ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಧ್ವಾನ ಉಂಟಾಗಿತ್ತು.
ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಯಾದರೂ ಪ್ರಾರಂಭವಾಗಲಿಲ್ಲ. ಇದರ ಮಧ್ಯೆ ಸಂಸದ ಬಿ.ವೈ. ರಾಘವೇಂದ್ರ ಅವರು ಅವಸರ ಅವಸರದಲ್ಲಿ ಬಂದರು. ಅವರನ್ನು ಗಂಗಾಮತಸ್ಥ ಸಮಾಜದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ರಾಘವೇಂದ್ರ ಅವರು ಬಂದ ತಕ್ಷಣವೇ ಗಾಯನ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರಿಗೆ ಗಾಯನ ನಿಲ್ಲಿಸಿ ಎಂದು ಆಯೋಜಕರು ಹೇಳಿದರು. ಅವರು ಅರ್ಧಕ್ಕೆ ಹಾಡನ್ನು ನಿಲ್ಲಿಸಿದ್ದೂ ಆಯಿತು. ರಾಘವೇಂದ್ರ ಅವರು ಸಭಾ ಕಾರ್ಯಕ್ರಮ ಆರಂಭಿಸುವ ಮೊದಲೇ ನೇರವಾಗಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದೀಪ ಹಚ್ಚಲಿಲ್ಲ, ಕಾರ್ಯಕ್ರಮ ಉದ್ಘಾಟನೆ ಮಾಡಲಿಲ್ಲ. ಯಾರೂ ವೇದಿಕೆಯಲ್ಲಿ ಕುಳೀತುಕೊಳ್ಳಲಿಲ್ಲ. ರಾಘವೇಂದ್ರ ಅವರೇ ನೇರವಾಗಿ ಮೈಕ್ ಹತ್ತಿರ ಬಂದು ಚೌಡಯ್ಯನವರ ಬಗ್ಗೆ ನಾಲ್ಕು ಮಾತನಾಡಿ ನನಗೆ ತುಂಬಾ ಕೆಲಸವಿದೆ ಎಂದು ಹೊರಟು ಹೋದರು. ಈ ವೇಳೆ ಕಾರ್ಯಕ್ರಮ ಮುಗಿದಿರಬೇಕೆಂದು ಕೆಲವರು ಸಭಾಂಗಣದಿಂದ ಹೊರನಡೆದರು.
Also read: ವಿಐಎಸ್’ಎಲ್ ಮುಚ್ಚದಂತೆ ಚುರುಕುಗೊಂಡ ಹೋರಾಟ: ನಗರದಲ್ಲಿ ವ್ಯಾಪಕ ಬೆಂಬಲ
ಆದರೆ, ಕಾರ್ಯಕ್ರಮ ಮುಗಿದಿರಲಿಲ್ಲ. ನಂತರ ಮತ್ತೆ ಶಾಸಕ ಕೆ.ಎಸ್. ಈಶ್ವರಪ್ಪನವರಿಗಾಗಿ ಕಾಯಲಾಯಿತು. ಮತ್ತೊಮ್ಮೆ ಸಮಾಜದ ಸುಮಂಗಲಿಯರು ಪೂರ್ಣಕುಂಭದೊಂದಿಗೆ ಈಶ್ವರಪ್ಪ ಸ್ವಾಗತಿಸಿದರು. ಈಶ್ವರಪ್ಪ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹೀಗೆ ಒಂದರ ಹಿಂದೆ ಒಂದು ಅಧ್ವಾನ ಉಂಟಾಗಿ ಕಾರ್ಯಕ್ರಮದಲ್ಲಿ ಗೊಂದಲವಾಗಿತ್ತು.
ಇತ್ತೀಚೆಗೆ ಮಹನೀಯರ ಜಯಂತಿಗಳ ಕಾರ್ಯಕ್ರಮಗಳು ಕೂಡ ಬೇಕಾಬಿಟ್ಟಿಯಾಗಿ ನಡೆಯುತ್ತಿವೆ. ಜಾತಿಯ ಕಾರ್ಯಕ್ರಮಗಳಾಗಿ ಮಾರ್ಪಡುತ್ತಿರುವುದು ಇನ್ನೂ ವಿಪರ್ಯಾಸ. ಎಷ್ಟು ಜನ ಸೇರಿದ್ದಾರೆ ಎಂದು ತಲೆಎಣಿಸಿ ಬರುವ ಜನಪ್ರತಿನಿಧಿಗಳು ಆಲಸ್ಯ ತೋರುವುದು ಮತ್ತೊಂದು ಕಡೆ. ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರೂ ಜನಪ್ರತಿನಿಧಿಗಳು ಇಂತಹ ಕಾರ್ಯಕ್ರಮಕ್ಕೆ ಬರದೇ ನಿರ್ಲಕ್ಷ್ಯ ತೋರುತ್ತಾರೆ. ಇಡೀ ರಂಗಮಂದಿರ ಖಾಲಿ ಖಾಲಿಯಾಗಿ ಇದ್ದುದು ಇದೆ. ಎಲ್ಲಾ ಜಯಂತಿ ಕಾರ್ಯಕ್ರಮಗಳಿಗೂ ಹಣ ಬಿಡುಗಡೆ ಮಾಡುತ್ತದೆ. ಆದರೆ, ಇದರ ಪ್ರಯೋಜನವಾಗುತ್ತಿಲ್ಲ. ಕಾಟಾಚಾರಕ್ಕಾಗಿ ನಡೆಯುತ್ತಿರುವ ಜಯಂತಿಗಳು ಮಹನೀಯರು, ಮಹಾಪುರುಷರಿಗೆ ಒಂದು ರೀತಿಯಲ್ಲಿ ಅವಮಾನ ಮಾಡಿದಂತಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post