ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್. ಅದನ್ನು ಹೊಡೆದೋಡಿಸುವುದೇ ಬಿಜೆಪಿಯ ಗುರಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ Minister Ashwathnarayan ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನಸೌಧವನ್ನು ಶುದ್ಧ ಮಾಡುವುದರ ಜೊತೆಗೆ ಭ್ರಷ್ಟಾಚಾರ ಶುದ್ಧ ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಡಿ.ಕೆ. ಶಿವಕುಮಾರ್ ಎಷ್ಟು ಭ್ರಷ್ಟರು ಎಂದು ಎಲ್ಲರಿಗೂ ಗೊತ್ತಿದೆ. ಮೊದಲು ಅವರು ಗೋಮೂತ್ರ, ಗಂಗಾಜಲದಲ್ಲಿ ಮನಸ್ಸನ್ನು ಮತ್ತು ಮೈಯನ್ನು ಶುದ್ಧಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಪ್ರಗತಿಯ ಜೊತೆಗೆ ಭ್ರಷ್ಟಾಚಾರವನ್ನು ಹೊಡೆದೋಡಿಸುವುದೇ ಬಿಜೆಪಿಯ ಮುಖ್ಯ ಗುರಿ. ಪಾರದರ್ಶಕತೆ ಮತ್ತು ಅಧಿಕಾರದ ವಿಕೇಂದ್ರೀಕರಣದ ಮೂಲಕ ಆಡಳಿತ ನಡೆಸುತ್ತಿರುವ ಬಿಜೆಪಿ ಭಯೋತ್ಪಾದನೆಯನ್ನು ಕೊನೆಗಾಣಿಸುತ್ತಿದೆ. ಇಂತಹ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ, ಡಿ.ಕೆ. ಶಿವಕುಮಾರ್ ಅವರಿಗೂ ಇಲ್ಲ. ಸಿದ್ದರಾಮಯ್ಯನವರಿಗೂ ಇಲ್ಲ. ಅವರ ಅಜ್ಞಾನದ ಮಾತುಗಳು ಅವರಿಗೇ ಮುಳುವಾಗುತ್ತವೆ. ಸಿದ್ದರಾಮಯ್ಯನಂತವರು ಮುಖ್ಯಮಂತ್ರಿ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿಮರಿ, ಅವರ ಮನೆ ಹಾಳಾಗ ಎಂದೆಲ್ಲಾ ಹೇಳುತ್ತಾರೆ ಎಂದರೆ ಜನ ಅವರಿಗೆ ಖಂಡಿತಾ ಪಾಠ ಕಲಿಸುತ್ತಾರೆ. ಮುಂದಿನ ದಿನದಲ್ಲಿ ಕಾಂಗ್ರೆಸ್‌ಮುಕ್ತ ಕರ್ನಾಟಕ ಖಂಡಿತಾ ಆಗುತ್ತದೆ ಎಂದರು.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಧ್ಭುತ ಯಶಸ್ಸುಕಾಣುತ್ತಿದೆ. ಪಕ್ಷವನ್ನು ಸದೃಢಗೊಳಿಸುತ್ತಿದೆ. ರಾಜ್ಯದಲ್ಲಿ 150 ಸೀಟುಗಳೋಂದಿಗೆ ಬಿಜೆಪಿ ತನ್ನ ಸಾಮ್ರಾಜ್ಯ ವಿಸ್ತರಿಸಲಿದೆ. ಈ ಅಭಿಯಾನ ಕೋಟ್ಯಂತರ ಮನೆಗಳನ್ನು ತಲುಪುತ್ತಿದೆ. ಪೇಜ್ ಪ್ರಮುಖರ ಸಮಾವೇಶ ಫಲ ಕೊಡುತ್ತಿದೆ. ಬಿಜೆಪಿಯ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಮತ್ತುರಾಜ್ಯ ಸರ್ಕಾರದ ಸಾಧನೆಗಳು ಜನರನ್ನು ತಲುಪುತ್ತಿವೆ. ಒಂದು ಸ್ಥಿರ ಸರ್ಕಾರ ಕೊಡುವಲ್ಲಿ ಈ ಸಂಕಲ್ಪ ಯಾತ್ರೆ ಯಶಸ್ವಿಯಾಗುತ್ತಿದೆ ಎಂದರು.
ಕುಟುಂಬ ಮತ್ತು ವಂಶಪಾರಂಪರ್ಯ ರಾಜಕಾರಣವನ್ನು ಬಿಜೆಪಿ ವಿರೋಧಿಸುತ್ತದೆ. ಅದಕ್ಕೆ ಯಾವತ್ತೂ ಸಹಕಾರ ಕೊಡುವುದಿಲ್ಲ. ಇದು ಒಮ್ಮೆಯೆ ಆಗಿಬಿಡುತ್ತದೆ ಎಂದೂ ಅಲ್ಲ. ಕೆಲವು ಸಲ ಅಭ್ಯರ್ಥಿಗಳೇ ಇಲ್ಲದ ಸಮಯದಲ್ಲಿ ಮಿತಿಯಾಗಬಹುದು. ಆದರೆ ಮುಂದೊಂದು ದಿನ ಕುಟುಂಬ ರಾಜಕಾರಣ, ವಂಶಪಾರಂಪರ್ಯ ರಾಜಕಾರಣ ಮತ್ತು ಜಾತಿ ರಾಜಕಾರಣವನ್ನು ಬುಡಸಮೇತ ಓಡಿಸುತ್ತದೆ ಎಂದರು.
ಕಾಂಗ್ರೆಸ್ನವರು ತಮಗೆ ಯೋಗ್ಯತೆ ಇಲ್ಲದೆ ಬಿಬಿಸಿಯವರ ಕೈಯಲ್ಲಿ ಡಾಕ್ಯುಮಂಟರಿ ಮಾಡಿ ಬಿಡುಗಡೆ ಮಾಡಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇವರಿಗೆ ಸಂವಿಧಾನದಲ್ಲಿ, ನ್ಯಾಯಾಲಯದಲ್ಲಿ ಯಾವ ನಂಬಿಕೆಯೂ ಇಲ್ಲವಾಗಿದೆ. ದೇಶದ ಆಂತರಿಕ ವಿಚಾರಗಳನ್ನು ಬಿಬಿಸಿಗೆ ತೆಗೆದುಕೊಂಡು ಹೋಗುವ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಬಾರದಿತ್ತು. ಭಾರತದ ಆಂತರಿಕ ವಿಷಯಗಳನ್ನು ನೆಗೆಟಿವ್ ಆಗಿ ತರಲು ಇವರ್‍ಯಾರು ಎಂದು ಪ್ರಶ್ನಿಸಿದರು.
ಮೋದಿಯವರು ಮುಸ್ಲಿಂ ಧರ್ಮವನ್ನು ಪ್ರೀತಿಸುತ್ತಾ, ಸಾಗಬೇಕು. ಎಂದು ಹೇಳಿದ್ದಾರೆ. ನಾವು ಯಾವ ಧರ್ಮವನ್ನೂ ವಿರೋಧಿಸುತ್ತಿಲ್ಲ. ಆದರೆ ಈ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಈ ಸಮಾಜವನ್ನು ಒಡೆದಿದ್ದಾರೆ. ಬಿಜೆಪಿಯಲ್ಲ ಎಂದ ಅವರು, ಇಲ್ಲಿ ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಾಜ್, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಭಾನುಪ್ರಕಾಶ್, ಆರ್‌ಕೆ. ಸಿದ್ರಾಮಣ್ಣ, ಗಿರೀಶ್ ಪಟೇಲ್, ದತ್ತಾತ್ರಿ, ಶಿವರಾಜ್, ಮೇಯರ್ ಶಿವಕುಮಾರ್, ಜಗದೀಶ್, ಕೆ.ವಿ. ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post