ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಪಕ್ಷ ಮಾ.6ರಂದು ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಅಂಗವಾಗಿ ಶಿವಮೊಗ್ಗದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ 6 ಗುರುವಾರ ಬೆಳಿಗ್ಗೆ 11 ಗಂಟೆಗೆ ನೆಹರು ರಸ್ತೆಯಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಗ್ಯಾರೆಂಟಿಗಳ ಭರವಸೆ #Guarantee Promises ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರೆಂಟಿಗಳಿಗೆ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಸ್ಥಗಿತವಾಗಿದೆ. ಅನ್ನ ಭಾಗ್ಯಕ್ಕೆ ನೀಡುವ ಅಕ್ಕಿಯೂ ಇಲ್ಲ. ಹಣವೂ ಇಲ್ಲವಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗದ 32 ಸಾವಿರ ಕೋಟಿ ಹಣ ಇನ್ನೂ ಬಾಕಿ ಇದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕಡಿತವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ. ರೈತರ ಆತ್ಮಹತ್ಯೆ ಅವ್ಯಾಹತವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಜಿ.ಪಂ., ತಾಪಂ, ಪಾಲಿಕೆ, ಪುರಸಭೆ ಇತ್ಯಾದಿ ಸ್ಥಳೀಯ ಆಡಳಿತಗಳ ಯಾವುದೇ ಚುನಾವಣೆಯನ್ನೂ ನಡೆಸುತ್ತಿಲ್ಲ. ರಾಜ್ಯದಲ್ಲಿ 2ಲಕ್ಷ 75 ಸಾವಿರ ಹುದ್ದೆ ಖಾಲಿ ಇದ್ದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಭರ್ತಿಮಾಡಲು ಸಾಧ್ಯವಾಗುತ್ತಿಲ್ಲ. ಭರ್ತಿ ಮಾಡಿದರೂ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲ. ಎರಡು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಪ್ರಗತಿ ಇಲ್ಲ ಎಂದ ಅವರು ಹಳ್ಳಿ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಬಡವರು ಮದ್ಯ ಕುಡಿದೇ ಸಾಯಲಿ ಎಂಬುದು ಸರ್ಕಾರದ ಚಿಂತನೆಯೇ ಎಂದು ಪ್ರಶ್ನಿಸಿದರು.
ಈ ಬಾರಿ ಬೇಸಿಗೆಯಲ್ಲಿ ಕುಡಿಯಲೂ ಸಹ ನೀರು ಸಿಗದ ಪರಿಸ್ಥಿತಿ ಇದೆ. ಮೊದಲು ಸರ್ಕಾರದ ನಟ್ಟು ಬೋಲ್ಟು ಸರಿ ಮಾಡಲಿ. ಅನುಭವಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಡವರ ಬಗ್ಗೆ ಗಮನಿಸಲಿ ಎಂದು ಸಲಹೆ ನೀಡಿದರು. ಜಿಲ್ಲೆಯ ಎಲ್ಲ ಜೆಡಿಎಸ್ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
Also read: ಮಾರ್ಷಲ್ ಆರ್ಟ್ಸ್ | ಪ್ರಣತಿಗೆ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆ
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ ಸ್ಥಳೀಯ ವಿಚಾರಗಳು ಸಾಕಷ್ಟಿದ್ದು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವಧಿಯಲ್ಲಿ ಗೋಪಿಶೆಟ್ಟಿಕೊಪ್ಪದಲ್ಲಿ 4,700 ಆಶ್ರಯ ಮನೆಗಳು ಹಂಚಲು ಸಿದ್ಧವಾಗಿದ್ದವು. ಈಗ ಆಶ್ರಯ ಮನೆಗಳ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಮಾಹಿತಿ ಇದೆ. ಹಾಗೂ ಮನೆ ಸಂಖ್ಯೆ ಕೊಡಿಸಲು ಫಲಾನುಭವಿಗಳಿಂದ 25-50 ಸಾವಿರ ರೂ.ವರೆಗೆ ಕಿಡಿಗೇಡಿಗಳು ಪಡೆದಿರುವ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಗೊಂದಲವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನಿರಂತರ ಕುಡಿಯುವ ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹಳೆಯ ಕುಡಿಯುವ ನೀರಿನ ಸರಬರಾಜು ಪದ್ಧತಿಯೇ ಸರಿಯಾಗಿತ್ತು. ಅದನ್ನೇ ಮುಂದುವರಿಸಬೇಕು. ಇ-ಸ್ವತ್ತು ಪಡೆಯಲು ಸಾರ್ವಜನಿಕರು ಪಾಲಿಕೆಗೆ ಅಲೆದಾಡುವಂತಾಗಿದೆ. ಹಳೆಯ ಡಾಟಾಬೇಸ್‍ನಲ್ಲಿ ಎಲ್ಲ ಮಾಹಿತಿಗಳಿವೆ. ಇದನ್ನು ಬಳಸಿಕೊಂಡು ಇ-ಸ್ವತ್ತನ್ನು ಸರಳೀಕರಣಗೊಳಿಸಬೇಕು. ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆಗಳ ಮಾಹಿತಿಗಳೂ ಗ್ರಾಮ ಪಂಚಾಯತಿಯಲ್ಲಿರುವುದರಿಂದ ಅವುಗಳನ್ನೇ ಪಾಲಿಕೆಯಲ್ಲಿಟ್ಟುಕೊಂಡು ಮುಂದೆ ವಾರ್ಡ್‍ಗಳ ವಿಸ್ತರಣೆಗೆ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ತ್ಯಾಗರಾಜ್, ಮಧು, ಗೀತಾ ಸತೀಶ್, ಸಂಗಯ್ಯ, ಗಂಧದಮನೆ ನರಸಿಂಹ, ದಾದಾಪೀರ್, ಅಬ್ದುಲ್ ವಾಜಿದ್, ಶ್ಯಾಮ್, ರಾಕೇಶ್ ಡಿಸೋಜಾ, ಮಾಧವಮೂರ್ತಿ, ವಿನಯ್, ನಿಖಿಲ್, ಬಾಬು, ಚಟ್ನಳ್ಳಿ ಸುರೇಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post