ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸಗಳ ನಂತರ ಫ್ರಂಟ್‍ಲೈನ್ ವಾರಿಯರ್ಸಗಳಾಗಿರುವ ಪೊಲೀಸರು ಹಗಲಿರುಗಳು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇಂತಹವರ ಕೆಲಸವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ದೈನಂದಿನ ಅಗತ್ಯವಸ್ತುಗಳನ್ನು ವಿತರಿಸಿ ಮಾತನಾಡಿದರು.

ಪೊಲೀಸರು ಹಗಲು-ರಾತ್ರಿ ಜನಸೇವೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪೊಲೀಸರಿಗೆ ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್, ಆಕ್ಸಿಜೆನ್ ಕಾನ್ಸಂಟ್ರೇಟರ್, ಫೇಸ್‍ಶೀಲ್ಡ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಪೊಲೀಸ್ ಸೇರಿದಂತೆ ಫ್ರಂಟ್‍ಲೈನ್ ಕೊರೋನಾ ವಾರಿಯರ್ಸ್‍ಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇವರ ಬೆನ್ನಿಗೆ ಸರ್ಕಾರ ನಿಂತುಕೊಳ್ಳಬೇಕಿತ್ತು. ಆದರೆ, ಕೆಲವರು ಅವರವರ ಸುರಕ್ಷತೆ ನೋಡಿಕೊಂಡು ಮನೆಯಲ್ಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ಯಾವುದೇ ದುಡಿಮೆಯಿಲ್ಲದೇ ಬಡ, ಮಧ್ಯಮ ವರ್ಗದ ಜನ ಸಂಕಷ್ಟವನ್ನೆದುರಿಸುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಹಾಮಾರಿ ಕೋರೊನಾದಿಂದ ರಕ್ಷಿಸಿಕೊಳ್ಳಲು ಒಂದು ವ್ಯಾಕ್ಸಿನ್ ಗೆ ಖಾಸಗಿ ಆಸ್ಪತ್ರೆಗಳಲ್ಲಿ 1000 ರಿಂದ 1200 ರೂಪಾಯಿಗಳನ್ನು ವಸೂಲು ಮಾಡಲಾಗುತ್ತಿದೆ. ಕಷ್ಟದ ಸಮಯದಲ್ಲಿ ಜನರು ಇಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಇನ್ನು ದುಡಿಮೆಯಿಲ್ಲದೇ ಬಡ ಮತ್ತು ಮಧ್ಯಮ ವರ್ಗದ ಜನ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಗಳು ಸಾಲ ಮರುಪಾವತಿಗಾಗಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಸರ್ಕಾರ ಜನಸಾಮಾನ್ಯರ ನೆರವಿಗೆ ಬರಬೇಕು. ಕನಿಷ್ಠ 6 ತಿಂಗಳ ಕಾಲ ಸಾಲಗಳ ಕಂತುಗಳು ಹಾಗೂ ಬಡ್ಡಿ ವಸೂಲಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ವ್ಯಾಕ್ಸಿನ್ ಕೊರತೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವ್ಯಾಕ್ಸಿನ್ ಖರೀದಿಗೆ ಬೇಡಿಕೆಯನ್ನೇ ಇಟ್ಟಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಜನಪರ ಕಾಳಜಿಯನ್ನು ತೋರುತ್ತಿಲ್ಲ . ವ್ಯಾಕ್ಸಿನ್ ಖರೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸುಳ್ಳು ಮಾಹಿತಿ ನೀಡಿ ಉದ್ದಟತನ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರಚನೆಯನ್ನೂ ಕದ್ದುಮುಚ್ಚಿ ಮಾಡಲಾಯಿತು. ಈಗ ಮುಖ್ಯ ಮಂತ್ರಿಗಳ ಬದಲಾವಣೆಗೆ ಕದ್ದುಮುಚ್ಚಿ ಕಸರತ್ತು ನಡೆಸುತ್ತಿದ್ದಾರೆ.ಅದಕ್ಕಾಗಿ 15 ಸಚಿವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮತ್ತೆ ಕೆಲವರು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ . ಇನ್ನುಳಿದವರು ಮನೆಯಲ್ಲೇ ಇದ್ದು ತಮ್ಮ ಸುರಕ್ಷತೆ ಕಾಪಾಡಿಕೊಳ್ಳುವ ತ್ತಿದ್ದಾರೆ. ಇಂತಹವರಿಂದ ಜನರ ಹಿತ ಕಾಪಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವವರ ನೆರವಿಗೆ ಬರುವ ಸಂಸ್ಕೃತಿ ಹೊಂದಿದೆ. ಹಾಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆದೇಶದ ಮೇರೆಗೆ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಶಯದಂತೆ ಯೂತ್ ಕಾಂಗ್ರೆಸ್ ಸಂಕಷ್ಟದಲ್ಲಿರುವವರ ನೆರವಿಗೆ ನಿಂತು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















