ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ಕಾರದ ಮಾರ್ಗಸೂಚಿಯಂತೆ ಜ.1ರಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳು ಆರಂಭಗೊಳ್ಳುತ್ತಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಶಾಲೆಗಳ ಭೌತಿಕ ಸ್ಥಿತಿ-ಗತಿಗಳ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಿದ ಅವರು, ಕುಡಿಯುವ ನೀರು, ಶೌಚಾಲಯ, ಶಾಲಾ ಸ್ವಚ್ಛತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಶಾಲಾ ಆರಂಭಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕಟ್ಟಡ, ವಾಹನಗಳನ್ನು ಸ್ಯಾನಿಟೈಜ್ ಮಾಡಿಸುವಂತೆ ಅವರು ಸೂಚಿಸಿದರು.
ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಲಿಖಿತವಾಗಿ ಒಪ್ಪಿಗೆ ಪತ್ರವನ್ನು ತರುವಂತೆ ತಿಳಿಸಬೇಕು. ಜೊತೆಗೆ ತರಗತಿ ನಡೆಯುವ ಅವಧಿಯಲ್ಲಿ ಕುಡಿಯುವ ನೀರು, ಲಘು ಆಹಾರವನ್ನು ಮಕ್ಕಳು ತಮ್ಮೊಂದಿಗೆ ತರಲು ತಿಳಿಸಬೇಕು ಎಂದ ಅವರು, ಮಕ್ಕಳಿಗೆ ಅಗತ್ಯವೆನಿಸಿದಲ್ಲಿ ಶಾಲೆಯಲ್ಲಿ ಕುಡಿಯಲು ಬಿಸಿನೀರನ್ನು ಕಾಯಿಸಿ ಕೊಡಲು ಕ್ರಮವಹಿಸುವಂತೆ ಸೂಚಿಸಿದರು.
ಪ್ರತಿದಿನ ಬೆಳಗಿನ 3 ಅವಧಿಯಲ್ಲಿ ಎಸ್’ಎಸ್’ಎಲ್’ಸಿ ತರಗತಿಗಳು ನಿರಂತರವಾಗಿ ನಡೆಯಲಿವೆ. ಜೊತೆಗೆ 6 ಮತ್ತು 7ನೆಯ ತರಗತಿಯ ಮಕ್ಕಳು ಬೆಳಗಿನ ಹಾಗೂ 8 ಮತ್ತು 9ನೆಯ ತರಗತಿಯ ಮಕ್ಕಳು ಮಧ್ಯಾಹ್ನದ ಅವಧಿಯಲ್ಲಿ ದಿನಬಿಟ್ಟು ದಿನ ನಡೆಯುವ ಶಾಲೆಗೆ ಬರಲು ಸೂಚಿಸಬೇಕು. ಈ ನಡುವಿನ ಶಾಲಾ ಅವಧಿಯಲ್ಲಿ ಈಗಾಗಲೇ ನಿಗಧಿಪಡಿಸಿದ ಸಮಯದಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ನಿರ್ದೇಶನದಂತೆ ಯೋಗ ತರಗತಿಗಳನ್ನು ನಡೆಸುವಂತೆಯೂ ಸೂಚಿಸಿದ ಅವರು ಈ ಹಿಂದೆ ನಡೆಯುತ್ತಿದ್ದ ಆನ್‌ಲೈನ್ ತರಗತಿಗಳನ್ನು ನಡೆಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಇಲಾಖೆಯ ಸೂಚನೆಯಂತೆ ಈ ಹಿಂದೆ ನಡೆಯುತ್ತಿದ್ದ ಪರ್ಯಾಯ ಕಾರ್ಯಕ್ರಮಗಳು ಮುಂದುವರೆಯಲಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವಂತೆ ಸೂಚಿಸಿದರು.
ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರವು ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಹಾಗೂ ಪ್ರತಿಯೊಬ್ಬ ಶಿಕ್ಷಕರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವೈಯಕ್ತಿಕ ಗಮನಹರಿಸುವ ಮುಖಾಂತರ ಯಾವುದೇ ಗೊಂದಲ ಅವಘಡಗಳು ನಡೆಯದಂತೆ ಕ್ರಮಕೈಗೊಳ್ಳಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಕಾಲಕಾಲಕ್ಕೆ ಸಹಶಿಕ್ಷಕರ ಸಭೆ ಕರೆದು ವಿದ್ಯಾಗಮ ಕಾರ್ಯಕ್ರಮವು ವ್ಯವಸ್ಥಿತ ಅನುಷ್ಠಾನಗೊಳ್ಳುವಂತೆ ಗಮನಹರಿಸಬೇಕು. ಶಾಲೆಯ ಭೌತಿಕ ಪರಿಸ್ಥಿತಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಂಡಗಳ ರಚನೆ, ತರಗತಿ ನಿರ್ವಹಣೆಯನ್ನು ಕ್ರಮಬದ್ಧವಾಗಿ ನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಪ್ರತೀ ತಾಲ್ಲೂಕಿನಲ್ಲಿ ಸಿ.ಆರ್.ಪಿ, ಬಿ.ಆರ್.ಪಿ, ಬಿ.ಆರ್.ಸಿ. ಶಿಕ್ಷಣ ಸಂಯೋಜಕರುಗಳು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಸಿದ್ಧತೆಯ ಕುರಿತು ಪೂರ್ವಭಾವಿ ಪರಿಶೀಲನೆ ಮಾಡುವಂತೆ ಸೂಚಿಸಿದ ಅವರು, ಜಿಲ್ಲೆಯ ಕೆಲವು ಆಯ್ದ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿಯೂ ಅವರು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ. ರಮೇಶ್, ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post