ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾತ್ರ ಹೇಳಿದ್ದೆ. ರಾಜಕೀಯದಿಂದ ನಿವೃತ್ತಿ ಪಡೆದಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದ್ದು, ನಾಳೆಯಿಂದಲೇ ವ್ಯಾಪಕ ಪ್ರಚಾರ ಮಾಡಲಿದ್ದೇನೆ. ಬಿಜೆಪಿ ಕನಿಷ್ಠ 150 ಸ್ಥಾನ ಗಳಿಸಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ B S Yadiyurappa ಹೇಳಿದ್ದಾರೆ.
ಅವರು ಇಂದು ನಗರದ ಬೆಕ್ಕಿನಕಲ್ಮಠದಲ್ಲಿ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ ವತಿಯಿಂದ ಬಿ.ಎಸ್ ಯಡಯೂರಪ್ನವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಮಾನ ನಿಲ್ದಾಣ ಪ್ರಧಾನಿ ಉದ್ಘಾಟಿಸಿದ ನಂತರ ಶಿವಮೊಗ್ಗ ಜಿಲ್ಲೆಗೆ ವ್ಯಾಪಕ ಉದ್ಯೋಗಾವಕಾಶ ಸಿಗಲಿದೆ. ಜಿಲ್ಲೆಯ ಜನತೆಯ ಎಲ್ಲಾ ಅಪೇ ಕ್ಷೆಗಳಲ್ಲಿ ಶೇ. 90ರಷ್ಟು ಈಡೇರಿಸಿದ್ದೇನೆ. ಶಿವಶರಣರ ನಾಡಾದ ಜಿಲ್ಲೆಯ ಉಡುತಡಿ ಮತ್ತು ಬಳ್ಳಿಗಾವಿಯಲ್ಲಿ 10ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ. ಎಲ್ಲಾ ಮಠ ಮಂದಿರಗಳಿಗೆ ನನ್ನ ಅವಧಿಯಲ್ಲಿ ಅನುದಾನ ನೀಡಿದ್ದೇನೆ. ಎಲ್ಲಾ ಸಮಾಜಕ್ಕೂ ಅನುದಾನ ಹಂಚಿಕೆ ಮಾಡಿದ್ದೇನೆ. ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರಧಾನಿ ಮೋದಿಯವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಬಿಜೆಪಿಯನ್ನು ಗೆಲ್ಲಿಸಿ ಅವರಿಗೆ ಕೊಡುಗೆ ನೀಡಲಿದ್ದೇನೆ ಎಂದರು.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿಯೇ ಇಲ್ಲ. ಅವರಿಗೆ ಹಾರ ತುರಾಯಿಯ ಸನ್ಮಾನ ಬೇಕಿಲ್ಲ. ನಾಡಿನ ಸಾಮಾನ್ಯ ಜನತೆ ಕೂಡ ಅವರನ್ನು ಅಭಿನಂದಿಸಲು ಹಾತೊರೆಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಕನ್ನಡ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಅಪರೂಪದ ರಾಜಕಾರಣಿ ಅವರು ಎಂದರು.
ಆರೋಗ್ಯ ಶಿಕ್ಷಣ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಲೆನಾಡು ಅಭಿವೃದ್ಧಿಗೆ ಬಿ.ಎಸ್‌ವೈ ಕೊಡುಗೆ ಅಪಾರ. ಅವರ ಋಣವನ್ನು ಜಿಲ್ಲೆಯ ಜನತೆ ಮರೆಯುವುದಿಲ್ಲ. ಅವರ ಇಚ್ಛಾಶಕ್ತಿಗೆ ಸಾಟಿ ಯಾರೂ ಇಲ್ಲ. ನುಡಿದಂತೆ ನಡೆದ ಅಪರೂಪದ ರಾಜಕಾರಣಿ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್, ಎಸ್. ರುದ್ರೇಗೌಡ ಹಾಗೂ 27ಕ್ಕೂ ಹೆಚ್ಚು ವಿವಿಧ ಮಠಾಧೀಶರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post