ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಬ್ಬಗಳ ರಾಜ ಶ್ರಾವಣ ಮಾಸ ಈ ಬಾರಿ ಕೊರೋನಾ ಹಾವಳಿಯಿಂದ ಮಂಕಾಗಿದ್ದು, ಈ ಬಾರಿಯ ಗಣೇಶ ಚತುರ್ಥಿಗೂ ಸಹ ಇದೇ ಕಾರ್ಮೋಡ ಈಗಾಗಲೇ ಕವಿದಿದೆ.
ಪ್ರತಿವರ್ಷವೂ ಮಲೆನಾಡು ಅದರಲ್ಲೂ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಎಲ್ಲಿಲ್ಲದ ಸಂಭ್ರಮ. ತಿಂಗಳುಗಳ ಮೊದಲೇ ಕುಂಬಾರರು ಗಣಪತಿ ಮಾಡಲು ಆರಂಭಿಸುವುದು, ಆರ್ಡರ್ ತೆಗೆದುಕೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಭಾದ್ರಪದ ಶುಕ್ಲ ಚೌತಿಗೆ ಇನ್ನು 14 ದಿನ ಬಾಕಿಯಿದ್ದು, ಪ್ರತಿ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಹಬ್ಬ ಮೊದಲಿನಷ್ಟು ಕಳೆಗಟ್ಟುವುದು ಬಹುತೇಕ ಕಡಿಮೆಯೇ.
ಬಡವಾದ ಕುಂಬಾರರು
ವರ್ಷ ಪೂರ್ತಿ ಮಣ್ಣಿನ ವಸ್ತುಗಳನ್ನು ತಯಾರು ಮಾಡಿ ಜೀವನ ಸಾಗಿಸುವ ಕುಂಬಾರ ಕಲಾವಿದರಿಗೆ ಗಣಪತಿ ಹಬ್ಬದ ಮೂರ್ತಿ ತಯಾರಿಕೆ ಮಹತ್ವವಾದುದು. ಮಣ್ಣಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಜೀವನ ದುಸ್ಥರವಾಗಿರುವ ಈ ಕಾಲಮಾನದಲ್ಲಿ ಇವರು ಗಣೇಶನ ಮೂರ್ತಿ ತಯಾರಿಕೆಯಲ್ಲಿಯೇ ಒಂದಷ್ಟು ಹಣ ನೋಡುತ್ತಾರೆ. ಆದರೆ, ಶಿವಮೊಗ್ಗದ ಕುಂಬಾರರಿಗೆ ಕಳೆದ ಬಾರಿ ನೆರೆ ಬರೆ ಹಾಕಿದರೆ, ಈ ಬಾರಿ ಕೊರೋನಾ ಮಹಾಮಾರಿ ಸಂಕಷ್ಟ ತಂದೊಡ್ಡಿದೆ.
ಶಿವಮೊಗ್ಗದ ಪರಿಸ್ಥಿತಿಯೇನು?
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಬಿಬಿ ರಸ್ತೆಯ ಗಣಪತಿ ಮೂರ್ತಿ ಕಲಾವಿದ ಪಂಚಾಕ್ಷರಿ, ಮನೆಗಳಲ್ಲಿ ಇರಿಸುವಂತಹ ಸಣ್ಣ ಗಣಪತಿಗಳನ್ನು ಪ್ರತಿವರ್ಷ ಸುಮಾರು 400ರಷ್ಟು ಮಾಡುತ್ತಿದ್ದೆವು. ಆದರೆ, ಈ ಬಾರಿ ನಮಗೆ ಆರ್ಡರ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೇವಲ 200 ಮಾಡಿದ್ದೇವೆ. ಇದೇ ವೇಳೆ ಮಣ್ಣು, ಪೇಂಟ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ನಾವು ಮಾತ್ರವಲ್ಲ ನಮ್ಮ ಸಮುದಾಯಕ್ಕೆಲ್ಲವೂ ಹೊಡೆತ ಬಿದ್ದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕುಂಬಾರ ಗುಂಡಿಯ ಮೂರ್ತಿ ಕಲಾವಿದ ಮನೋಜ್ ಮಾತನಾಡಿ, ಕಳೆದ ವರ್ಷ ನೆರೆ ಬಂದು ನಮ್ಮ ಬದುಕು ಹಾಳಾಯಿತು. ಈ ಬಾರಿ ಕೊರೋನಾ ಕಾರಣದಿಂದ ಸಂಕಷ್ಟದಲ್ಲಿದ್ದೇವೆ. ಪ್ರತಿವರ್ಷ ಎರಡು ತಿಂಗಳ ಮುನ್ನವೇ ದೊಡ್ಡ ಗಣಪತಿಗೆ ಆರ್ಡರ್ ಬರುತ್ತಿತ್ತು. ಈ ಬಾರಿ ಕೊಟ್ಟ ಕೆಲವು ಆರ್ಡರ್’ಗಳನ್ನೂ ಸಹ ರದ್ದು ಮಾಡಿದ್ದಾರೆ. ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂಬ ಭಯ ಆರಂಭವಾಗಿದೆ ಎನ್ನುತ್ತಾರೆ.
ಭದ್ರಾವತಿಯ ಪರಿಸ್ಥಿತಿ ಎಂತು?
ಇನ್ನು ಭದ್ರಾವತಿಯ ಉಪ್ಪಾರ ಬೀದಿಯ ಮೂರ್ತಿ ಕಲಾವಿದ ಬಸವರಾಜ್ ಮಾತನಾಡಿ, ಪ್ರತಿ ವರ್ಷಕ್ಕೆ ಹೋಲಕೆ ಮಾಡಿದರೆ ಈ ಬಾರಿ ಆರ್ಡರ್ ಕಡಿಮೆಯೇ. ಮಣ್ಣು, ಪೇಂಟ್ ಸೇರಿದಂತೆ ಎಲ್ಲ ವಸ್ತಗಳ ಬೆಲೆ ಏರಿಕೆಯಾಗಿದೆ. ಹಾಗೆಂದು ನಾವು ಮೂರ್ತಿಯ ಬೆಲೆ ಏರಿಕೆ ಮಾಡಿದರೆ ಜನ ಕೊಳ್ಳುವುದಿಲ್ಲ. ನಷ್ಟದ ಬೆಲೆಗೇ ನಾವು ನೀಡಬೇಕಾದ ಪರಿಸ್ಥಿತಿಯಿದೆ. ಶಿವಮೊಗ್ಗಕ್ಕೆ ಹೋಲಿಕೆ ಮಾಡಿದರೆ ಭದ್ರಾವತಿಯಲ್ಲಿ ನಾವು ಪ್ರತಿ ವರ್ಷ ನಿಗದಿಪಡಿಸುವ ಬೆಲೆಯೂ ಸಹ ಕಡಿಮೆಯೇ. ನಮ್ಮ ಕುಲಕಸುಬನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮ್ಮಗಳ ಮೇಲೆ ಕೊರೋನಾ ದೊಡ್ಡ ಬರೆಯೇ ಎಳೆದಿದೆ ಎನ್ನುತ್ತಾರೆ.
ಐಟಿಐ ಓದಿಕೊಂಡು ಕಲಾವಿದ ವೃತ್ತಿಯನ್ನೇ ಮಾಡುತ್ತಿರುವ ಕುಂಬಾರ ಬೀದಿ ರಂಜಿತ್ ಮಾತನಾಡಿ, ಸಾಮಾನ್ಯವಾಗಿ ಪ್ರತಿವರ್ಷ 7ರಿಂದ 8 ಅಡಿಗಳವರೆಗಿನ ಗಣಪತಿಗಳು ಸುಮಾರು 25-30 ಆರ್ಡರ್ ಬರುತ್ತಿದ್ದವು. ಆದರೆ, ಈ ಬಾರಿ ಕೇವಲ 5 ಮೂರ್ತಿಗೆ ಮಾತ್ರ ಆರ್ಡರ್ ಆಗಿದೆ. ಕಳೆದ ವರ್ಷ ಜಿಎಸ್’ಟಿಯಿಂದ ಬೆಲೆ ಏರಿಕೆಯಾಯಿತು. ಈ ಬಾರಿ ಕೊರೋನಾ ಕಡೆಯಿಂದ ಬೆಲೆ ಏರಿಕೆಯಾಗಿದೆ. ಆದರೆ, ನಾವು ಮಾತ್ರ ಹಳೆಯ ಬೆಲೆಗೆ ಮಾರಬೇಕಾದ ಅನಿವಾರ್ಯತೆಯಿದೆ. ಈಗಾಗಲೇ ಸಿದ್ದಪಡಿಸಿಟ್ಟಿರುವ ಸಣ್ಣ ಗಾತ್ರದ ಗಣಪತಿಗಳು ಸಹ ಮಾರಾಟವಾಗುತ್ತವೋ ಇಲ್ಲವೇ ಎಂಬ ಭಯವೂ ಸಹ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವೂ ಸಹ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ.
ಎಷ್ಟು ಬೆಲೆ ಏರಿಕೆಯಾಗಿದೆ?
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಣ್ಣು, ಪೇಂಟ್ ಹಾಗೂ ಕಚ್ಚಾ ವಸ್ತುಗಳ ಬೆಲೆ ಶೇ.20ರಿಂದ 23ರಷ್ಟು ಏರಿಕೆಯಾಗಿದೆ. ಮಣ್ಣಿನ ಬೆಲೆಯಂತೂ ದುಪ್ಪಟ್ಟು ಹೆಚ್ಚಾಗಿದೆ. ಹೆಚ್ಚಿನ ದರ ನೀಡಿ ಕುಂಬಾರರು ಖರೀದಿ ಮಾಡಿ ಒಂದಷ್ಟು ಮೂರ್ತಿಗಳನ್ನೇನೋ ಸಿದ್ದಪಡಿಸಿದ್ದಾರೆ. ಆದರೆ, ಮಾಡಿಟ್ಟಿರುವಷ್ಟು ಖಾಲಿಯಾಗುವುದೇ ಎಂಬುದೇ ಇವರ ಚಿಂತೆಯಾಗಿದೆ.
ದೊಡ್ಡ ಮೂರ್ತಿಗಳೇ ಆಧಾರವಾಗಿತ್ತು
ಪ್ರತಿ ವರ್ಷ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪನೆ ಮಾಡುವ ದೊಡ್ಡ ಗಾತ್ರದ ಗಣಪತಿ ಮೂರ್ತಿಗಳಿಂದಲೇ ಈ ಕಲಾವಿದರಿಗೆ ಲಾಭವಾಗುವುದು. ಸಣ್ಣ ಗಾತ್ರ ಮೂರ್ತಿಗಳಲ್ಲಿ ಅಧಿಕ ಲಾಭವಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಗಣಪತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಕುಂಬಾರರಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.
ಆಡಳಿತದಿಂದ ಬೇಕಿದೆ ಸಹಾಯ
ಕೊರೋನಾ ಸಂಕಷ್ಟದಿಂದ ಕಂಗೆಟ್ಟಿದ್ದ ಬಹಳಷ್ಟು ಕ್ಷೇತ್ರಗಳ ಜನರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡುವ ಮೂಲಕ ಬೆನ್ನಿಗೆ ನಿಂತಿತ್ತು. ಆದರೆ, ಕುಂಬಾರಿಕೆ ವೃತ್ತಿಯನ್ನೇ ನಂಬಿಕೊಂಡು ಅದರಲ್ಲೂ ಗಣಪತಿ ಮೂರ್ತಿಯಿಂದ ಒಂದಷ್ಟು ದುಡಿಮೆ ಮಾಡಿಕೊಂಡು ಜೀವನ ಸಾಗಿರುವ ಕಲಾವಿದರಿಗೆ ಈ ಬಾರಿ ಕೊರೋನಾದಿಂದ ಸಂಕಷ್ಟ ಎದುರಾಗಿದೆ. ನಿಜಕ್ಕೂ ಇವರುಗಳಿಗೆ ಸಹಾಯದ ಅಗತ್ಯವಿದೆ. ಹೀಗಾಗಿ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಆಡಳಿತ ವರ್ಗ ಸಹಾಯ ಮಾಡುವ ಮೂಲಕ ಕುಂಬಾರರ ಬೆನ್ನಿಗೆ ನಿಲ್ಲಬೇಕಿದೆ.
Get In Touch With Us info@kalpa.news Whatsapp: 9481252093
Discussion about this post