ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳಾ ಮೀಸಲಾತಿ ಮಸೂದೆಯನ್ನು Women’s Reservation Bill ವಿಫಲಗೊಳಿಸಿರುವ ಕಾಂಗ್ರೇಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ವಿಪಕ್ಷಗಳ ವಿರುದ್ದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ MP Raghavendra ವಾಗ್ದಾಳಿ ನಡೆಸಿದ್ದಾರೆ.
ಇಂದು ಬಿಜೆ ಪಿ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಗೆ ಅನುಮೋದನೆ ಮತ್ತು ಕ್ಷೇತ್ರ ವಿಂಗಡಣೆಯ ಸಂವಿಧಾನಿಕ ತಿದ್ದುಪಡಿಯಿಂದ ದೇಶದ ಮಹಿಳೆಯರಿಗೆ ಸಮಾನತೆ ತರುವ ಕೆಲಸ ನಡೆದಿತ್ತು. ಆದರೆ ಇದನ್ನು ಕಾಂಗ್ರೆಸ್ ನೇತೃತ್ವದ ಐಎನ್‌ಡಿಎ ಕೂಟ ಸೋಲಿಸುವ ಮೂಲಕ ಸಂಭ್ರಮಿಸಿದೆ. ಇದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ. ಇದನ್ನು ದೇಶದ ಮಹಿಳೆಯರು ಮರೆಯುವುದಿಲ್ಲ ಎಂದರು.
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಜನಧನ್. ಜಿಎಸ್‌ಟಿ, ಜಮ್ಮುಕಾಶ್ಮೀರ ಹೀಗೆ ಹಲವಾರು ವಿಷಯಗಳಲ್ಲಿ ವಿರೋಧಿಸುತ್ತಲೆ ಬಂದಿವೆ ಎಂದು ಆರೋಪ ಮಾಡಿದ ಸಂಸದ ಬಿ.ವೈ ರಾಘವೇಂದ್ರ ಅವರು, ಮಹಿಳಾ ಮೀಸಲಾತಿ ಮಸೂದೆಯಿಂದ ಬಿಜೆಪಿಗೆ ಕ್ರೆಡಿಟ್ ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಸೋಲಿಸಲಾಗಿದೆ ಎಂದರು.
ಹೊಸನಗರ ಕ್ಷೇತ್ರ ಕುರಿತು ಲೋಕಸಭೆಯಲ್ಲಿ ಮಾತನಾಡಿದ್ದು, ಪಶ್ಚಿಮಘಟ್ಟದ ರಾಜ್ಯಗಳ ಜಿಲ್ಲೆಗಳಲ್ಲಿ ಜನಸಂಖ್ಯೆ ಆಧರಿಸದೆ ಪ್ರಾದೇಶಿಕ ಮಿತಿಯನ್ನು ಆಧರಿಸಿ ಕ್ಷೇತ್ರ ವಿಂಗಡಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗಧೀಶ್, ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಾಧ್ಯಮ ಪ್ರಮುಖ ಎಸ್ . ಚಂದ್ರಶೇಖರ್, ರಶ್ಮಿ ಶ್ರೀನಿವಾಸ್, ಸುರೇಖಾಮುರಳೀಧರ, ಹರಿಕೃಷ್ಣ, ಕಾಮತ್, ಮಾಲತೇಶ್, ಮಂಜುನಾಥ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
