ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿಗೆ ಅಕ್ರಮ ಮತ್ತು ಕಳಪೆ ಮಾಂಸ ಸರಬರಾಜು ಮಾಡುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರ ಮೇಲೆ ದೌರ್ಜನ್ಯ ಎಸಗಿದ ಎಸಿಪಿ ಚಂದನ್ ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಬೆಂಗಳೂರಿಗೆ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರ ರಾಜ್ಯಗಳಿಂದ ಬೇರೆ ಬೇರೆ ರೆಸ್ಟೋರೆಂಟ್ ಮತ್ತು ಪ್ರತಿಷ್ಠಿತ ಹೋಟೆಲ್ ಗಳಿಗೆ ಬಸ್ ಮತ್ತು ರೈಲುಗಳ ಮೂಲಕ ಅಕ್ರಮ ಮಾಂಸ ಸರಬರಾಜು ಆಗುತ್ತಿದ್ದು, ಆಹಾರ ಇಲಾಖೆಯ ಎಲ್ಲಾ ನಿಯಮ ಉಲ್ಲಂಘನೆ ಮಾಡಿ ಕೆಡದಂತೆ ರಾಸಾಯನಿಕಗಳನ್ನು ಉಪಯೋಗಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ದೂರಿದರು.
ಆರೋಗ್ಯದ ದೃಷ್ಟಿಯಿಂದ ಇದು ಜೀವಕ್ಕೆ ಹಾನಿಕರವಾಗಿದ್ದು, ವಿವಿಧ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ನಲ್ಲಿ 90 ಬಾಕ್ಸ್ ಅಕ್ರಮ ಮಾಂಸ ಬಂದಿದ್ದು, ರೈಲ್ವೇ ಪಾರ್ಸೆಲ್ ಆಫೀಸಿಗೆ ಕಳುಹಿಸದೇ ಬ್ಯಾಕ್ ಗೇಟ್ ಡೆಲಿವರಿ ಮಾಡಲಾಗಿದೆ ಎಂದು ದೂರಿದರು.
Also read: ಉತ್ತಮ ಶಿಕ್ಷಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ: ನಾರಾಯಣರಾವ್ ಅಭಿಪ್ರಾಯ
ಸಾರ್ವಜನಿಕರು ಈ ಬಗ್ಗೆ ಆಹಾರ ಅಧಿಕಾರಿಗಳಿಗೆ ದೂರು ನೀಡಿದಾಗ ಅಬ್ದುಲ್ ರಜಾಕ್ ಎಂಬುವವರು ಆಕ್ಷೇಪ ವ್ಯಕ್ತಪಡಿಸಿ ಕೇವಲ ಎರಡು ಬಾಕ್ಸ್ ಸ್ಯಾಂಪಲ್ ಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಅನುಮಾನಕ್ಕೆ ಎಡೆ ಮಾಡಿದೆ. ಇದೊಂದು ಕೋಟ್ಯಂತರ ರೂ.ಗಳ ಅಕ್ರಮ ದಂಧೆಯಾಗಿದ್ದು, ಅಕ್ರಮ ಮಾರಾಟಗಾರರನ್ನು ಬಂಧಿಸಬೇಕು ಮತ್ತು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಅಕ್ರಮ ಮಾಂಸದ ದಂಧೆ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ದೂರು ನೀಡಿದ ಪುನೀತ್ ಕೆರೆಹಳ್ಳಿ ಅವರ ಮೇಲೆ ಎಸಿಪಿ ಚಂದನ್ ಕುಮಾರ್ ಅವರು ಶಾಂತಿ ಭಂಗ ಕರ್ತವ್ಯಕ್ಕೆ ಅಡ್ಡಿ ಎಂದು ಪ್ರಕರಣ ದಾಖಲಿಸಿದ್ದು, ಬಂಧಿಸಿ ಠಾಣೆಯಲ್ಲಿ ನಗ್ನ ಮಾಡಿ ವಿಡಿಯೋ ಮಾಡಿ ಬರ್ಬರವಾಗಿ ಹಲ್ಲೆ ಮಾಡಿ ಅಪಮಾನ ಮಾಡಿದ್ದಾರೆ ಎಂದರು.
ಇದು ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಚಂದನ್ ಕುಮಾರ್ ಅವರನ್ನು ಅಮಾನತುಪಡಿಸಬೇಕೆಂದು ಆಗ್ರಹಿಸಿದರು.
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಕೂಡಲೇ ರದ್ದು ಮಾಡಬೇಕು. ಶ್ರೀರಾಮಚಂದ್ರ ವನವಾಸದಲ್ಲಿದ್ದಾಗ ಒಂದು ವರ್ಷ ಕಾಲ ವಾಸವಾಗಿದ್ದ ಐತಿಹಾಸಿಕ ಸ್ಥಳ ಇದಾಗಿದ್ದು, ಸುಗ್ರೀವ ಸ್ಥಾಪನೆ ಮಾಡಿದ ರಾಮ ಮಂದಿರವೂ ಇದ್ದು ರಾಮನಗರ ಎಂದು ಹೆಸರು ಬಂದಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮರು ನಾಮಕರಣ ಮಾಡಬಾರದು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದಿಂದ ವಿಜಯ್ ರೇವಣಕರ್, ನವೀನ್, ಶಿವಶಂಕರ್ ನಾಯಕ್, ದಿನೇಶ್ ಚೌಹಾಣ್, ಮುಕುಂದ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post