ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭತ್ತದ ಗದ್ದೆಯಲ್ಲಿ ಕಾಡುಹಂದಿಗಳ ಹಾವಳಿ ತಡೆಯಲು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ (Electric Fence) ಸ್ಪರ್ಶಿಸಿ ಸುಮಾರು 10ರಿಂದ 12 ವರ್ಷ ವಯಸ್ಸಿನ ಗಂಡು (Wild Elephant) ಕಾಡಾನೆಯೊಂದು ಮೃತಪಟ್ಟಿರುವ ದಾರುಣ ಘಟನೆ (Shivamogga) ಶಿವಮೊಗ್ಗ ಅರಣ್ಯ ವಿಭಾಗದ ಶಂಕರ ವಲಯ ವ್ಯಾಪ್ತಿಯ ಇಚವಾಡಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇಚವಾಡಿ ಗ್ರಾಮದ ಸರ್ವೆ ನಂಬರ್ 16ರ ವ್ಯಾಪ್ತಿಯ ಭತ್ತದ ಗದ್ದೆಯ ಬದುವಿನಲ್ಲಿ ಕಾಡಾನೆ ಮೃತಪಟ್ಟಿರುವುದು ಬೆಳಗಿನ ಜಾವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತಪಟ್ಟ ಕಾಡಾನೆಯ ಸುತ್ತಮುತ್ತ ತಂತಿ ಬೇಲಿ ಅಳವಡಿಸಿರುವುದು ಹಾಗೂ ಸಮೀಪದಲ್ಲೇ ವಿದ್ಯುತ್ ಕಂಬವಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಸ್ಥಳದಲ್ಲಿ ನಡೆಸಿದ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಭತ್ತದ ಗದ್ದೆಯ ಬದುವಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದ ತಂತಿಯನ್ನು ಆನೆ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿರುವುದು ತಿಳಿದುಬಂದಿದೆ. ಆಹಾರ ಅರಸಿ ಕಾಡಿನಿಂದ ಗದ್ದೆಯತ್ತ ಬಂದಿದ್ದ ಕಾಡಾನೆ ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
Shivamogga : ಕಾಡುಹಂದಿಗಳ ಹಾವಳಿ ತಡೆಯಲು ವಿದ್ಯುತ್ ತಂತಿ ಅಳವಡಿಕೆ
ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಅರಣ್ಯಾಧಿಕಾರಿಗಳು, ಭತ್ತದ ಗದ್ದೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದ ಮೇಲೆ ಅಲಿಮಿಯಾ ಬಿನ್ ಫೀರ್ ಸಮೀಯಾ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಭತ್ತದ ಬೆಳೆ ತೆನೆ ಬಿಡುವ ಹಂತದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಗದ್ದೆಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ಬೆಳೆಯನ್ನು ರಕ್ಷಿಸುವ ಉದ್ದೇಶದಿಂದ ಗದ್ದೆಯ ಬದುವಿನಲ್ಲಿ ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Also Read>> ಭದ್ರಾವತಿಯ ಪ್ರತಿಭೆಗೆ ದೇಶದಲ್ಲೇ ಮೊದಲ ಸ್ಥಾನ: ಎನ್‌ಡಿಎ ಪರೀಕ್ಷೆಯಲ್ಲಿ ಶ್ರೇಯಾ ಗೌಡ ಅಮೋಘ ಸಾಧನೆ!
ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸುವ ನೆಪದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ವನ್ಯಜೀವಿಗಳ ಜೀವಕ್ಕೆ ಅಪಾಯ ತಂದೊಡ್ಡುವುದರ ಜೊತೆಗೆ ಗಂಭೀರ ಕಾನೂನು ಉಲ್ಲಂಘನೆಯೂ ಆಗಿದೆ. ಇಂತಹ ಅಕ್ರಮ ವಿದ್ಯುತ್ ಬೇಲಿಗಳು ಕಾಡುಪ್ರಾಣಿಗಳಷ್ಟೇ ಅಲ್ಲದೆ, ಮನುಷ್ಯರ ಜೀವಕ್ಕೂ ಅಪಾಯಕಾರಿಯಾಗಿವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಅಕ್ರಮ ವಿದ್ಯುತ್ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದರ ಜೊತೆಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಿದ್ಯುತ್ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸುವಂತೆ ಮೆಸ್ಕಾಂ ಇಲಾಖೆಗೆ ಅರಣ್ಯ ಇಲಾಖೆ ವತಿಯಿಂದ ದೂರು ನೀಡಲಾಗಿದೆ.
ಮರಣೋತ್ತರ ಪರೀಕ್ಷೆಗೆ ಅರಣ್ಯ ಇಲಾಖೆ ಕ್ರಮ
ಮೃತಪಟ್ಟ ಕಾಡಾನೆಯ ಮರಣದ ನಿಖರ ಕಾರಣ ಹಾಗೂ ಇತರ ವೈದ್ಯಕೀಯ ಅಂಶಗಳನ್ನು ದೃಢಪಡಿಸುವ ಉದ್ದೇಶದಿಂದ ನಿಯಮಿತ ಕಾರ್ಯವಿಧಾನ (SOP)ದ ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಈ ಕುರಿತು ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಹಾನಿಯಾಗುವುದನ್ನು ತಡೆಯಲು ಕಾನೂನುಬಾಹಿರವಾಗಿ ವಿದ್ಯುತ್ ತಂತಿ ಅಳವಡಿಸುವ ಘಟನೆಗಳು ವನ್ಯಜೀವಿಗಳ ಉಳಿವಿಗೆ ದೊಡ್ಡ ಸವಾಲಾಗಿವೆ. ಇಚವಾಡಿಯಲ್ಲಿ ಸಂಭವಿಸಿರುವ ಈ ಘಟನೆ ಮತ್ತೊಮ್ಮೆ ಅಕ್ರಮ ವಿದ್ಯುತ್ ಬೇಲಿಗಳ ಅಪಾಯವನ್ನು ಎಚ್ಚರಿಸಿದ್ದು, ಇಂತಹ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







