ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿನಿತ್ಯ ನಮ್ಮ ಭಾರತೀಯ ವಿಜ್ಞಾನಿಗಳು ಒಂದಲ್ಲ ಒಂದು ಸಂಶೋಧನೆಯಲ್ಲಿ ತೊಡಗಿಸಿಕೊಂಡು, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಡಿಆರ್‌ಡಿಒ, ಐಎಸ್‌ಆರ್‌ಒ ದಂತಹ ಸಂಸ್ಥೆಗಳಿಂದ ಪ್ರತಿನಿತ್ಯ ಹೊಸಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಶಿವಮೊಗ್ಗ, ಸಹ್ಯಾದ್ರಿ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪರಿಸರ(ರಿ), ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಬಾಲ್ಯದಿಂದಲೂ ವಿಜ್ಞಾನ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇವೆ. ವಿಜ್ಞಾನ ದಿನಾಚರಣೆ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಸರ್ ಸಿ. ವಿ. ರಾಮನ್. 1986ರಲ್ಲಿಯೇ ಫ಼ೆಬ್ರವರಿ 28ನ್ನು ವಿಜ್ಞಾನ ದಿನವನ್ನಾಗಿ ಘೋಷಣೆ ಮಾಡಿದರೂ, 1987ರಿ೦ದ ಪ್ರತಿ ವರ್ಷ ಫ಼ೆಬ್ರವರಿ 28ನ್ನು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಶೀರ್ಷಿಕೆ ಜಾಗತಿಕ ಯೋಗ ಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ಎಂಬುದಾಗಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಪ್ರೊ. ಗಿರೀಶ್ ಮಾತನಾಡಿ, ಇವರು ವೈಜ್ಞಾನಿಕ ಪರಂಪರೆ ಬೆಳೆದು ಬಂದ ರೀತಿ ಮತ್ತು ನಮಗಿರುವ ಸವಾಲುಗಳು, ಅವುಗಳನ್ನು ಎದುರಿಸುವ ತಂತ್ರಜ್ಞಾನದ ಅವಶ್ಯಕತೆಗಳು, ಸಂಶೋಧನೆಯಲ್ಲಿ ಇರುವ ಅವಕಾಶಗಳನ್ನು ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ಮಾತನಾಡಿ, ಆರೋಗ್ಯ ಕ್ಶೇತ್ರದಲ್ಲಿ ಆಗಿರುವ ಸುಧಾರಣೆಗಳು ವೈಜ್ಞಾನಿಕ ಅನ್ವೇಷಣೆಗಳು ಮತ್ತು ಅದರ ಅನುಕೂಲಗಳ ಬಗ್ಗೆ ತಿಳಿಸಿದರು.
Also read: ಬಿಜೆಪಿ ಕನಿಷ್ಠ 150 ಸ್ಥಾನ ಗಳಿಸಿ ಮತ್ತೆ ಅಧಿಕಾರ ಹಿಡಿಯಲಿದೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ
ಕ.ರಾ.ವಿ.ಪ. ನಿರ್ದೇಶಕರಾದ ಇಂಜಿನೀಯರ್ ಸೋಮಶೇಖರ ಅವರು, ಸಂಶೋಧನಾ ಕ್ಷೇತ್ರದಲ್ಲಿರುವ ನ್ಯೂನ್ಯತೆಗಳು, ವೈಫಲ್ಯತೆಗಳು, ಸವಾಲುಗಳನ್ನು ಎದುರಿಸಲು ಅವಶ್ಯಕವಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪರಿಸರ(ರಿ), ಸಂಸ್ಥೆಯ ಗೌರವಾಧ್ಯಕ್ಷ ಜ್ಯೋತಿಪ್ರಕಾಶ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವ ಜನತೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಕರಾವಿಪ ಜಿಲ್ಲಾಧ್ಯಕ್ಷ ಡಾ. ನಾಗರಾಜ್ ಮಾತನಾಡಿ, ಪರಿಸರ, ಭಾರತದಲ್ಲಿ ಸಂಶೋಧನೆಗೆ ಅತಿ ಹೆಚ್ಚಿನ ಅವಕಾಶಗಳಿದ್ದು, ನಮ್ಮ ಘನ ಸರ್ಕಾರ ಗುಣಾತ್ಮಕ ಸ೦ಶೋಧನೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಪ್ರತಿ ವರ್ಷ ಕಾಡ್ಗಿಚ್ಚಿನಿಂದ ಅರಣ್ಯ ನಾಶವಾಗುತ್ತಿದ್ದು, ಇದನ್ನು ತಡೆಯಲು ಏರಿಯಲ್ ಫ಼್ಲೈಟ್ ಬಳಸುವ ಮೂಲಕ ಕಾಡಿನ ಬೆಂಕಿಯನ್ನು ಆರಿಸಿ ಜೀವ ವೈವಿಧ್ಯವನ್ನು ಉಳಿಸಬೇಕಾಗಿದೆ. ಸರ್ಕಾರವು ಸಂಶೋಧನೆಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಮ್. ಕೆ. ವೀಣಾ, ಲೋಕೇಶ್ವರಪ್ಪ, ಕರಾವಿಪ ಕಾರ್ಯದರ್ಶಿ ಉಪಸ್ಥಿತರಿದ್ದರು. ಗಾಯತ್ರಿ ಸ್ವಾಗತಿಸಿ, ಡಾ. ವೆಂಕಟೇಶ್ ವಂದಿಸಿದರು. ವಿವಿಧ ಪದವಿ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post