ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಕಾರಾಗೃಹದಲ್ಲಿರುವ (Central Prison) ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ಬಂದಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಶಿವಮೊಗ್ಗ (Shivamogga) ಕಾರಾಗೃಹದ ಪ್ರವೇಶ ದ್ವಾರದಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿ ವಶಕ್ಕೆ ಪಡೆದು, ಬಳಿಕ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ಅಬ್ದುಲ್ ಮುನಾಫ್ ಅಲಿಯಾಸ್ ಮುನ್ನಾ ಎಂಬಾತನನ್ನು ಭೇಟಿಯಾಗಲು ರುಕ್ಸಾರ ಭಾನು ಹಾಗೂ ನಾಸೀರ್ ಕುರೇಷಿ ಎಂಬುವವರು ಆಗಸ್ಟ್ 5ರಂದು ಬೈಕ್‌ನಲ್ಲಿ ಕಾರಾಗೃಹದ ಪ್ರವೇಶ ದ್ವಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಕೈದಿಯೊಂದಿಗೆ ಸಂದರ್ಶನಕ್ಕೆ ತೆರಳುತ್ತಿದ್ದ ರುಕ್ಸಾರ ಭಾನು ಅವರು ತಂದಿದ್ದ ಬಟ್ಟೆಗಳನ್ನು ಕಾರಾಗೃಹದ ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ನಿಯಮಾನುಸಾರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಜೀನ್ಸ್ ಪ್ಯಾಂಟ್‌ನ ಬೆಲ್ಟ್ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಗಮ್ ಟೇಪ್ ಬಳಸಿ ಮರೆಮಾಡಿ ಸಾಗಿಸುತ್ತಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
Shivamogga : ಜೀನ್ಸ್ ಪ್ಯಾಂಟ್‌ನ ಬೆಲ್ಟ್ ಪಟ್ಟಿಯಲ್ಲಿ ವಸ್ತು ಪತ್ತೆ
ತಪಾಸಣೆ ವೇಳೆ ಜೀನ್ಸ್ ಪ್ಯಾಂಟ್‌ನ ಬೆಲ್ಟ್ ಪಟ್ಟಿಯಲ್ಲಿ ಗಮ್ ಟೇಪ್‌ನಿಂದ ಸುತ್ತಿ ಮರೆಮಾಡಿದ್ದ ಗಾಂಜಾ ಹಾಗೂ ತಂಬಾಕಿನಂತೆ ಕಾಣುವ ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Also read: ಶಿವಮೊಗ್ಗ | ಔಷಧ ಸಂಶೋಧನೆಗೆ ಎಐ ಹೊಸ ದಾರಿ: ಡಾ. ತಿಪ್ಪೇಸ್ವಾಮಿ
ವಸ್ತುಗಳನ್ನು ಮರೆಮಾಡಿ ಕಾರಾಗೃಹದೊಳಗೆ ಕೊಂಡೊಯ್ಯಲು ಯತ್ನಿಸಲಾಗಿದೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಕೂಡಲೇ ರುಕ್ಸಾರ ಭಾನು ಮತ್ತು ನಾಸೀರ್ ಕುರೇಷಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಆರೋಪಿಗಳಿಂದ ಗಾಂಜಾ ಹಾಗೂ ತಂಬಾಕಿನಂತೆ ಕಾಣುವ ವಸ್ತುಗಳ ಜತೆಗೆ ಜೀನ್ಸ್ ಪ್ಯಾಂಟ್, ಶರ್ಟ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್.ಪಿ. ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Comments 1