ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರ ರೈತರ ಜಮೀನು, ಇತರೆ ಮಾಹಿತಿ ಒಂದೇ ಸೂರಿನಡಿ ಲಭ್ಯಗೊಳಿಸಿರುವ ಇ-ಗವರ್ನೆನ್ಸ್ ಪೋರ್ಟಲ್ ಆದ ಫ್ರೂಟ್ಸ್(ಫಾರ್ಮರ್ ರೆಜಿಸ್ಟ್ರೇಷನ್ & ಯುನಿಫೈಡ್ ಬೆನಿಫಿಷಿಯರಿ ಇನ್‍ಫಾರ್ಮೇಷನ್ ಸಿಸ್ಟಂ) ಗೆ ನೋಂದಾಯಿಸಿಕೊಂಡು ಇದರ ಮೂಲಕ ರೈತರಿಗೆ ಸಾಲ ಸೌಲಭ್ಯವನ್ನು ತ್ವರಿತವಾಗಿ ನೀಡುವಂತೆ ಎಲ್ಲ ಬ್ಯಾಂಕುಗಳು ಕ್ರಮ ವಹಿಸಬೇಕೆಂದು ಜಿಪಂ ಸಿಇಓ ಎಂ.ಎಲ್. ವೈಶಾಲಿ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲೆಯ ಬ್ಯಾಂಕರ್‍ಗಳಿಗೆ ಏರ್ಪಡಿಸಲಾಗಿದ್ದ ಡಿಸಿಸಿ-ಡಿಎಲ್‍ಆರ್‍ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಜಿಲ್ಲೆಯ ಬ್ಯಾಂಕುಗಳ ಮೂರು ತಿಂಗಳ (ಸೆಪ್ಟೆಂಬರ್ ಅಂತ್ಯಕ್ಕೆ) ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಬ್ಯಾಂಕುಗಳು ರೈತರ ಸಾಲ ಸೌಲಭ್ಯಕ್ಕೆಂದೇ ಅಭಿವೃದ್ದಿಪಡಿಸಲಾಗಿರುವ ಫ್ರೂಟ್ಸ್ ಪೋರ್ಟಲ್‍ಗೆ ನೋಂದಣಿಯಾಗಿ, ಈ ನಿಟ್ಟಿನಲ್ಲಿ ತರಬೇತಿ ಹೊಂದಿ ಯಾವುದೇ ವಿಳಂಬವಿಲ್ಲದಂತೆ ರೈತರಿಗೆ ಸಾಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು.
ನಬಾರ್ಡ್‍ನ ಡಿಡಿಎಂ ಬಿ.ರವಿ ಮಾತನಾಡಿ, ಬ್ಯಾಂಕರ್‍ಗಳು ಸೇರಿದಂತೆ ಫ್ರೂಟ್ಸ್ ಬಗ್ಗೆ ಅರಿವಿನ ಕೊರತೆ ಇದೆ. ಆದ್ದರಿಂದ ಡಿ.28 ರಂದು ನಬಾರ್ಡ್ ವತಿಯಿಂದ ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಫ್ರೂಟ್ಸ್ ಯೋಜನೆ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.
ಸಿಇಓ ರವರು ಪ್ರಗತಿ ಪರಿಶೀಲನೆ ವೇಳೆ ಮಾತನಾಡಿ, ಸೆಪ್ಟೆಂಬರ್ ಮಾಹೆ ಅಂತ್ಯದವರೆಗೆ ಜಿಲ್ಲೆಯಲ್ಲಿ ರೂ.18618 ಕೋಟಿ ಠೇವಣಿ ಇದೆ. ಮಾರ್ಚ್ ಅಂತ್ಯದ ವೇಳೆಗೆ ರೂ.16612 ಕೋಟಿ ಠೇವಣಿ ಇದ್ದು, ಶೇ.16.75 ಪ್ರಗತಿ ಸಾಧಿಸಲಾಗಿದೆ. ಕೆನರಾಬ್ಯಾಂಕ್ ರೂ.544560 ಲಕ್ಷ ಠೇವಣಿಯೊಂದಿಗೆ ಮೊದಲನೇ ಸ್ಥಾನದಲ್ಲಿ, ಎಸ್‍ಬಿಐ ರೂ.392735 ಲಕ್ಷ ಠೇವಣಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.
352714 ಲಕ್ಷ ರೂ. ಸಾಲ-ಸೌಲಭ್ಯ ವಿತರಣೆಯೊಂದಿಗೆ ಮೊದಲನೇ ಸ್ಥಾನದಲ್ಲಿ, ಎಸ್‍ಬಿಐ ಎರಡನೇ ಮತ್ತು ಎಸ್‍ಡಿಸಿಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿವೆ. ಹಾಗೂ ಸಿಡಿ ರೇಷಿಯೋ ಕಡಿಮೆ ಇರುವ ಬ್ಯಾಂಕ್‍ಗಳು ತಮ್ಮ ಸಿಡಿ ಅನುಪಾತವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಮಾರುಕಟ್ಟೆ ಪಾಲುದಾರಿಕೆಯಲ್ಲಿ 81 ಬ್ರಾಂಚ್ ಹೊಂದಿರುವ ಕೆನರಾ ಬ್ಯಾಂಕ್ ರೂ.544560.61 ಠೇವಣಿಯೊಂದಿಗೆ ಶೇ.28.8 ವ್ಯವಹಾರ ಹೊಂದಿದ್ದರೆ, ಎಸ್‍ಬಿಐ ಶೇ18.1 ಹೊಂದುವ ಮೂಲಕ ಮೊದಲೆರಡು ಸ್ಥಾನದಲ್ಲಿವೆ. ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ ಕೃಷಿ ಸಾಲಸೌಲಭ್ಯ ನೀಡುವಲ್ಲಿ ಜಿಲ್ಲೆ ಶೇ.26.91 ಪ್ರಗತಿ ಸಾಧಿಸಿದ್ದು ಬ್ಯಾಂಕ್ ಆಫ್ ಬರೋಡ ಈ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಸಾಲ ಸೌಲಭ್ಯ ನೀಡಿದ್ದರೆ, ಎಸ್‍ಬಿಐ ಅತಿ ಕಡಿಮೆ ನೀಡಿದೆ ಎಂದು ವಿವರಣೆ ನೀಡಿದರು.
ಸಾಲಸೌಲಭ್ಯ ವಿತರಣೆಯಲ್ಲಿ ಜಿಲ್ಲೆ ಶೇ.75 ಪ್ರಗತಿ ಸಾಧಿಸಿದ್ದರೆ ಎಂಎಸ್‍ಎಂಇ ಸಾಲ ವಿತರಣೆಯಲ್ಲಿ ಶೇ.69 ಸಾಧನೆ ಮಾಡಿದೆ. ಶಿಕ್ಷಣ ಸಾಲ ವಿತರಣೆಯಲ್ಲಿ ಎಲ್ಲ ಬ್ಯಾಂಕುಗಳ ಪ್ರಗತಿ ಕುಂಠಿತವಾಗಿದ್ದು, ಬ್ಯಾಂಕುಗಳು ಕೃಷಿ, ಶಿಕ್ಷಣ ಮತ್ತು ಎಂಎಸ್‍ಎಂಇ ಬಾಕಿ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದರು ಎಂದರು.
ಬ್ಯಾಂಕುಗಳು ರೈತರ ಸಾಲ ಮತ್ತು ಎಂಎಸ್‍ಎಂಇ ಸಾಲ ಸೌಲಭ್ಯ ನೀಡುವಲ್ಲಿ ಯಾವುದೇ ರೀತಿಯ ತಾಂತ್ರಿಕ ಹಾಗೂ ಇತರೆ ಸಮಸ್ಯೆಗಳಿದ್ದರೆ ಅವುಗಳನ್ನು ನಿವಾರಿಸಿಕೊಂಡು ನಿಗದಿತ ಪ್ರಗತಿ ಸಾಧಿಸಬೇಕು ಎಂದ ಅವರು ನಿಗದಿತ ಪ್ರಗತಿ ಸಾಧಿಸದೇ ಇರುವ ಬ್ಯಾಂಕ್‍ಗಳು ಕಾರಣ ಸಮೇತ ವರದಿ ನೀಡಬೇಕು. ಹಾಗೂ ಬ್ಯಾಂಕುಗಳು ತಮ್ಮ ಬಳಿ ಬಾಕಿ ಇರುವ ಕೃಷಿ, ಎಂಎಸ್‍ಎಂಇ, ಶೈಕ್ಷಣಿಕ ಸಾಲ ಮತ್ತು ವಸತಿ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರಾಯೋಜಿತ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉದ್ಯೋಗಿನಿ ಯೋಜನೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ದಿ ನಿಗಮಗಳಡಿ ಬರುವ ಸ್ವ ಉದ್ಯೋಗ ಯೋಜನೆಗಳ ಕುರಿತು ಪ್ರಗತಿ ಪರಿಶೀಲಿಸಿ, ನಿಗಮಗಳ ಅಧಿಕಾರಿಗಳು ಯೋಜನೆಗಳ ಅನುಷ್ಟಾನಕ್ಕಾಗಿ ಅನುಸರಣೆ ಮಾಡಬೇಕು ಹಾಗೂ ಬ್ಯಾಂಕುಗಳು ಸಹಕರಿಸುವಂತೆ ತಿಳಿಸಿದರು.
ಪಿಎಂ ಸ್ವನಿಧಿ-ಆತ್ಮನಿರ್ಭರ ನಿಧಿ ಯೋಜನೆಯಡಿ ಬಂದ ಅರ್ಜಿಗಳನ್ನು ಮುಂದಿನ ಸಭೆಯೊಳಗೆ ವಿಲೇವಾರಿ ಮಾಡುವಂತೆ ತಿಳಿಸಿದ ಅವರು, ವಸತಿ ಯೋಜನೆಗಳಿಗೆ ಸಾಲ-ಸಹಾಯಧನ (ಸಿಎಲ್‍ಸಿಸಿ) ಯೋಜನೆಯಡಿ ಗ್ರಾಮೀಣ ಮತ್ತು ನಗರ ಬ್ಯಾಂಕುಗಳಲ್ಲಿ ಮಂಜೂರಾದ ಅರ್ಜಿಗಳು, ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮಿಣ ಕೈಗಾರಿಕ ಮಂಡಳಿಗೆ ನೀಡಲಾದ ಗುರಿಗಳ ಕುರಿತು ಪ್ರಗತಿ ಪರಿಶೀಲಿಸಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಜನಧನ್ ಯೋಜನೆ, ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷನಾ ಬಿಮಾ ಯೋಜನೆ, ಅಟಲ್ ಪೆನ್ಶನ್, ಸ್ಟ್ಯಾಂಡ್ ಅಪ್ ಇಂಡಿಯಾ, ಫೈನ್ಯಾನ್ಶಿಯಲ್ ಲಿಟರಿಸಿ ಸೆಂಟರ್, ಹೊಳಲೂರಿನ ಆರ್‍ಎಸ್‍ಇಟಿಐ ಸ್ವ ಉದ್ಯೋಗ ಕಾರ್ಯಕ್ರಮ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಸೂಕ್ತ ಸಲಹೆ-ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದರು.
ಗೈರು ಹಾಜರಾದ ಬ್ಯಾಂಕರ್‍ಗಳಿಗೆ ನೋಟಿಸ್ : ಇಂದಿನ ಡಿಸಿಸಿ-ಡಿಎಲ್‍ಆರ್‍ಸಿ ಸಭೆಗೆ ಗೈರು ಹಾಜರಾದ ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮ್ಯಾನೇಜರ್‍ಗೆ ಜಿ.ಪಂ. ಸಿಇಓ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಹೇಮಗಿರೀಶ್ ಫ್ರೂಟ್ಸ್ ಪೋರ್ಟಲ್ ಬಗ್ಗೆ ಮಾಹಿತಿ ನೀಡಿದರು. ನಬಾರ್ಡ್ ಬ್ಯಾಂಕ್‍ನ ಡಿಡಿಎಂ ಎಂ.ರವಿ, ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಸಂದೀಪ್ ರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಹಾಗೂ ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post