ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆಧುನಿಕ ಯುಗದ ಭರಾಟೆಯಲ್ಲಿ ಕೆಲವು ಉಪನಯನ, ಮದುವೆ ಮತ್ತು ನಿಶ್ಚಿತಾರ್ಥದಂತಹ ಶುಭ ಸಮಾರಂಭಗಳಲ್ಲಿ ಸಂಸ್ಕಾರ, ಸಂಸ್ಕೃತಿ ಮರೆಯಾಗುತ್ತಿರುವುದು ವಿಷಾಧದ ಸಂಗತಿ ಎಂದು ಶ್ರೀಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮೀಜಿ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ದೈವಜ್ಞ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿ ನಂತರ ಆಶೀರ್ವಚನ ನೀಡಿದರು.
ವ್ಯಕ್ತಿಯ ಜೀವನದಲ್ಲಿ ಉಪನಯನ ಮತ್ತು ಮದುವೆ ಎಂಬುದು ಪ್ರಮುಖಘಟ್ಟ ಹಾಗೂ ಶ್ರೇಷ್ಠ ಕಾರ್ಯ. ಉಪನಯನ ಎಂದರೆ ಜೀವನ ಪರಿವರ್ತನೆ ಎಂದರ್ಥ. ಬ್ರಹ್ಮಚರ್ಯ ಪಾಲನೆ, ಉತ್ತಮ ಶಿಕ್ಷಣ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗ್ಗೆ ಉಪದೇಶ ನೀಡಲಾಗುತ್ತದೆ. ಅದೇರೀತಿ ವಿವಾಹ ಬಂಧನಕ್ಕೊಳಗಾಗುವವರಿಗೆ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿಕೊಡಲಾಗುತ್ತದೆ. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕಯುಗದ ಭರಾಟೆಯಲ್ಲಿ ಕೆಲವರು ನಿಶ್ಚಿತಾರ್ಥ ಹಾಗೂ ಇತರೆ ಸಮಾರಂಭಗಳಲ್ಲಿ ತಡರಾತ್ರಿವರೆಗೆ ಪಾರ್ಟಿ ನೆಪದಲ್ಲಿ ಮೋಜು- ಮಸ್ತಿ ನಡೆಸುತ್ತಿರುವುದು ಸರಿಯಲ್ಲ. ಕೇವಲ ಬೆರಳೆಣಿಕೆಯಷ್ಟು ಜನರು ಮಾಡುವ ತಪ್ಪಿಗೆ ಇಡೀ ಸಮಾಜಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದಕ್ಕೆ ಯಾರೂ ಅವಕಾಶ ನೀಡದೆ ನಮ್ಮ ಮೌಲ್ಯಯುತ ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿ ಆ ಮೂಲಕ ಸಮಾಜದ ಹಿರಿಮೆ ಮತ್ತು ಗೌರವವನ್ನು ಹೆಚ್ಚಿಸಿ ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಯಪರಿಪಾಲನೆಗೆ ಎಲ್ಲರೂ ಹೆಚ್ಚು ಮಹತ್ವ ನೀಡಬೇಕು. ಇದರಿಂದ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುವುದಲ್ಲದೆ, ಉದ್ದೇಶ ಪರಿಪೂರ್ಣಗೊಳ್ಳುತ್ತದೆ. ಪ್ರತಿಯೊಬ್ಬರು ಉನ್ನತ ಗುರಿ, ಆದರ್ಶದೊಂದಿಗೆ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಡಿ. ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್, ಎಚ್.ಡಿ. ಚಂದ್ರಹಾಸ್, ಪಾಂಡುರಂಗ ಶೇಟ್, ರಾಘವೇಂದ್ರ, ಸುಬ್ರಮಣಿ ಮತ್ತಿತರರು ಇದ್ದರು.
ಕರ್ನಾಟಕ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿರ್ದೇಶಕ ಬಿ.ಎನ್. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು,
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post