ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊರೋನಾ ಮೂರನೇ ಅಲೆ ಹರಡುವುದನ್ನು ನಿಯಂತ್ರಿಸಲು ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯ ಸರ್ಕಾರ ವಾರಾಂತ್ಯ ಲಾಕ್‌ಡೌನ್ ಜಾರಿ ಮಾಡಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರತಿನಿತ್ಯ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ಮಾಲ್ ಮತ್ತು ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿತ್ತು. ತರಕಾರಿ ಮಾರುಕಟ್ಟೆಯಲ್ಲಿ ಎಂದಿಗಿಂತ ಗ್ರಾಹಕರ ಸಂಖ್ಯೆ ಅತ್ಯಂತ ವಿರಳವಾಗಿತ್ತು.

ಬೆಳಗ್ಗೆಯಿಂದಲೇ ಪೊಲೀಸರು ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದು, 10ಗಂಟೆಯ ನಂತರ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಿಸುತ್ತಿದ್ದ ದೃಶ್ಯ ಕಂಡುಬಂದಿತು.

ಹೋಟೆಲ್, ಮೆಡಿಕಲ್ ಶಾಪ್, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬಸ್, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗುರುತಿನ ಚೀಟಿಯನ್ನು ಹೊಂದಿದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿದ್ದು, ಎಂದಿನಂತೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಜೌಷಧಿ, ಸಿಲಿಂಡರ್, ದಿನಸಿ ಅಂಗಡಿಗಳು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಉಳಿದಂತೆ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳು, ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















