ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಕಾಲೀನ ಕಲುಷಿತ ಮತ್ತು ಮೌಲ್ಯ ರಹಿತ ರಾಜಕೀಯ ವ್ಯವಸ್ಥೆಯಲ್ಲಿ ದೇಶ ಕಂಡ ಮಹಾನ್ ಮೌಲ್ಯಯುತ ರಾಜನೀತಿಜ್ಞ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ನಿಸ್ವಾರ್ಥಯುತ ಬದುಕು ಮತ್ತು ಆದರ್ಶಮಯ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಚಿಂತನೆಗಳು ನಿಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ರಘುನಾಥ್.ಹೆಚ್.ಎಸ್. ಅಭಿಪ್ರಾಯಪಟ್ಟರು.
ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮ ದಿವಸದ ಅಂಗವಾಗಿ ನಡೆದ ಫಿಟ್ ಇಂಡಿಯಾ ಫ್ರೀಡಂ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ರಾಜಕಾರಣದೊಳಗಿನ ದಾರ್ಶನಿಕರಾಗಿದ್ದ ಉಪಾಧ್ಯಾಯರು ಪ್ರತಿಪಾದಿಸಿದ್ದ ಏಕಾತ್ಮ ಮಾನವತವಾದ, ದೇಶಿಯ ನೆಲೆಯ ಆರ್ಥಿಕ ಚಿಂತನೆಗಳು, ಮೌಲ್ಯಯುತ ರಾಜಕಾರಣ ಮತ್ತು ಸಾಮಾಜಿಕ ಸ್ಪಂದನೆಯ ಚಿಂತನೆಗಳು ಯಾವುದೇ ಕಾಲದ ಜನಜೀವನಕ್ಕೆ ಆದರ್ಶಪ್ರಾಯ ಮತ್ತು ಅನುಕರಣೀಯ ವಿಚಾರಗಳಾಗಿವೆ ಎಂದು ಅಭಿಪ್ರಾಯಿಸಿದರು. ಸಂಸ್ಕಾರದಿಂದ ಕೂಡಿದ ರಾಷ್ಟ್ರ ನಿರ್ಮಾಣವೇ ನಮ್ಮ ಅಂತಿಮ ದ್ಯೇಯವಾಗಿರಬೇಕು ಭಾರತೀಯ ಸಂಸ್ಕೃತಿಯು ಎಂದಿಗೂ ಸಂಘರ್ಷಯುತವಾದುದಲ್ಲ ಬದಲಾಗಿ ಸಮನ್ವಯ, ಸಾಮರಸ್ಯದ ನೆಲೆಯದ್ದು ಎಂಬುದು ದೀನ್‌ದಯಾಳ್‌ರ ಚಿಂತನೆಯ ಆಶಯವಾಗಿತ್ತು. ಮೌಲ್ಯಯುತ ಚಿಂತನೆಗಳು ಎಂದಿಗೂ ಶಾಶ್ವತವಾದದ್ದು ಎಂಬುದು ಪಂಡಿತ್‌ಜಿಯವರ ಚಿಂತನಾಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರಾಂಶುಪಾಲರಾದ ಪ್ರೊ.ಬಿ.ಆರ್. ಧನಂಜಯರವರು, ಇಂದಿನ ಯುವಜನಾಂಗ ಮತ್ತು ರಾಜಕೀಯ ವ್ಯಕ್ತಿಗಳು ದೀನ್ ದಯಾಳ್‌ರ ಚಿಂತನೆಗಳನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವುದರ ಮೂಲಕ ದೇಶಕ್ಕೆ ಸಮರ್ಥ ನಾಯಕತ್ವ ಮತ್ತು ಆದರ್ಶಯುತ ಮೌಲ್ಯವನ್ನು ಬೆಳೆಸುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಪ್ರಾಧ್ಯಾಪಕ ಡಾ. ಅಶ್ವಥ್‌ನಾರಾಯಣ್ ರವರು ದೀನ್ ದಯಾಳ್ ರವರ ವ್ಯಕ್ತಿತ್ವ, ಚಿಂತನೆಗಳನ್ನು ವಿಶ್ಲೇಷಿಸಿದರು. ಡಾ. ರೇಷ್ಮ ಎಲ್ಲರನ್ನು ಸ್ವಾಗತಿಸಿದರು. ಪ್ರೊ.ಜಾಹ್ನವಿ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ನಾಗರಾಜನಾಯ್ಕ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ನೆಹರೂ ಯುವಕೇಂದ್ರದ ಅಧಿಕಾರಿ ರಮೇಶ್, ಕಾಲೇಜಿನ ಕಛೇರಿ ವ್ಯವಸ್ಥಾಪಕರಾದ ಮಂಜುನಾಥ್.ಪಿ, ಯುವರೆಡ್ ಕ್ರಾಸ್ ಘಟಕದ ಅಧಿಕಾರಿ ಪ್ರೊ. ರವಿ.ಆರ್, ರೋವರ್ಸ್ & ರೇಂಜರ್ಸ್ ಘಟಕದ ಅಧಿಕಾರಿಗಳಾದ ಡಾ.ಬಸವಣ್ಯಪ್ಪ.ಎಂ, ಡಾ.ರಾಜಶ್ರೀ ಮತ್ತು ಅಧ್ಯಾಪಕ ವರ್ಗ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post