ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಸ್ಕೌಟ್ ಮತ್ತು ಗೈಡ್ಸ್ ಕೇವಲ ಸಂಸ್ಥೆಯಲ್ಲ, ಅದು ಒಂದು ಜೀವನದ ಪದ್ಧತಿ, ಸೇವಾ ಮನೋಭಾವ ಗುಣಗಳನ್ನು ವಿದ್ಯಾರ್ಥಿಗಳಿಗೆ ಎಳವೆಯಿಂದಲೇ ಶಿಕ್ಷಕರು ಕಲಿಸಬೇಕಿದೆ. ಬದುಕಿನ ಸಾರ್ಥಕತೆಗೆ ಮಾನವೀಯ ಮೌಲ್ಯಗಳು ಭೂಷಣವಾಗಿವೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರೋವರ್‍ಸ್ ಮತ್ತು ರೇಂಜರ್‍ಸ್ ನೂತನ ಘಟಕಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಕೌಟ್ಸ್ ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧನೆಯನ್ನು ಮಾಡುವುದಕ್ಕೆ ಇದು ಯೋಗ್ಯವಾದ ಸಮಯ, ಸೇವೆ ಎಂಬುದು ಒಂದು ಪವಿತ್ರವಾದ ಪದ, ಅಂಕವೇ ಪ್ರಮುಖವಲ್ಲ ಅಂಕದೊಂದಿಗೆ ಜೀವನ ಮೌಲ್ಯವನ್ನು ಕಲಿಯಬೇಕಾಗಿದೆಎಂದು ಹೇಳಿದರು.
Also read: ಶಿವಮೊಗ್ಗ | ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ | ಎಸಿಪಿ ಚಂದನ್ ಕುಮಾರ್ ಅಮಾನತಿಗೆ ಆಗ್ರಹ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯರಾದ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ ತರಗತಿ ಶಿಕ್ಷಣಕ್ಕಿಂತ ಬಯಲು ಶಿಕ್ಷಣ ವಿದ್ಯಾರ್ಥಿಗಳ ಜೀವನ ನಿರ್ಮಾಣದಲ್ಲಿ ಸಹಾಯಕವಾಗಿದೆ, ಸದೃಢ ದೇಶ ನಿರ್ಮಾಣದಲ್ಲಿ ವಿದ್ಯಾವಂತ ಹಾಗೂ ಬುದ್ಧಿವಂತರ ಜೊತೆಗೆ ಪ್ರಜ್ಞಾವಂತ ಯುವಕರನ್ನು ತಯಾರಿಸುವಲ್ಲಿ ಹಾಗೂ ಸಾಮಾಜಿಕ ಕಳಕಳಿ ಮೂಡಿಸುವಲ್ಲಿ ಈ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಯಾವುದೇ ರೀತಿಯ ಕಾರ್ಯ ಚಟುವಟಿಕೆಗಳನ್ನು ನಮ್ಮ ಸಂಸ್ಥೆಯು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿಯವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರಾಜ್ಯ ಸಂಸ್ಥೆಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಜಿಲ್ಲಾ ಸಹ ಆಯುಕ್ತರಾದ ಜ್ಯೋತಿ ಪೈ, ಕಾರ್ಯದರ್ಶಿ ಆನಂದ ಅಡಿಗ, ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ರುಢಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿಯಾದ ವಿನಯ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ತಾಲೂಕು ವಿಭಾಗಗಳ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಸ್ಥೆಯ ರೇಂಜರ್ ಲೀಡರ್ ಅರ್ಥಶಾಸ್ತ್ರ ಉಪನ್ಯಾಸಕಿ ಅಭಿನಯ ಸ್ವಾಗತಿಸಿ ಸಂಸ್ಥೆಯ ವಿದ್ಯಾರ್ಥಿನಿಯರಾದ ತನುಷಾ ಜೈನ್ ಮತ್ತು ಸುದೀಕ್ಷಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕರಾದ ಉಮೇಶ್ ಬೆಳ್ಳಿಪಾಡಿ ಕಾರ್ಯಕ್ರಮ ನಿರೂಪಿಸಿ ರೋವರ್ ಲೀಡರ್ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಕೆ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post