ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಲಿತರನ್ನು, ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರ ಎಸ್‍ಐಆರ್‌ನಲ್ಲಿ ಅಡಗಿದೆ. ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶವನ್ನು ಧಮನ ಮಾಡಲು ಮೋದಿ ಮತ್ತು ಅಮಿತ್ ಷಾ ಸಿದ್ದರಾಗಿದ್ದು, ಇದು ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಅತ್ಯಾಚಾರವಾಗಿದೆ. ಕೇಂದ್ರ ಸರ್ಕಾರ ಕೇವಲ ಒಂದು ತಿಂಗಳ ಅವಧಿಯಲ್ಲಿ ಎಸ್‍ಐಆರ್ ಮಾಡಲು ಹೊರಟಿದೆ. ಇದರಿಂದ ಈ ದೇಶದ ಭವಿಷ್ಯವನ್ನು ರೂಪಿಸುವ ಅಲ್ಪಸಂಖ್ಯಾತರು ಮತ್ತು ದಲಿತರ ಹಕ್ಕನ್ನು ಕಸಿದಂತಾಗುತ್ತಿದೆ. ಕನಿಷ್ಟ ಆರು ತಿಂಗಳಾದರೂ ಕಾಲಾವಕಾಶ ನೀಡಿದರೆ ಉತ್ತಮವಾಗಿರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಇಷ್ಟೊಂದು ಆತುರದ ನಿರ್ಧಾರವೂ ಅನುಮಾನ ಮೂಡಿಸುತ್ತಿದೆ ಎಂದರು.
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಈ ಎಸ್‍ಐಆರ್ ಪ್ರಕ್ರಿಯೆಯಿಂದ 91ಲಕ್ಷ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. 21 ಲಕ್ಷ ಮತದಾರರ ತಕರಾರು ಇನ್ನೂ ಇದೆ. ಎಸ್‍ಐಆರ್‌ನ್ನು ನಾವು ವಿರೋಧಿಸುವುದಿಲ್ಲ. ಆದರೆ ಇದಕ್ಕಾಗಿ ಕೇವಲ ಒಂದು ತಿಂಗಳ ಕಾಲಾವಕಾಶವನ್ನು ಏಕ ಕೊಡಬೇಕು? ಈ ಬಾರಿಯ ಚುನಾವಣೆಗೆಯೇ ಮತದಾರರ ಪಟ್ಟಿಯನ್ನು ಸಿದ್ಧಮಾಡಲು ಸಾಧ್ಯವೇ ? ಎಲ್ಲಾ ಮುಗಿದ ಮೇಲೆ ಮುಂದಿನ ಚುನಾವಣೆಗೆ ಇದನ್ನು ಮಾಡಬಹುದಲ್ಲವೇ. ತಕರಾರು ಸಲ್ಲಿಸಲು ಅವಕಾಶವಿದ್ದರೂ ಕೂಡ ಈ ದೇಶದ ಅತ್ಯಂತ ಹಿಂದುಳಿದ, ಅಲ್ಪಸಂಖ್ಯಾತರಿಗೆ, ದಲಿತರಿಗೆ ಈ ಮಾಹಿತಿಯಾದರೂ ಹೇಗೆ ತಲುಪಲು ಸಾಧ್ಯ? ಚುನಾವಣಾ ಆಯೋಗ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಹೆಸರು ಸಾಮ್ಯತೆ ಇಲ್ಲದಿದ್ದರೆ ಅಥವಾ ಕನ್ನಡ ಕಾಗುಣಿತ ಇಂಗ್ಲೀಷ್ ಸ್ಪೆಲಿಂಗ್‍ನಲ್ಲಿ ವ್ಯತ್ಯಾಸವಾದರೂ ಕೂಡ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಹಾಗಾಗಿ ಎಸ್‍ಐಆರ್ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷವಾದರೂ ಸಮಯ ಬೇಕಾಗುತ್ತದೆ ಎಂದರು.
ಎಸ್‍ಐಆರ್ ಮೂಲಕ ಮತದಾರರ ಪಟ್ಟಯಿಂದ ಜನರನ್ನು ಆಚೆ ಇಡುವಂತಹ ದುರ್ಗುಣ ಪ್ರಯತ್ನ ಮಾಡಲಾಗಿದ್ದು, ಇಂತಹ ಕೆಟ್ಟ ಆಲೋಚನೆಗಳು ಬಿಜೆಪಿಗೆ ಮಾತ್ರ ಬರುವುದು. ನ್ಯಾಯಾಲಯವು ಕೂಡ ಬಿಜೆಪಿಯೊಂದಿಗೆ ಸೇರಿಕೊಂಡು ಜನ ವಿರೋಧಿ ಕೆಲಸಕ್ಕೆ ಸಹಕಾರ ನೀಡುತ್ತಿದೆ. ಇದರಿಂದ ಜನರಿಗೂ ನ್ಯಾಯಾಲಯದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದೆ. ಅದರಂತೆ ಬಿಜೆಪಿಯ ಪರವಾದ ಕ್ರಿಮಿನಲ್ ಕೇಸ್‍ನಲ್ಲಿ ತೀರ್ಪನ್ನು ನೀಡಿರುವ ನ್ಯಾಯಾಧೀಶರೆಲ್ಲಾ ಇಂದಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನವನ್ನು ಪಡೆದಿದ್ದಾರೆ. ಚುನಾವಣಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸುಪ್ರಿಂಕೋರ್ಟ್ ನ್ಯಾಯಾಧೀಶರನ್ನು ಕೈಬಿಟ್ಟಿರುವುದಾದರೂ ನೇಮಕ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಬಿಜೆಪಿ ಜಾತಿ ಮತ್ತು ಧರ್ಮವನ್ನು ರಾಜಕೀಯಕ್ಕೆ ತಂದು ರಾಜಕಾರಣ ವ್ಯವಸ್ಥೆಯನ್ನು ಆಳು ಮಾಡುತ್ತಿದ್ದು, ಈ ದೇಶವನ್ನು ಇನ್ನೊಂದು ಅಫ್ಘಾನಿಸ್ತಾನ್ ಹಾಗೂ ತಾಲಿಬಾನ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಪ್ರಮುಕರಾದ ಶಿವಕುಮಾರ್, ಇಸ್ಮಾಯಿಲ್‍ಖಾನ್, ಶ್ವೇತಾಬಂಡಿ, ಸೈಯದ್ ವಾಹಿದ್ ಅಡ್ಡು, ಯು.ಶಿವಾನಂದ್, ಎಸ್.ಟಿ.ಹಾಲಪ್ಪ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















