ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಎನ್ಎಸ್ಯುಐ ವತಿಯಿಂದ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಲಕ್ ಜಾಥಾ ಹಾಗೂ ಬಹಿರಂಗ ಸಭೆ ನಡೆಸಲಾಯಿತು.
ಸೈನ್ಸ್ ಮೈದಾನದಲ್ಲಿ ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಸೈಕಲ್ ಜಾಥ ಗೋಪಿ ವೃತ್ತದಲ್ಲಿ ಸಮಾವೇಶಗೊಂಡು, ಬಹಿರಂಗ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೀರ್ತಿ ಗಣೇಶ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಪರ ಕಾಳಜಿ ಇಲ್ಲ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ನಿರಂತರ ಏರಿಕೆ ಮಾಡಲಾಗುತ್ತಿದೆ. ಕೋವಿಡ್ನಂತಹ ಸಂದರ್ಭದಲ್ಲೇ 80 ರೂ.ಗಳಿಗಿದ್ದ ಪೆಟ್ರೋಲ್ ಬೆಲೆ ಇಂದು 107 ರೂ.ಗೆ ಬಂದು ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಮಾತ್ರ ನಿರಂತರ ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಇದರಿಂದಾಗಿ ಮೊದಲೇ ದೈನಂದಿನ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಜನರ ಹಿತಬೇಕಾಗಿಲ್ಲ. ಜನಸಾಮಾನ್ಯರ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಅವರ ಜೀನವನ್ನು ದುಸ್ತರ ಮಾಡಿದೆ. ದೇಶದ ಇತಿಹಾಸದಲ್ಲೇ ಇಂತಹ ಜನವಿರೋಧಿ ಸರ್ಕಾರ ಮತ್ತೊಂದಿಲ್ಲ ಎಂದರು.
ಭದ್ರಾವತಿಯ ಯುವ ಮುಖಂಡ ಗಣೇಶ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಬಡವರ ಮೇಲೆ ಕಾಳಜಿ ಇಲ್ಲ. ತೈಲಬೆಲೆಯನ್ನು ನಿರಂತರ ಏರಿಕೆ ಮಾಡುತ್ತಾ ಜನಸಾಮಾನ್ಯರ ಜೀವನದ ಮೇಲೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರವೂ ಅತ್ಯಧಿಕ ಸುಂಕ ವಿಧಿಸುವ ಮೂಲಕ ಪೆಟ್ರೋಲ್ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ದೂರಿದರು.
ಮಾಜಿ ಸ್ಬೂಡಾ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾರಂಗೇಗೌಡ, ಪ್ರಮುಖರಾದ ಜಿ. ಮಧುಸೂದನ್, ಕೆ. ಚೇತನ್, ಹೆಚ್.ಎಸ್. ಬಾಲಾಜಿ, ವಿಜಯ್, ರವಿ, ಮಹಮ್ಮದ್ ನಿಹಾಲ್, ವಿನಯ್, ಗಿರಿ, ಭರತ, ಶ್ರೀಜಿತ್, ಅಬ್ದುಲ್ಲಾ, ಪುರಲೆ ಮಂಜು ಹಲವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post