ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಗಿರಿಜಾಶಂಕರ ಸಭಾಭವನದಲ್ಲಿ ಯಕ್ಷರಂಗ #Yaksharanga ಸೊರಬ ವತಿಯಿಂದ ಶನಿವಾರ ರಾತ್ರಿ ಪ್ರದರ್ಶನಗೊಂಡ ಭಸ್ಮಾಸುರ ಮೋಹಿನಿ ಯಕ್ಷಗಾನ #Yakshagana ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾಧರ ಜಲವಳ್ಳಿ ಅವರ ಭಸ್ಮಾಸುರ, ನೀಲ್ಕೋಡು ಶಂಕರ ಹೆಗಡೆ ಅವರ ಮೋಹಿನಿ, ಅಶೋಕ್ ಭಟ್ ಸಿದ್ಧಾಪುರ ಅವರ ವಿಷ್ಣು, ಸಂಜಯ ಬೆಳೆಯೂರು ಅವರ ಈಶ್ವರ, ಮಹಾಭಲೇಶ್ವರ ಗೌಡ್ರು ಅವರ ದೇವೇಂದ್ರ ಹಾಗೂ ನಾಗರಾಜ ಕಂಕಿಪಾಲ್ ಅವರ ಪಾರ್ವತಿ ಪಾತ್ರಗಳು ಗಮನ ಸೆಳೆದವು.
ಝಗಮಗಿಸುವ ವೇಷಭೂಷಣ, ಚುರುಕುನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶ್ರೀಧರ ಹೆಗಡೆ ಚಪ್ಪರ ಮನೆ ಅವರ ಹಾಸ್ಯ ಸಕಾಲಿಕವಾಗಿತ್ತು. ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಉಶಸ್ವಿಯಾಯಿತು. ಕುಮಾರಿ ಅನ್ವಿತಾ ಬಾಲಗೋಪಾಲ ವೇಷದಲ್ಲಿ ಗಮನ ಸೆಳೆದಳು.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಅವರ ಕಂಚಿನ ಕಂಠದ ಗಾಯನ, ಪರಮೇಶ್ವರ ಭಂಡಾರಿ ಅವರ ಮದ್ದಳೆವಾದನ, ಪ್ರಸನ್ನ ಭಟ್ಟ ಹೆಗ್ಗಾರು ಅವರ ಚೆಂಡೆವಾದನ #ChandeVadana ಸಭಿಕರನ್ನು ಮೈನವಿರೇಳಿಸಿತು. ಯಕ್ಷಗಾನ ಪ್ರದರ್ಶನ ವೀಕ್ಷಿಸಲು ಸೊರಬ ಮಾತ್ರವಲ್ಲದೇ ನೆರೆಯ ಸಿದ್ದಾಪುರ, ಸಾಗರ, ಶಿರಶಿ ಭಾಗದಿಂದಲೂ ಅಭಿಮಾನಿಗಳು ಆಗಮಿಸಿದ್ದರು.
ಯಕ್ಷಗಾನ ಪ್ರದರ್ಶನಕ್ಕೆ ಯಕ್ಷರಂಗ ಸೊರಬದ ದಿವಾಕರ್ ಭಟ್ ಭಾವೆ ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿದರು. ವಿಹಿಂಪ ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ಪಾಣಿ ರಾಜಪ್ಪ, ಎ.ಎಲ್. ಅರವಿಂದ್, ಪ್ರಭಾಕರ್ ರಾಯ್ಕರ್, ಗಜಾನನರಾವ್ ಉಳವಿ, ದಿನಕರ ಭಟ್ ಭಾವೆ, ಷಣ್ಮುಖಾಚಾರ್, ದತ್ತಾತ್ರೇಯ ಪುರಾಣಿಕ್, ಸವಿತಾ ಎಂ.ಕೆ. ಭಟ್, ಹರಿಶ್ ಭಟ್, ಸೇರಿದಂತೆ ನೂರಾರು ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post