ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಾಕೃತಿಕವಾಗಿ ಅತ್ಯಂತ ಸಂಪದ್ಭರಿತವಾಗಿರುವ ಕರ್ನಾಟಕದಲ್ಲಿ ಸಾಹಸ ಕ್ರೀಡೆಗಳಿಗೆ ಹೆಚ್ಚಿನ ಅವಕಾಶಗಳಿವೆ. ಇವುಗಳನ್ನು ಸಮರ್ಥವಾಗಿ ಬಳಸಿಕೊಂಡು ಯುವ ಸಮೂಹದಲ್ಲಿ ಸಾಹಸ, ಚಾರಣಗಳ ಬಗ್ಗೆ ಅಭಿರುಚಿ ಬೆಳಸಬೇಕಾಗಿದೆ ಎಂದು ಯುವಜನ ಚಾರಣ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಎಸ್. ವೆಂಕಟನಾರಾಯಣ್ ಕರೆ ನೀಡಿದರು.
ಶಿವಮೊಗ್ಗ ಮತ್ತು ತರುಣೋದಯ ಯೂತ್ ಹಾಸ್ಟೆಲ್ಸ್‌ನ ಸಂಯುಕ್ತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತರ ಭಾರತದ ಯುವ ಸಮೂಹದಲ್ಲಿ ಸಾಹಸ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಅವಕಾಶ ಎರಡೂ ಇದೆ. ಈ ಅಭಿರುಚಿಯನ್ನು ದಕ್ಷಿಣ ರಾಜ್ಯಗಳಿಗೂ ವಿಸ್ತರಿಸುವ ಅಗತ್ಯವಿದೆ ಎಂದರು.
ಯೂತ್ ಹಾಸ್ಟೆಲ್ಸ್ ಒಂದು ಕುಟುಂಬದಂತೆ, ಇಲ್ಲಿ ಯಾವುದೇ ರೀತಿಯಲ್ಲಿಯೂ ಬೇದ ಭಾವಗಳಿಲ್ಲ ಎಲ್ಲರೂ ಸರಿ ಸಮಾನರು ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಯುವಜನತೆಯಲ್ಲಿ ಚಾರಣ, ಪ್ರಕೃತಿ ಅಧ್ಯಯನ, ಸಾಹಸ, ಕ್ರೀಡಾ ಮನೋಭಾವ ಬೆಳಸುವುದು ಮುಖ್ಯಆಶಯ. ಇದರ ಜೊತೆಗೆ ಪ್ರಕûತಿ ವಿಕೋಪದಂತಹ ಸಂದರ್ಭದಲ್ಲಿ, ಹಾಗೂ ವಿಶೇಷವಾಗಿ ವರ್ತಮಾನದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್’ಗಳಿಗೆ ಸಹಾಯ ಹಸ್ತ, ರಕ್ತದಾನ ಶಿಬಿರ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದರು.
ನಮ್ಮ ಯೂತ್ ಹಾಸ್ಟೆಲ್ಸ್‌ನ ಆಜೀವ ಸದಸ್ಯತ್ವ ಪಡೆದ ಕಾರ್ಡಿಗೆ ವಿಶ್ವದಾದ್ಯಂತ ಮನ್ನಣೆ ಇದೆ. ದೇಶ ವಿದೇಶಗಳಲ್ಲಿ ತಾವು ಅತ್ಯಂತ ಕಡಿಮೆ ಖರ್ಚಿನಲ್ಲಿ ವಾಸ್ತವ್ಯ ಹೊಂದಬಹುದು ಹಾಗೂ ಚಾರಣ/ಪ್ರಾವಾಸ ಮಾಡಬಹುದು. ವಿದೇಶಿಯರು ಕೂಡಾ ನಮ್ಮ ಹಿಮಾಲಯದ ತಪ್ಪಲಿನಲ್ಲಿ ಚಾರಣ ಮಾಡಲು ಬಹಳಷ್ಟು ಉತ್ಸುಕರಾಗಿದ್ದಾರೆ ಎಂದರು.
ರಾಜ್ಯಘಟಕದ ಪುರುಶೋತ್ತಮ್ ಮಾತನಾಡಿ, ಉತ್ತಮ ಸಂಘಟನಾ ಶಕ್ತಿ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಶಿವಮೊಗ್ಗೆಯ ತರುಣೋದಯ ಘಟಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಸದಸ್ಯತ್ವ ನೋಂದಣಿಯಲ್ಲಿ ಈ ಘಟಕ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದರ ಕಾರ್ಯ ಅನುಕರಣೀಯ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಸನ್ನರವರು, ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಆನ್ ಲೈನ್ ಜಾನಪದ ನೃತ್ಯ ಸ್ವರ್ಧೆಯಲ್ಲಿ ದ್ವಿತಿಯ ಸ್ಥಾನ ಗಳಿಸಿದ ತರುಣೋದಯ ಘಟಕದ ನೃತ್ಯ ಪಟುಗಳಿಗೆ ಬಹುಮಾನದ ಫಲಕವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಯೂಥ್ ಹಾಸ್ಟೆಲ್‌ನ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಅ. ನಾ. ವಿಜಯೇಂದ್ರ ರಾವ್, ರಾಜ್ಯ ಉಪಧ್ಯಾಕ್ಷರಾದ ಜಿ. ವಿಜಯಕುಮಾರ್, ಕಾರ್ಯದರ್ಶಿ ರವಿಕುಮಾರ್, ಹಾಸ್ಟಲ್ ಡೆವಲಪ್ಮೆಂಟ್ ಸಮಿತಿ ಸದಸ್ಯ ದಿಲೀಪ್ ನಾಡಿಗ್, ತರುಣೋದಯ ಸಂಸ್ಥೆಯ ಚೇರ್ಮನ್ ವಾಗೇಶ್, ಮನು ಪವಾರ್, ಸುರೇಶ್ ಕುಮಾರ್, ಶೇಖರ್ ಗೌಳೇರ್, ಉಮೇಶ್, ಡಾ. ಕೌಸ್ತುಭ, ಡಾ.ಪ್ರಕೃತಿ, ಮಹ್ಮದ್‌ರಫಿ, ಮೋಹನ್, ಲಕ್ಷ್ಮೀ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post