ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ನಿಷ್ಠಾವಂತ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿ ನೀಟ್ ಪರೀಕ್ಷಾ ವಿವಾದದ ಆರೋಪ ಇವರ ಮೇಲೆ ಬಂದು ರಾಜೀನಾಮೆ ಕೊಡಬೇಕಾಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಇಂದು ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂತಹ ಪ್ರಾಮಾಣಿಕ ವ್ಯಕ್ತಿಯ ಸೇವೆ ದೇಶಕ್ಕೆ ಅಗತ್ಯ. ಅವರಿಗೆ ಈ ರೀತಿಯ ಶಿಕ್ಷೆ ಅಗತ್ಯವಿತ್ತೇ?” ಎಂದು ಪ್ರಶ್ನಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಹಲವು ಸುಧಾರಣೆಗಳನ್ನು ತಂದಿದ್ದು, ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ಅವಧಿಯಲ್ಲಿ ಅವರು ರಾಜ್ಯದ ಉಸ್ತುವಾರಿಯಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಪಕ್ಷದ ಸಂಘಟನೆಗೆ ಬಲ ತುಂಬಿದ್ದರು ಎಂದು ನೆನಪಿಸಿದರು. ರಾಜೀನಾಮೆ ನೀಡಿದರೂ ಅವರು ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀಟ್ ಚಳುವಳಿ ಕುರಿತು ಆಕ್ರೋಶ
ಜಂತರ್-ಮಂತರ್‌ನಲ್ಲಿ ನಡೆದ ನೀಟ್ ಚಳುವಳಿ ವಿದ್ಯಾರ್ಥಿಗಳ ಪರವಾಗಿರಲಿಲ್ಲ, ಅದು ಕೇವಲ ಧಂಗೆಯಾಗಿತ್ತು ಎಂದು ಈಶ್ವರಪ್ಪ ಆರೋಪಿಸಿದರು. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ದೇಶ-ವಿದೇಶಗಳಿಂದ ಜನರು ಭಾಗಿಯಾಗಿದ್ದು, ಹಣದ ಪ್ರವಾಹವೂ ಇದ್ದಿತ್ತು ಎಂದು ಅವರು ಹೇಳಿದರು. ಕಾಂಗ್ರೆಸ್ ವಿರೋಧ ಪಕ್ಷವಾಗಿ ಚಳುವಳಿಗೆ ಬೆಂಬಲ ನೀಡಿದ್ದು ತಪ್ಪಲ್ಲ, ಆದರೆ ಚಳುವಳಿಗಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.
“ಭಾರತವು ಸಂವಿಧಾನಕ್ಕೆ ಬೆಲೆಕೊಡುವ ಧರ್ಮಭೂಮಿ. ದೇಶದ್ರೋಹಿಗಳು ಏನೇ ಪ್ರಯತ್ನ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ವರದಿ ಬಂದ ನಂತರ ವಾಸ್ತವಾಂಶ ಹೊರಬರುತ್ತದೆ,” ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಹೇಳಿಕೆ ವಿಶ್ವಾಸಾರ್ಹವಲ್ಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, “ಈ ರೀತಿಯ ಹೇಳಿಕೆಗಳನ್ನು ಅವರು ಹಲವು ಬಾರಿ ನೀಡಿದ್ದಾರೆ. ಹಿಂದೆ ಅವರ ಮಗನೇ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದ. ಈಗಿನ ಹೇಳಿಕೆ ನಂಬಲು ಅರ್ಹವಲ್ಲ,” ಎಂದು ವಾಗ್ದಾಳಿ ನಡೆಸಿದರು.
ಬರ ಪರಿಸ್ಥಿತಿ ಕುರಿತು ಸರ್ಕಾರದ ವಿರುದ್ಧ ಟೀಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ರಾಜ್ಯದ ಎಂಪಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಸಭೆ ನಡೆಸಲಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾದ ನಷ್ಟದ ಬಗ್ಗೆ ಸಮಗ್ರ ಸರ್ವೇ ನಡೆಸದೇ ಸಭೆ ನಡೆಸುವುದು ಏಕೆ ಎಂದು ಪ್ರಶ್ನಿಸಿದರು.
“ರಾಜ್ಯದ ಅಧಿಕಾರಿಗಳು ಸರ್ವೇ ಬದಲು ಇತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಆರ್ಥಿಕ ಸಂಕಷ್ಟ ಬಂದರೂ ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕುವ ಪ್ರವೃತ್ತಿ ನಡೆಯುತ್ತಿದೆ,” ಎಂದು ಟೀಕಿಸಿದರು.
Also read>> KPSC ನೇಮಕಾತಿ ವಿವಾದ: 400 ಹುದ್ದೆಗಳ ಆಯ್ಕೆ ಪಟ್ಟಿಗೆ ಬ್ರೇಕ್
ಮಂತ್ರಿಮಂಡಲ ಕೊರತೆ, ಆಡಳಿತ ವೈಫಲ್ಯ
ರಾಜ್ಯದಲ್ಲಿ ಪೂರ್ಣ ಪ್ರಮಾಣದ ಮಂತ್ರಿಮಂಡಲ ಇಲ್ಲದಿರುವುದರಿಂದ ಜಿಲ್ಲೆಗಳಲ್ಲಿ ಉಸ್ತುವಾರಿಗಳ ಕೊರತೆ ಇದೆ. ಮುಖ್ಯಮಂತ್ರಿ ಕೇವಲ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡುತ್ತಿದ್ದಾರೆ. “ಬರದಂತಹ ಗಂಭೀರ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುವ ಬದಲು, ಅಧಿಕಾರಿಗಳಿಗೆ ಸೂಚನೆ ನೀಡುವುದೇ ಕೆಲಸವೇ?” ಎಂದು ವ್ಯಂಗ್ಯವಾಡಿದರು.
136 ಕಾಂಗ್ರೆಸ್ ಶಾಸಕರ ಬೆಂಬಲವಿರುವ ಸರ್ಕಾರವಾಗಿದ್ದರೂ ಇದು ಬೇಜವಾಬ್ದಾರಿ ಆಡಳಿತ ಎಂದು ಆರೋಪಿಸಿದ ಅವರು, ತ್ವರಿತವಾಗಿ ಸಂಪುಟ ವಿಸ್ತರಣೆ ಆಗದಿದ್ದರೆ ಮಳೆಗಾಲದ ಅಧಿವೇಶನವನ್ನು ಮತ್ತಷ್ಟು ಮುಂದೂಡುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








