀಕಾಂತ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ. ಮೈಲಾರಪ್ಪ, ಜಿಲ್ಲಾ ಪಂಚಾಯ್ತಿ – ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ, ಎಪಿಎಂಸಿಯ ಮಾಜಿ ಮತ್ತು ಹಾಲಿ ಸದಸ್ಯರುಗಳು, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಮತ್ತು ಹಾಲಿ ನಿರ್ದೇಶಕರುಗಳು, ಶಿವಮೊಗ್ಗ ನಗರದ ಎಲ್ಲ ಕುರುಬ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಧರ್ಮಸಭೆಯ ನಂತರ ಶ್ರೀಮತಿ ದೀಪಿಕಾ ಶ್ರೀಕಾಂತ್‌ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ಹಾಗೂ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತನು, ಮನ, ಧನ ಸಹಕಾರ ನೀಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಡಿ.ಸೋಮಸುಂದರಂ, ಮಾಜಿ ಉಪಮೇಯರ್ ಹೆಚ್. ಪಾಲಾಕ್ಷಿ, ಪ್ರಮುಖರಾದ ರಾಮಕೃಷ್ಣ ಮೂಡ್ಲಿ, ದೊಡ್ಡಪ್ಪ, ಸಿ.ಹೊನ್ನಪ್ಪ, ಮೊಹನ್, ಕೆ. ರಂಗನಾಥ್, ಜಿ.ಆರ್. ಷಡಾಕ್ಷರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post