ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಹಬ್ಆಗಿ ಪರಿವರ್ತನೆಗೊಳ್ಳುತ್ತಿದ್ದರೂ ಕೆಎಸ್ಆರ್ಟಿಸಿಯಿಂದ ಗ್ರಾಮೀಣ ಭಾಗದಲ್ಲಿ ಸೂಕ್ತ ಬಸ್ ವ್ಯವಸ್ಥೆಯಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಖಂಡಿಸಿ ಇಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಶಿವಮೊಗ್ಗ ಗ್ರಾಮಾಂತರ ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಿಂದ ನೂರಾರು ವಿದ್ಯಾರ್ಥಿಗಳು ಶಂಕರಘಟ್ಟದ ಕುವೆಂಪು ವಿವಿಗೆ ಹೋಗುತ್ತಾರೆ. ಅದರೆ, ಇಲ್ಲಿಗೆ ಕೇವಲ ಒಂದು ಬಸ್ ವ್ಯವಸ್ಥೆ ಮಾತ್ರ ಇದೆ. ಶಿವಮೊಗ್ಗದ ಸುತ್ತಮುತ್ತಲು ಹಲವಾರು ಪ್ರದೇಶಗಳಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ದುಬಾರಿ ಪ್ರಯಾಣ ದರ ಭರಿಸಬೇಕಾಗುತ್ತಿದೆ. ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆಂದೇ ರೂಪಿಸಿರುವ ಬಸ್ಪಾಸ್ ಸೌಲಭ್ಯ ಪಡೆದುಕೊಳ್ಳಲು ಅಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಇನ್ನು ಸಾಗರ ರಸ್ತೆಯಲ್ಲಿ ಸಂಚರಿಸುವ ಬಸ್ಗಳು ವಾಜಪೇಯಿ ಬಡಾವಣೆಯ ವಿದ್ಯಾರ್ಥಿ ನಿಲಯದ ಬಳಿ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ಈ ಭಾಗದಿಂದ ಬರುವ ವಿದ್ಯಾರ್ಥಿಗಳು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದು ಮತ್ತೆ ಆಟೋ ಇಲ್ಲವೇ ಖಾಸಗಿ ಬಸ್ಗಳ ಮೂಲಕ ವಿದ್ಯಾರ್ಥಿ ನಿಲಯಕ್ಕೆ ಹೋಗಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಣ – ಸಮಯ ವ್ಯರ್ಥವಾಗುತ್ತಿದ್ದು, ತೀವ್ರ ಅನಾನುಕೂಲವಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಕೆಎಸ್ಆರ್ಟಿಸಿ ವತಿಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳ ಬಳಿ ಬಸ್ಗಳ ನಿಲುಗಡೆಗೊಳಿಸಲು ಸೂಕ್ತ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಬಸ್ ಸೌಕರ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ಕೂಡಲೇ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಎನ್ಎಸ್ಯಐ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕಾರ್ಯಧ್ಯಕ್ಷ ರವಿಕಾಟಿಕೆರೆ, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಚರಣ್, ವಿಕ್ರಂ, ರವಿ, ಅಜಯ್ ಅರಸ್,ವರುಣ್ ವಿ ಪಂಡಿತ್, ಕುಮಾರ್, ಅಶ್ವಥ್ ,ತೌಫಿಕ್, ಮಲಗೊಪ್ಪ ಶಿವು, ಗಿರಿ, ಮುರುಳಿ, ರೋಹನ್, ಕಿರಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post