ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ಅತಿಕ್ರಮಣ ಕಾರ್ಯಾಚರಣೆ ನಿನ್ನೆಯಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಸಾರ್ವಜನಿಕರು ನೀಡಿದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೀಡಿದ ಆದೇಶದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಒತ್ತುವರಿಯಾಗಿರುವ ನಿವೇಶನಗಳ ವಿವರಗಳನ್ನು ನೀಡಿದಂತೆ ಮಹಾನಗರ ಪಾಲಿಕೆಯಿಂದ ನಿನ್ನೆಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ತಿಳಿಸಿದ್ದಾರೆ.
ಬೊಮ್ಮನಕಟ್ಟೆಯ ಎ ಬ್ಲಾಕ್‌ನಲ್ಲಿ ನಿರ್ಮಾಣವಾಗಿದ್ದ 20*30ಅಡಿ ಅಳತೆಯ ತಗಡಿನ ಮೇಲ್ಛಾವಣಿ ಹಾಗೂ ಎಫ್ ಬ್ಲಾಕ್‌ನ ಆಟದ ಮೈದಾನದಲ್ಲಿ ಅತಿಕ್ರಮವಾಗಿರುವ 1 ಶೆಡ್, 5 ತಳಪಾಯ ಮತ್ತು 2 ತಂತಿ ಬೇರಿ ಹಾಕಿದ ಸ್ಥಳಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನಗಳ ಪರಭಾರೆ ವ್ಯವಹಾರದಲ್ಲಿ ಅಕ್ರಮಗಳು ಮಹಾನಗರಪಾಲಿಕೆಗೆ ಹಾಗೂ ಜಿಲ್ಲಾಡಳಿತಕ್ಕೆ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸದರಿ ಪ್ರದೇಶದ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿಸುವಾಗ ಸ್ವತ್ತಿನ ದಾಖಲೆಗಳನ್ನು ಖಾತ್ರಿಪಡಿಸಿಕೊಂಡು ವ್ಯವಹರಿಸುವಂತೆ ಸೂಚಿಸಿರುವ ಅವರು, ಬಡಾವಣೆಗಳಲ್ಲಿ ಈಗಾಗಲೇ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗಗಳನ್ನು ಅತಿಕ್ರಮಣ ಮಾಡಿದಲ್ಲಿ ಮಹಾನಗರಪಾಲಿಕೆಯಿಂದ ಯಾವುದೇ ಮುನ್ಸೂಚನೆ ನೀಡದೆ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದಲ್ಲದೆ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಇಂತಹ ಸ್ವತ್ತುಗಳನ್ನು ಕ್ರಯ-ವಿಕ್ರಯ ಕಾರ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post