ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಮ ಮನೋಹರ ಲೋಹಿಯ ನಗರದಲ್ಲಿರುವ ಕನಕ ವಿದ್ಯಾಸಂಸ್ಥೆಯ ಶಿಕ್ಷಕರಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ “ಪುಡ್ ಕಿಟ್” ವಿತರಿಸಲಾಯಿತು.
ಇಂದು ಹಮ್ಮಿಕೊಳ್ಳಲಾಗಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ “ಪುಡ್ ಕಿಟ್” ವಿತರಣೆಯ ನೇತೃತ್ವ ವಹಿಸಿ ಮಾತನಾಡಿದ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನ ಎನ್.ಎಮ್ ಸಿಗ್ಬತ್ ಉಲ್ಲಾರವರು, ಕೋವಿಡ್-19 ನಂತರ ಪರಿಸ್ಥಿತಿಯಲ್ಲಿ ಶಿಕ್ಷಕರ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ಲಾಕ್‌ಡೌನ್-ಸೀಲ್‌ಡೌನ್ ನಿಂದಾಗಿ ಈ ವರ್ಗದ ಶಿಕ್ಷಕರನ್ನು ಸರಕಾರವಾಗಲಿ, ಸ್ಥಳೀಯ ಮಹಾನಗರ ಪಾಲಿಕೆಯಾಗಲಿ ಯಾವುದೇ ಪ್ಯಾಕೇಜ್ ಘೋಷಿಸದೇ ವಂಚಿತರನ್ನಾಗಿಸಿದೆ ಎಂದು ಅವರು ಹೇಳಿದರು.
ಕಡಿಮೆ ಸಂಬಳ ತೆಗೆದುಕೊಳ್ಳುವ ಬಹುತೇಕ ಅನುದಾನ ರಹಿತ ಶಾಲಾ ಶಿಕ್ಷಕರು ಸ್ವಾಭಿಮಾನಕ್ಕೆ ಒಳಗಾಗಿ ಎಲ್ಲೂ ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ದನಿಯಾಗುವುದಕ್ಕೆ ಹಿಂಜರಿಯುತ್ತಾರೆ, ಅವರ ನೋವುಗಳಿಗೂ ಆಡಳಿತ ವ್ಯವಸ್ಥೆಗಳು ಸ್ಪಂದಿಸಬೇಕಿದೆ. ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ ಶಿಕ್ಷಕರಿಗೆ ಕೊಡುತ್ತಿರುವ “ಪುಡ್ ಕಿಟ್” ಸಹೋದರತ್ವ ಭಾವದಿಂದ ನೀಡಲಾಗುತ್ತಿದೆ ಅವರಿಗೆ ಕೊಡುತ್ತಿರುವುದು ಪುಣ್ಯದ ಕೆಲಸವೆಂದು ಭಾವಿಸುತ್ತೇವೆ ಎಂದು ಎನ್.ಎಮ್ ಸಿಗ್ಬತ್ ಉಲ್ಲಾರವರು ತಿಳಿಸಿದರು.
ಪತ್ರಕರ್ತ ಗಾರಾ.ಶ್ರೀನಿವಾಸ್ ಮಾತನಾಡಿ, 2020ರ ಮೊದಲ ಕೋವಿಡ್ ಅಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ರಾಜ್ಯದ 3ಲಕ್ಷ ಅನುದಾನರಹಿತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಘೋಷಣೆ ಭರವಸೆಯಾಗಿಯೇ ಉಳಿಯಿತು, ಈ ಬಾರಿಯ ಎರಡನೆ ಅಲೆಯಲ್ಲಿ ಮತ್ತೊಮ್ಮೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ಸ್ವಾಗತಾರ್ಹವಾದರೂ ಶಿಕ್ಷಣ ಸಚಿವರ ಈ ಹೇಳಿಕೆ ಹುಸಿಯಾಗದೇ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಘೋಷಿತ ಪ್ಯಾಕೇಜ್ ಶೀಘ್ರ ದೊರೆಯುವಂತೆ ಆಗಲಿ. ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಸತ್ಪ್ರಜೆ ಮಾಡುವ ಮಹತ್ತರವಾದ ಹೊಣೆಗಾರಿಕೆಯನ್ನು ಶಿಕ್ಷಕರು ಹೊತ್ತಿರುತ್ತಾರೆ, ಕಡಿಮೆ ಸಂಬಳವಿದ್ದರೂ ಅದರಲ್ಲೇ ಬದುಕನ್ನು ಕಂಡು ಕೊಂಡಿರುತ್ತಾರೆ, ಇದನ್ನು ಸರಕಾರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.
“ಪುಡ್ ಕಿಟ್” ವಿತರಣೆಯಲ್ಲಿ ಕನಕ ವಿದ್ಯಾಸಂಸ್ಥೆಯ ಮುಖ್ಯೋಪಧ್ಯಾಯರಾದ ಇಂದ್ರಾಕ್ಷಿ, “ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನ ಕಾರ್ಯದರ್ಶಿ ಹೆಚ್.ಎಸ್ ವಿಷ್ಣುಪ್ರಸಾದ್, ಇಮ್ರಾನ್ ಮಲ್ನಾಡ್, ಅದೀಬ್, ಸಲೀಂ, ಸಾಧೀಕ್ ಹಾಗೂ ಕನಕ ವಿದ್ಯಾ ಸಂಸ್ಥೆಯ ಶಾಲಾ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post